ನವದೆಹಲಿ: ಕೆನ್ ಹಾಗೂ ಬೆಟ್ವಾ ನದಿಗಳ ಜೋಡಣೆಗೆ ಸಂಬಂಧಿಸಿದ ಮಹತ್ವದ ಒಪ್ಪಂದಕ್ಕೆ ಕೇಂದ್ರ ಜಲಶಕ್ತಿ ಸಚಿವಾಲಯ, ಮಧ್ಯಪ್ರದೇಶ ಮತ್ತು ಉತ್ತರಪ್ರದೇಶ ಸರ್ಕಾರಗಳು ಸೋಮವಾರ ಸಹಿ ಹಾಕಿದವು.
ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ನದಿ ಜೋಡಣೆ ಒಪ್ಪಂದಕ್ಕೆ ಸಹಿ ಹಾಕಿದರು.
ದೌಧನ್ ಅಣೆಕಟ್ಟು ನಿರ್ಮಿಸಿ, ಕೆನ್ ನದಿಯಿಂದ ಬೆಟ್ವಾ ನದಿಗೆ ನೀರು ಹರಿಸುವುದು, ಎರಡು ನದಿಗಳನ್ನು ಸಂಪರ್ಕಿಸುವ ಕಾಲುವೆ ನಿರ್ಮಾಣ, ಲೋವರ್ ಓಆರ್‌ಆರ್ ಯೋಜನೆ, ಕೋಥಾ ಬ್ಯಾರೇಜ್ ಮತ್ತು ಬಿನಾ ಕಾಂಪ್ಲೆಕ್ಸ್ ನಿರ್ಮಾಣ ಸೇರಿದಂತೆ ವಿವಿಧೋದ್ದೇಶ ಯೋಜನೆಗಳನ್ನು ಇದು ಒಳಗೊಂಡಿದೆ.
ಈ ಯೋಜನೆಯಿಂದ ವಾರ್ಷಿಕ 10.62 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದ್ದು, ಸುಮಾರು 62 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಕೆಯಾಗುತ್ತದೆ. ಜತೆಗೆ, 103 ಮೆಗಾವಾಟ್ ಜಲವಿದ್ಯುತ್ ಉತ್ಪಾದನೆಯಾಗುತ್ತದೆ.
ಈ ಯೋಜನೆಯು ನೀರಿನ ಕೊರತೆಯಿಂದ ಬಳಲುತ್ತಿರುವ ಬುಂದೇಲ್‌ಖಂಡ್‌ನ ಪ್ರದೇಶಕ್ಕೆ, ವಿಶೇಷವಾಗಿ ಪನ್ನಾ, ಟಿಕಮ್‌ಗಡ, ಛತ್ತರ್‌ಪುರ್, ಸಾಗರ್, ದಮೋಹ್, ದಾಟಿಯಾ, ವಿದಿಶಾ, ಶಿವಪುರಿ ಮತ್ತು ಮಧ್ಯಪ್ರದೇಶದ ರೈಸನ್ ಮತ್ತು ಉತ್ತರ, ಬಾಂಡಾ, ಮಹೋಬಾ, ಝಾನ್ಸಿ ಮತ್ತು ಲಲಿತಪುರ ಜಿಲ್ಲೆಗಳಿಗೆ ಪ್ರಯೋಜನವಾಗಲಿದೆ ಎಂದು ಪ್ರಧಾನಿ ಕಚೇರಿಯ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.