ನವದೆಹಲಿ: ದೇಶದ ಪ್ರಜಾಪ್ರಭುತ್ವ ಟೀಕಿಸಿರುವ ರಾಹುಲ್ ಗಾಂಧಿ ಕ್ಷಮೆಯಾಚಿಸಲೇಬೇಕೆಂದು ಆಡಳಿತರೂಢ ಬಿಜೆಪಿ ಬಿಗಿಪಟ್ಟು ಹಿಡಿದಿದೆ; ಇದಕ್ಕೆ ಪ್ರತಿಯಾಗಿ ವಿಪಕ್ಷಗಳು, ಮೋದಿ ಅವರ ಹೇಳಿಕೆಗಳೂ ಚರ್ಚೆಗೆ ಬರಲಿ, ಅದಾನಿ ಸಮೂಹದ ವಿರುದ್ಧದ ಆರೋಪಗಳ ಜೆಪಿಸಿ ತನಿಖೆ ಆಗಲೇಬೇಕೆಂದು ಸರ್ಕಾರದ ವಿರುದ್ಧ ಪ್ರತ್ಯಸ್ತ್ರ ಹೂಡಿವೆ. ಇದರಿಂದಾಗಿ ಮಂಗಳವಾರ ಕೂಡ ಸಂಸತ್ ಕಲಾಪಗಳು ಯಾವುದೇ ಗಂಭೀರ ವಿಷಯಗಳ ಚರ್ಚೆ ಕಾಣದೆ, ದಿನದ ಮಟ್ಟಿಗೆ ಮುಂದೂಡಲ್ಪಟ್ಟವು.
ಬ್ರಿಟನ್ ಪ್ರವಾಸದ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಲಂಡನ್‌ನಲ್ಲಿ ಭಾಷಣ ಮಾಡುವಾಗ ‘ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ದೇಶದ ಪ್ರಜಾಪ್ರಭುತ್ವ ಉಳಿಸಲು ವಿದೇಶಿ ಶಕ್ತಿಗಳು ಮಧ್ಯಪ್ರವೇಶಿಸಬೇಕು’ ಎಂದು ನೀಡಿರುವ ಹೇಳಿಕೆಯನ್ನು ಖಂಡಿಸಿದ ಬಿಜೆಪಿ, ರಾಹುಲ್ ದೇಶದ ಕ್ಷಮೆಯಾಚಿಸಬೇಕೆಂದು ಬಜೆಟ್ ಅಧಿವೇಶನದ ಎರಡನೇ ಹಂತದ ಚರ್ಚೆಯ, ಎರಡನೇ ದಿನದ ಕಲಾಪದಲ್ಲೂ ಮುಂದುವರಿಸಿತು.
ರಾಹುಲ್ ಬೆನ್ನಿಗೆ ನಿಂತಿರುವ ವಿಪಕ್ಷಗಳ ಸದಸ್ಯರು, ಆಡಳಿತ ಪಕ್ಷದ ಸದಸ್ಯರ ಬಾಯಿ ಮುಚ್ಚಿಸಲು ಪ್ರಧಾನಿ ಮೋದಿ ತಮ್ಮ ಅಧಿಕೃತ ವಿದೇಶಿ ಪ್ರವಾಸಗಳಲ್ಲಿ ದೇಶಕ್ಕೆ ಅಗೌರವ ತರುವಂತೆ ನೀಡಿರುವ ಹೇಳಿಕೆಗಳನ್ನು ಉಲ್ಲೇಖಿಸುತ್ತಲೇ, ಅದಾನಿ ಸಮೂಹದ ವಂಚನೆಯ ಸಂಬಂಧ ಹಿಂಡೆನ್ ಬರ್ಗ್ ರಿಸರ್ಚ್ ಸಂಸ್ಥೆ ಪ್ರಕಟಿಸಿದ ವರದಿಯ ಬಗ್ಗೆ ಜೆಪಿಸಿ ತನಿಖೆ ನಡೆಸಬೇಕೆಂಬ ತಮ್ಮ ಬೇಡಿಕೆಯನ್ನು ಸರ್ಕಾರದ ವಿರುದ್ಧ ದಾಳಿಗೆ ಪ್ರತ್ಯಸ್ತ್ರವಾಗಿ ಬಳಸಿದರು.
ಬೆಳಿಗ್ಗೆ ಸಂಸತ್‌ನ ಎರಡೂ ಸದನಗಳಲ್ಲಿ ಕಲಾಪ ಸೇರುತ್ತಿದ್ದಂತೆ, ಆಡಳಿತ ಪಕ್ಷದ ಸಾಲಿನಲ್ಲಿ ರಾಹುಲ್ ಕ್ಷಮೆ ವಿಚಾರ ಮತ್ತು ವಿಪಕ್ಷಗಳ ಸಾಲಿನಲ್ಲಿ ಮೋದಿಯವರ ಹಳೆ ಭಾಷಣದ ಹೇಳಿಕೆಗಳೇ ಪ್ರತಿಧ್ವನಿಸಿದವು. ಪರಸ್ಪರರ ವಿರುದ್ಧ ಘೋಷಣೆಗಳನ್ನು ಹಾಕಿದರು.
ರಾಜ್ಯಸಭೆಯಲ್ಲಿ ಆಸ್ಕರ್ ಪ್ರಶಸ್ತಿ ವಿಜೇತರಿಗೆ ಅಭಿನಂದನೆ ಸಲ್ಲಿಸಿದ ನಂತರ ಸದನದ ನಾಯಕ ಪೀಯೂಷ್ ಗೋಯೆಲ್, ರಾಹುಲ್ ಹೆಸರು ಉಲ್ಲೇಖಿಸಿದೇ, ‘ಸಂಸತ್‌ನ್ನು ಅವಮಾನಿಸಿರುವ ಅವರು ಕ್ಷಮೆ ಕೇಳಬೇಕು’ ಎಂದರು. ಇದು ವಿಪಕ್ಷಗಳ ಸದಸ್ಯರನ್ನು ಕೆರಳಿಸಿತು. ಎದ್ದುನಿಂತ ವಿಪಕ್ಷಗಳ ಸದಸ್ಯರು, ಅದಾನಿ ಸಮೂಹದ ಹಗರಣ ಜೆಪಿಸಿ ತನಿಖೆಯಾಗಬೇಕೆಂದು ಘೋಷಣೆ ಕೂಗಿದರು.
ಅದಾನಿ ಸಮೂಹದ ಕಂಪನಿಗಳ ಭ್ರಷ್ಟಾಚಾರ ಮತ್ತು ಆರ್ಥಿಕ ದುರುಪಯೋಗದ ಆರೋಪಗಳ ತನಿಖೆಗೆ ಜೆಪಿಸಿ ರಚಿಸಲು ಸರ್ಕಾರ ವಿಫಲವಾಗಿದೆ. ಇದು ಚರ್ಚೆಯಾಗಬೇಕೆಂದು ಕಾಂಗ್ರೆಸ್‌ನ ಏಳು ಸಂಸದರು ನೀಡಿದ್ದ ನೋಟಿಸ್‌ಗಳನ್ನು ಸಭಾಪತಿ ತಿರಸ್ಕರಿಸಿದರು. ‘ಹಿಂಡನ್‌ಬರ್ಗ್ ರಿಸರ್ಚ್’ ಸಂಸ್ಥೆಯ ವರದಿ ಚರ್ಚೆಗೆ ಬಿಆರ್‌ಎಸ್ ಸಂಸದ ಕೆ. ಕೇಶವರಾವ್ ಮತ್ತು ಎಎಪಿಯ ಸಂಜಯ್ ಸಿಂಗ್ ಅವರು ನೀಡಿದ್ದ ನೋಟಿಸ್‌ಗಳನ್ನೂ ಸಭಾಪತಿ ತಿರಸ್ಕರಿಸಿದರು.
ತ್ರಿಪುರಾದ ಚುನಾವಣೋತ್ತರ ಹಿಂಸಾಚಾರ, ಆನ್‌ಲೈನ್ ಜೂಜಾಟ ನಿಷೇಧದ ಕುರಿತು ಚರ್ಚೆಗೆ ಕೋರಿದ್ದ ಸಿಪಿಐನ ವಿನಯ್ ವಿಶ್ವಂ ಮತ್ತು ಪಿ. ಸಂತೋಷ್ ಕುಮಾರ್ ಅವರ ನೋಟಿಸ್‌ಗಳನ್ನು ಹಾಗೂ ತಮಿಳುನಾಡಿನಲ್ಲಿ ಆನ್‌ಲೈನ್ ಗೇಮ್‌ಗಳ ನಿಯಂತ್ರಿಸುವ ಸಂಬಂಧ ಡಿಎಂಕೆಯ ಪಿ. ವಿಲ್ಸನ್ ನೀಡಿದ್ದ ನೋಟಿಸ್‌ನ್ನೂ ಧನಕರ್ ತಿರಸ್ಕರಿಸಿದರು.
‘ಆಸ್ಕರ್ ವಿಜೇತರನ್ನು ಅಭಿನಂದಿಸಲು ಇದು ವಿಶೇಷ ಸಂದರ್ಭ. ಸದಸ್ಯರ ನೋಟಿಸ್‌ಗಳನ್ನು ಚರ್ಚೆಗೆ ತೆಗೆದುಕೊಳ್ಳಲಾಗದ ದಿನವೆಂದು ಭಾವಿಸಿ, ಅವುಗಳನ್ನು ತಿರಸ್ಕರಿಸಲಾಗಿದೆ’ ಎಂದು ಧನಕರ್ ಸ್ಪಷ್ಟನೆ ನೀಡಿದರು. ಆಗ, ಕಾಂಗ್ರೆಸ್ ಮತ್ತು ಎಎಪಿಯ ಕೆಲವು ಸಂಸದರು ಸಭಾಪತಿಯ ಮುಂದಿನ ಆವರಣಕ್ಕೆ ಇಳಿದು ಘೋಷಣೆ ಹಾಕಿದರು.
‘ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಸಂಸತ್ತಿನ ಭಾಗ. ಎರಡೂ ಸದನಗಳನ್ನು ಅವಮಾನಿಸಲಾಗಿದೆ. ಇಡೀ ಸಂಸತ್ತನ್ನು ಅವಮಾನಿಸಿರುವುದು ಇದೇ ಮೊದಲ ಬಾರಿ ನೋಡುತ್ತಿದ್ದೇವೆ’ ಎಂದು ಗೋಯೆಲ್ ಕಿಡಿಕಾರಿದರು. ಗದ್ದಲ ನಿಯಂತ್ರಣಕ್ಕೆ ಬಾರದಿದ್ದಾಗ ಧನಕರ್ ಕಲಾಪವನ್ನು ಮಧ್ಯಾಹ್ನ 2 ಗಂಟೆವರೆಗೆ ಮುಂದೂಡಿದರು.
ಮಧ್ಯಾಹ್ನ ಮತ್ತೆ ರಾಜ್ಯಸಭೆ ಕಲಾಪ ಸೇರಿದಾಗ, ಗೋಯೆಲ್ ಮತ್ತೊಮ್ಮೆ ಈ ವಿಷಯ ಎತ್ತಿದರು. ಆದರೆ, ಕಾಂಗ್ರೆಸ್ ಉಪನಾಯಕ ಪ್ರಮೋದ್ ತಿವಾರಿ, ವಿದೇಶದಲ್ಲಿ ಮೋದಿ ನೀಡಿರುವ ಹೇಳಿಕೆಗಳು ಸಹ ಚರ್ಚಿಸುವಂತೆ ಬೇಡಿಕೆ ಇಟ್ಟರು.
ಲೋಕಸಭೆ ಸಂಸದರ ವಿರುದ್ಧ ರಾಜ್ಯಸಭೆಯಲ್ಲಿ ಆರೋಪ ಮಾಡಲು ನಿಯಮಗಳಲ್ಲಿ ಅವಕಾಶವಿಲ್ಲ. ರಾಹುಲ್ ಗಾಂಧಿ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಗೋಯೆಲ್ ವಿರುದ್ಧ ಹಕ್ಕುಚ್ಯುತಿ ನೋಟಿಸ್ ನೀಡಿರುವುದಾಗಿ ಕಾಂಗ್ರೆಸ್‌ನ ಶಕ್ತಿ ಸಿನ್ಹಾ ಹೇಳಿದರು.
ಗೋಯೆಲ್ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಎತ್ತಿರುವ ಈ ವಿಷಯ ಸಂಬಂಧ ಹಿರಿಯ ನಾಯಕರೊಂದಿಗೆ ಚರ್ಚಿಸಲಾಗಿದೆ. ಇದರಲ್ಲಿ ಅಂತಿಮ ನಿರ್ಧಾರಕ್ಕೆ ಬರುವ ಮೊದಲು ಚರ್ಚೆಗೆ ಸಭೆ ಕರೆದಿರುವುದಾಗಿ ಧನಕರ್ ಹೇಳಿದರು. ಆದಾಗ್ಯೂ, ಎರಡೂ ಕಡೆಗಳಲ್ಲೂ ಪ್ರತಿಭಟನೆ ಮುಂದುವರಿಸಿದ್ದರಿಂದ ದಿನದ ಮಟ್ಟಿಗೆ ಕಲಾಪವನ್ನು ಸಭಾಪತಿ ಮುಂದೂಡಿದರು.
ಇದೇ ರೀತಿ ಸನ್ನಿವೇಶಕ್ಕೆ ಲೋಕಸಭೆಯೂ ಸಾಕ್ಷಿಯಾಯಿತು. ಸದಸ್ಯರ ಕೋಲಾಹಲದಿಂದಾಗಿ ಮೊದಲಾರ್ಧದ ಕಲಾಪವನ್ನು ಕೆಲ ನಿಮಿಷ ಮುಂದೂಡಲಾಗಿತ್ತು. ಮಧ್ಯಾಹ್ನ 2 ಗಂಟೆಗೆ ಸದನ ಮತ್ತೆ ಸೇರಿದಾಗ, ಅದೇ ಸ್ಥಿತಿ ಮರುಕಳಿಸಿತು. ಇದರಿಂದ ಕಲಾಪವನ್ನು ದಿನದ ಮಟ್ಟಿಗೆ ಸ್ಪೀಕರ್ ಮುಂದೂಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.