ನವದೆಹಲಿ: ಸಂಯೋಜಿತ ನಗರ ಪ್ರವಾಹ ನಿರ್ವಹಣಾ ಕಾರ್ಯಕ್ರಮದಡಿ ಕೇಂದ್ರ ಸರ್ಕಾರವು ತಮಿಳುನಾಡಿನ ಚೆನ್ನೈನಲ್ಲಿ ಸೃಷ್ಟಿಯಾಗುವ ಪ್ರವಾಹ ಸಮಸ್ಯೆಯ ಪರಿಹಾರೋಪಾಯಕ್ಕೆ ₹561.29 ಕೋಟಿ ನೆರವು ನೀಡಲು ಒಪ್ಪಿಗೆ ನೀಡಿದೆ.
ಮಳೆಗಾಲ ಹಾಗೂ ಚಂಡಮಾರುತ ಅಪ್ಪಳಿಸುವ ವೇಳೆ ಚೆನ್ನೈನಲ್ಲಿ ಪ್ರವಾಹ ತಲೆದೋರುವುದು ಸರ್ವೇ ಸಾಮಾನ್ಯ. ಯೋಜನೆಯಡಿ ಈ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ.
ಬೃಹತ್ ನಗರಗಳಲ್ಲಿ ಅತಿಹೆಚ್ಚು ಮಳೆ ಸುರಿಯುವುದರಿಂದ ದಿಢೀರ್ ಪ್ರವಾಹದ ಭೀತಿ ತಲೆದೋರುತ್ತಿದೆ. ಅದರಲ್ಲೂ ಚೆನ್ನೈ ಪದೇ ಪದೇ ಸಂಕಷ್ಟಕ್ಕೆ ಸಿಲುಕುತ್ತಿದೆ. ಕಳೆದ ಎಂಟು ವರ್ಷಗಳಲ್ಲಿ ಮೂರನೇ ಬಾರಿಗೆ ಅತಿದೊಡ್ಡ ಅವಾಂತರಕ್ಕೆ ಸಾಕ್ಷಿಯಾಗಿದೆ. ನಗರ ಪ್ರವಾಹ ಸಮಸ್ಯೆಯ ಪರಿಹಾರಕ್ಕೆ ಸಂಬಂಧಿಸಿದ ಮೊದಲ ಯೋಜನೆ ಇದಾಗಿದೆ ಎಂದು ‘ಎಕ್ಸ್’ನಲ್ಲಿ ಅವರು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಯೋಜನೆಗೆ ಒಪ್ಪಿಗೆ ನೀಡಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಡಿ ಯೋಜನೆಯನ್ನು ಕೈಗೆತ್ತಿಕೊಳ್ಳಲಿದ್ದು, ಕೇಂದ್ರ ಸರ್ಕಾರವು ₹500 ಕೋಟಿ ಅನುದಾನ ವ್ಯಯಿಸಲಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.