ADVERTISEMENT

ಪರೀಕ್ಷಾ ಪ್ರಕ್ರಿಯೆಯಲ್ಲಿ ಸುಧಾರಣೆ: ರಾಧಾಕೃಷ್ಣನ್‌ ನೇತೃತ್ವದಲ್ಲಿ ಸಮಿತಿ

ಪಿಟಿಐ
Published 22 ಜೂನ್ 2024, 15:38 IST
Last Updated 22 ಜೂನ್ 2024, 15:38 IST
ಕೆ.ರಾಧಾಕೃಷ್ಣನ್
ಕೆ.ರಾಧಾಕೃಷ್ಣನ್   

ನವದೆಹಲಿ: ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾರದರ್ಶಕ ಮತ್ತು ನ್ಯಾಯೋಚಿತವಾಗಿ ನಡೆಸಲು ಹಾಗೂ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (ಎನ್‌ಟಿಎ) ಕಾರ್ಯವಿಧಾನವನ್ನು ಸಮಗ್ರವಾಗಿ ಪರಿಶೀಲಿಸಲು ಕೇಂದ್ರ ಸರ್ಕಾರವು ಇಸ್ರೊ ಮಾಜಿ ಮುಖ್ಯಸ್ಥ ಕೆ. ರಾಧಾಕೃಷ್ಣನ್‌ ನೇತೃತ್ವದಲ್ಲಿ ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚಿಸಿದೆ.

ದೆಹಲಿಯ ಏಮ್ಸ್‌ನ ಮಾಜಿ ನಿರ್ದೇಶಕ ರಣದೀಪ್‌ ಗುಲೇರಿಯಾ, ಹೈದರಾಬಾದ್‌ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಬಿ.ಜೆ.ರಾವ್‌, ಐಐಟಿ ಮದ್ರಾಸ್‌ನ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಕೆ. ರಾಮಮೂರ್ತಿ, ‘ಪೀಪಲ್‌ ಸ್ಟ್ರಾಂಗ್‌’ನ ಸಹ ಸಂಸ್ಥಾಪಕ ಮತ್ತು ಕರ್ಮಯೋಗಿ ಭಾರತ್‌ ಮಂಡಳಿಯ ಸದಸ್ಯ ಪಂಕಜ್‌ ಬನ್ಸಾಲ್‌, ಐಐಟಿ ದೆಹಲಿ ವಿದ್ಯಾರ್ಥಿ ವ್ಯವಹಾರಗಳ ಡೀನ್‌ ಆದಿತ್ಯ ಮಿತ್ತಲ್‌, ಶಿಕ್ಷಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಗೋವಿಂದ್‌ ಜೈಸ್ವಾಲ್‌ ಸಮಿತಿಯ ಸದಸ್ಯರಾಗಿದ್ದಾರೆ.

‘ಪಾರದರ್ಶಕ, ನಕಲು ರಹಿತ ಮತ್ತು ಲೋಪ ಮುಕ್ತ ಪರೀಕ್ಷೆಗಳನ್ನು ನಡೆಸಬೇಕು ಎಂಬುದು ನಮ್ಮ ಬದ್ಧತೆಯಾಗಿದೆ. ಈ ನಿಟ್ಟಿನಲ್ಲಿ ಶಿಫಾರಸುಗಳನ್ನು ಮಾಡಲು ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚಿಸಲಾಗಿದೆ. ಪರೀಕ್ಷಾ ಪ್ರಕ್ರಿಯೆಯಲ್ಲಿನ ದಕ್ಷತೆಯನ್ನು ಹೆಚ್ಚಿಸಲು, ಸಂಭವನೀಯ ದುಷ್ಕೃತ್ಯವನ್ನು ತಡೆಯಲು, ದತ್ತಾಂಶ ಭದ್ರತೆಯನ್ನು ಬಲಪಡಿಸಲು ಸಮಿತಿ ಶಿಫಾರಸುಗಳನ್ನು ಮಾಡಲಿದೆ. ಅಲ್ಲದೆ, ಎನ್‌ಟಿಎ ಅನ್ನು ಕೂಲಂಕಷವಾಗಿ ಪರಿಶೀಲಿಸಿ, ಅದರ ಸುಧಾರಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸಮಿತಿ ತಿಳಿಸಲಿದೆ’ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ತಿಳಿಸಿದರು.

ADVERTISEMENT

ಸಮಿತಿ ರಚನೆಯ ಕುರಿತು ಪ್ರಧಾನ್‌ ಅವರು ಘೋಷಿಸಿದ ಎರಡು ದಿನಗಳ ಬಳಿಕ ಸಚಿವಾಲಯ ಈ ಕುರಿತು ಅಧಿಸೂಚನೆ ಹೊರಡಿಸಿದ್ದು, ಎರಡು ತಿಂಗಳೊಳಗೆ ಸಮಿತಿ ವರದಿ ನೀಡಬೇಕು ಎಂದು ತಿಳಿಸಿದೆ.

ಸಮಿತಿಗೆ ವಹಿಸಿರುವ ಪ್ರಮುಖ ಕಾರ್ಯಗಳು:

* ಪರೀಕ್ಷಾ ಕಾರ್ಯವಿಧಾನ, ದತ್ತಾಂಶ ಭದ್ರತೆಯಲ್ಲಿ ತರಬೇಕಾದ ಸುಧಾರಣೆ ಮತ್ತು ಎನ್‌ಟಿಎ ರಚನೆ ಹಾಗೂ ಕಾರ್ಯ ನಿರ್ವಹಣೆ ಕುರಿತು ಪರಿಶೀಲಿಸಬೇಕು

* ಪರೀಕ್ಷಾ ಪ್ರಕ್ರಿಯೆಯ ಆರಂಭದಿಂದ ಅಂತ್ಯದವರೆಗೆ ವಿಶ್ಲೇಷಿಸಬೇಕು. ಪರೀಕ್ಷಾ ವ್ಯವಸ್ಥೆಯಲ್ಲಿನ ದಕ್ಷತೆ ಸುಧಾರಣೆ ಮತ್ತು ಸಂಭವನೀಯ ದುಷ್ಕೃತ್ಯವನ್ನು ತಡೆಯಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಬೇಕು

* ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್‌ಒಪಿ) ಮತ್ತು ಎನ್‌ಟಿಎ ಶಿಷ್ಟಾಚಾರಗಳ ಕುರಿತು ಸಂಪೂರ್ಣ ಪರಿಶೀಲನೆ ನಡೆಸಬೇಕು

* ಪರೀಕ್ಷೆಯ ಪ್ರತಿ ಹಂತದಲ್ಲೂ ಅನುರಿಸಬೇಕಾದ ಮತ್ತು ಅದನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಮೇಲ್ವಿಚಾರಣಾ ವ್ಯವಸ್ಥೆ ಹಾಗೂ ಹಾಲಿ ವ್ಯವಸ್ಥೆಯನ್ನು ಬಲಪಡಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಶಿಫಾರಸು ಮಾಡಬೇಕು

* ಪ್ರಶ್ನೆ ಪತ್ರಿಕೆಗಳ ಸೆಟ್ಟಿಂಗ್‌ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಭದ್ರತಾ ಶಿಷ್ಟಾಚಾರಗಳನ್ನು ಪರಿಶೀಲಿಸಿ, ವ್ಯವಸ್ಥೆಯ ದೃಢತೆಯನ್ನು ಹೆಚ್ಚಿಸಲು ಏನು ಮಾಡಬೇಕು ಎಂಬುದನ್ನು ತಿಳಿಸಬೇಕು

ಕಠಿಣ ಕಾನೂನು ಜಾರಿಗೆ

ನವದೆಹಲಿ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮಗಳನ್ನು ತಡೆಯುವ ಉದ್ದೇಶದ ಕಠಿಣ ಕಾನೂನನ್ನು ಕೇಂದ್ರ ಸರ್ಕಾರವು ಶುಕ್ರವಾರದಿಂದ ಜಾರಿಗೆ ತಂದಿದೆ. ತಪ್ಪು ಮಾಡಿರುವುದು ಸಾಬೀತಾದರೆ ಗರಿಷ್ಠ 10 ವರ್ಷ ಜೈಲು ಶಿಕ್ಷೆ ಮತ್ತು ₹1 ಕೋಟಿವರೆಗೆ ದಂಡ ವಿಧಿಸಲು ಈ ಕಾನೂನು ಅವಕಾಶ ಕಲ್ಪಿಸುತ್ತದೆ.

‘ಪರೀಕ್ಷೆಗಳ (ಅಕ್ರಮಗಳ ತಡೆ) ಕಾಯ್ದೆ – 2024’ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿ ಸರಿಸುಮಾರು ನಾಲ್ಕು ತಿಂಗಳು ಕಳೆದ ನಂತರ ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸಿದೆ. ಕಾಯ್ದೆಯು ಜೂನ್‌ 21ರಿಂದ ಜಾರಿಗೆ ಬಂದಿದೆ ಎಂದು ಅಧಿಸೂಚನೆ ಹೇಳಿದೆ.

ಯುಜಿಸಿ–ನೆಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಈ ಸಂದರ್ಭದಲ್ಲಿ ಕಾಯ್ದೆಯು ಜಾರಿಗೆ ಬಂದಿರುವುದು ಮಹತ್ವ ಪಡೆದುಕೊಂಡಿದೆ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ನಡೆಸಿದ ಈ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಆಗಿದ್ದರ ಬಗ್ಗೆ ತನಿಖೆ ಆರಂಭಿಸಿರುವ ಸಿಬಿಐ ಅಧಿಕಾರಿಗಳು ಗುರುವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆದ ನೀಟ್–ಯುಜಿ ‍ಪರೀಕ್ಷೆಯಲ್ಲಿ ಕೂಡ ಅಕ್ರಮಗಳು ನಡೆದಿವೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

‘ಪರೀಕ್ಷೆಗಳ (ಅಕ್ರಮಗಳ ತಡೆ) ಮಸೂದೆ – 2024’ಕ್ಕೆ ರಾಜ್ಯಸಭೆಯು ಫೆಬ್ರುವರಿ 9ರಂದು ಅಂಗೀಕಾರ ನೀಡಿತ್ತು. ಲೋಕಸಭೆಯು ಇದಕ್ಕೆ ಫೆಬ್ರುವರಿ 6ರಂದು ಒಪ್ಪಿಗೆ ನೀಡಿತ್ತು. ರಾಷ್ಟ್ರಪ‍ತಿಯವರು ಈ ಮಸೂದೆಗೆ ಫೆಬ್ರುವರಿ 12ರಂದು ಅಂಕಿತ ಹಾಕಿದ್ದರು.

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ), ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ), ರೈಲ್ವೆ, ಬ್ಯಾಂಕಿಂಗ್ ನೇಮಕಾತಿಗೆ ನಡೆಸುವ ಪರೀಕ್ಷೆಗಳು ಹಾಗೂ ಎನ್‌ಟಿಎ ನಡೆಸುವ ಪರೀಕ್ಷೆಗಳು ಸೇರಿದಂತೆ ವಿವಿಧ ಪರೀಕ್ಷೆಗಳಲ್ಲಿ ಅಕ್ರಮಗಳು ನಡೆಯುವುದನ್ನು ತಡೆಯುವ ಉದ್ದೇಶವನ್ನು ಕಾಯ್ದೆಯು ಹೊಂದಿದೆ.

ತಪ್ಪು ಮಾಡಿರುವುದು ಸಾಬೀತಾದರೆ ಈ ಕಾಯ್ದೆಯ ಅಡಿಯಲ್ಲಿ ಕನಿಷ್ಠ ಮೂರರಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಸಾಧ್ಯವಿದೆ. ವಂಚನೆಯಂತಹ ಅಪರಾಧವನ್ನು ಸಂಘಟಿತವಾಗಿ ಎಸಗಿದವರಿಗೆ ಐದರಿಂದ 10 ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸಲು ಹಾಗೂ ಕನಿಷ್ಠ ₹1 ಕೋಟಿ ದಂಡ ವಿಧಿಸಲು ಅವಕಾಶ ಇದೆ.

ಈ ಕಾಯ್ದೆಯು ಜಾರಿಗೆ ಬರುವ ಮೊದಲು, ಸರ್ಕಾರ ಅಥವಾ ಸರ್ಕಾರದ ಸಂಸ್ಥೆಗಳು ನಡೆಸುವ ಪರೀಕ್ಷೆಗಳಲ್ಲಿ ಅಕ್ರಮಗಳನ್ನು ಎಸಗುವವರಿಗೆ ಶಿಕ್ಷೆ ವಿಧಿಸಲು ನಿರ್ದಿಷ್ಟವಾದ ಕಾನೂನು ಇರಲಿಲ್ಲ.

ಎನ್‌ಟಿಎ ಮಹಾನಿರ್ದೇಶಕ ಎತ್ತಂಗಡಿ

ನವದೆಹಲಿ: ‘ಯುಜಿ–ನೀಟ್‌’ ಮತ್ತು ಯುಜಿಸಿ–ನೆಟ್‌ ಪರೀಕ್ಷೆಗಳಲ್ಲಿನ ಅಕ್ರಮಗಳ ಕುರಿತು ದೇಶದಾದ್ಯಂತ ಭಾರೀ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಮಹಾನಿರ್ದೇಶಕ ಸುಬೋಧ್‌ ಸಿಂಗ್‌ ಅವರನ್ನು ಆ ಹುದ್ದೆಯಿಂದ ಶನಿವಾರ ತೆಗೆದು ಹಾಕಲಾಗಿದೆ.

ಮುಂದಿನ ಆದೇಶದವರೆಗೆ ಅವರನ್ನು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯಲ್ಲಿ (ಡಿಒಪಿಟಿ) ‘ಕಡ್ಡಾಯ ಕಾಯುವಿಕೆ’ಯಲ್ಲಿ ಇರಿಸಲಾಗಿದೆ ಎಂದು ಅಧಿಕಾರಿ ಯೊಬ್ಬರು ಮಾಹಿತಿ ನೀಡಿದ್ದಾರೆ. ‘ಇಂಡಿಯಾ ಟ್ರೇಡ್‌ ಪ್ರಮೋಷನ್‌ ಆರ್ಗನೈಸೇಷನ್‌’ (ಐಟಿಪಿಒ) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಪ್ರದೀಪ್‌ ಸಿಂಗ್‌ ಖರೋಲಾ ಅವರಿಗೆ ಎನ್‌ಟಿಎ ಮಹಾನಿರ್ದೇಶಕ ಹುದ್ದೆಯನ್ನು ಹೆಚ್ಚುವರಿಯಾಗಿ ವಹಿಸಲಾಗಿದೆ.

ನೀಟ್‌–ಪಿಜಿ ಪರೀಕ್ಷೆ ಮುಂದೂಡಿಕೆ: ಭಾನುವಾರ ನಿಗದಿಯಾಗಿದ್ದ ‘ನೀಟ್‌–ಪಿಜಿ’ ಪರೀಕ್ಷೆಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಸಚಿವಾಲಯ ಮುಂದೂಡಿ ಆದೇಶಿಸಿದೆ.

ಹಾನಿ ನಿಯಂತ್ರಣದ ಯತ್ನ: ಕಾಂಗ್ರೆಸ್

ನವದೆಹಲಿ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ಎಸಗಿದವರಿಗೆ ಕಠಿಣ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸುವ ಕಾಯ್ದೆ ಜಾರಿಗೆ ತಂದಿರುವ ಕೇಂದ್ರದ ಕ್ರಮವು, ಹಾನಿ ನಿಯಂತ್ರಣಕ್ಕೆ ಯತ್ನಿಸುವಂತಿದೆ ಎಂದು ಕಾಂಗ್ರೆ‌ಸ್ ಟೀಕಿಸಿದೆ.

ಕಾನೂನನ್ನು ಜಾರಿಗೆ ತರುವ ಅಗತ್ಯ ಇತ್ತು. ಆದರೆ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಇತರ ಅಕ್ರಮಗಳು ನಡೆದ ನಂತರ ಇದು ಜಾರಿಗೆ ಬಂದಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ‘ಎಕ್ಸ್‌’ನಲ್ಲಿ ಹೇಳಿದ್ದಾರೆ.

ರಾಷ್ಟ್ರಪತಿಯವರು ಈ ಮಸೂದೆಗೆ ಫೆ. 13ರಂದು ಅಂಕಿತ ಹಾಕಿದ್ದಾರೆ. ಆದರೆ, ಕಾಯ್ದೆಯು ಶುಕ್ರವಾರದಿಂದ ಜಾರಿಗೆ ಬಂದಿದೆ ಎಂಬುದನ್ನು ದೇಶಕ್ಕೆ ಈ ದಿನ (ಶನಿವಾರ) ಬೆಳಿಗ್ಗೆ ತಿಳಿಸಲಾಗಿದೆ ಎಂದು ರಮೇಶ್ ಅವರು ಹೇಳಿದ್ದಾರೆ. ನೀಟ್‌, ಯುಜಿಸಿ–ನೆಟ್, ಸಿಎಸ್‌ಐಆರ್–ಯುಜಿಸಿ–ನೆಟ್ ಮತ್ತು ಇತರ ಹಗರಣಗಳಿಂದ ಆಗಿರುವ ಹಾನಿಯನ್ನು ಕಡಿಮೆ ಮಾಡುವ ಒಂದು ಯತ್ನ ಇದು ಎಂಬುದು ಸ್ಪಷ್ಟ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ‘ಪ್ರಶ್ನೆಪತ್ರಿಕೆ ಸೋರಿಕೆ ಆಗದೆ ಇರುವಂತೆ ನೋಡಿಕೊಳ್ಳುವ ಕಾನೂನುಗಳು, ವ್ಯವಸ್ಥೆಗಳು, ಪ್ರಕ್ರಿಯೆಗಳನ್ನು ರೂಪಿಸುವುದು ಹೆಚ್ಚು ಮುಖ್ಯ’ ಎಂದು ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ.

ಹೊಸ ಕಾನೂನು ಜಾರಿಗೊಳಿಸುವುದು ತಪ್ಪನ್ನು ಮರೆಮಾಚಲು ಬಿಜೆಪಿ ನಡೆಸಿರುವ ಯತ್ನ ಮಾತ್ರ. ಶಿಕ್ಷಣ ವ್ಯವಸ್ಥೆ ಹಾಗೂ ಸ್ವಾಯತ್ತ ಸಂಸ್ಥೆಗಳನ್ನು ಹಸ್ತಕ್ಷೇಪ ಮತ್ತು ಬಿಜೆಪಿ–ಆರ್‌ಎಸ್‌ಎಸ್‌ನ ನಕಾರಾತ್ಮಕ ಪ್ರಭಾವದಿಂದ ಹೊರತರುವವರೆಗೂ ವಂಚನೆ ಮುಂದುವರಿಯುತ್ತದೆ.
-ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

ಮಸೂದೆ ಮರಳಿಸಿದ್ದ ರಾಜ್ಯದ ರಾಜ್ಯಪಾಲರು

ಬೆಂಗಳೂರು: ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಪತ್ತೆಯಾದ ಬಳಿಕ ಕರ್ನಾಟಕ ಸಾರ್ವಜನಿಕ ಪರೀಕ್ಷೆ (ನೇಮಕಾತಿಯಲ್ಲಿನ ಭ್ರಷ್ಟಾಚಾರ ಮತ್ತು ಅನುಚಿತ ವಿಧಾನಗಳ ಪ್ರತಿಬಂಧಕ ಕ್ರಮಗಳು) ಮಸೂದೆ– 2023 ಅನ್ನು ರೂಪಿಸಿದ್ದ ರಾಜ್ಯ ಸರ್ಕಾರ 2023ರ ಡಿಸೆಂಬರ್‌ನಲ್ಲಿ ವಿಧಾನಮಂಡಲದ ಅಂಗೀಕಾರ ಪಡೆದಿತ್ತು.

ಮಸೂದೆಯನ್ನು ರಾಜ್ಯಪಾಲರ ಅಂಕಿತಕ್ಕಾಗಿ 2023ರ ಡಿ. 28ರಂದು ರಾಜಭವನಕ್ಕೆ ಕಳುಹಿಸಲಾಗಿತ್ತು.
ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಅವರು ಕೆಲವು ಅಂಶಗಳಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡುವಂತೆ ಸೂಚಿಸಿ 2024ರ ಜನವರಿ 16ರಂದು ಮಸೂದೆಯನ್ನು ಸಂಸದೀಯ ವ್ಯವಹಾರಗಳ ಇಲಾಖೆಗೆ ಮರಳಿಸಿದ್ದರು. ರಾಜ್ಯಪಾಲರು ಕೋರಿರುವ ಸ್ಪಷ್ಟನೆಗಳನ್ನು ಒದಗಿಸುವಂತೆ ಸೂಚಿಸಿ ಜ.17ರಂದು ಗೃಹ ಇಲಾಖೆಗೆ ಮಸೂದೆಯನ್ನು ಕಳಿಸಿದ್ದು, ಅಲ್ಲಿಯೇ ಬಾಕಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.