ಚಂಡೀಗಡ:‘ರಫೇಲ್ ಒಪ್ಪಂದದ ಬಗ್ಗೆ ತನಿಖೆ ನಡೆಸುವುದನ್ನು ತಡೆಯುವುದಕ್ಕಾಗಿಯೇ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರನ್ನು ಕೇಂದ್ರ ಸರ್ಕಾರ ರಜೆ ಮೇಲೆ ಕಳುಹಿಸಿದೆ’ ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಆರೋಪಿಸಿದ್ದಾರೆ.
‘ವರ್ಮಾ ಅವರು ರಫೇಲ್ ತನಿಖೆ ಆರಂಭಿಸುತ್ತಾರೆ ಎಂದು ತಿಳಿದು ಕೇಂದ್ರ ಸರ್ಕಾರ ಗಾಬರಿಗೊಂಡಿತ್ತು’ ಎಂದು ಅವರು ಲೇವಡಿ ಮಾಡಿದ್ದಾರೆ.
‘ರಫೇಲ್ ಒಪ್ಪಂದ ಪರಿಶೀಲನೆಗೆ ಸರ್ಕಾರವು ಜಂಟಿ ಸಂಸದೀಯ ಸಮಿತಿಯನ್ನು ರಚಿಸುತ್ತಿಲ್ಲವೇಕೆ ಅಥವಾ ತನಿಖೆ ನಡೆಸಿ ಎಂದು ಸಿಬಿಐಗೆ ಆಗಲೀ, ಕೇಂದ್ರ ಜಾಗೃತ ಆಯೋಗಕ್ಕೆ ಆದೇಶ ನೀಡುತ್ತಿಲ್ಲವೇಕೆ ಎಂದು ಅಲೋಕ್ ನಮ್ಮನ್ನು ಪ್ರಶ್ನಿಸಿದ್ದರು. ಅದರ ಬೆನ್ನಲ್ಲೇ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ’ ಎಂದು ಅವರು ವಿವರಿಸಿದ್ದಾರೆ.
ರಫೇಲ್ ಒಪ್ಪಂದದ ಬಗ್ಗೆ ತನಿಖೆ ನಡೆಸಬೇಕು ಎಂದು ಪ್ರಶಾಂತ್ ಭೂಷಣ್, ಬಿಜೆಪಿಯ ಹಿರಿಯ ನಾಯಕರಾದ ಯಶವಂತ್ ಸಿನ್ಹಾ ಮತ್ತು ಅರುಣ್ ಶೌರಿ ಅವರು ಸಿಬಿಐ ನಿರ್ದೇಶಕರಿಗೆ ಪತ್ರ ಬರೆದಿದ್ದರು. ದೂರುದಾರರ ಜತೆ ಅಲೋಕ್ ವರ್ಮಾ ಚರ್ಚೆ ನಡೆಸಿದ್ದರು. ಇದಕ್ಕೆ ಕೇಂದ್ರ ಸಚಿವರೊಬ್ಬರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
*ಸಿಬಿಐ ಸಂಘರ್ಷ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ, ವರ್ಮಾ ವಿರುದ್ಧದ ಆರೋಪಗಳ ಬಗ್ಗೆ 14 ದಿನಗಳಲ್ಲಿ ತನಿಖೆ ನಡೆಸಿ ಎಂದು ಸೂಚಿಸಿದ್ದು ಒಳ್ಳೆಯ ಬೆಳವಣಿಗೆ
-ಪ್ರಶಾಂತ್ ಭೂಷಣ್, ಹಿರಿಯ ವಕೀಲ
*ಯಾವುದೇ ಸಂಸ್ಥೆ ಮತ್ತು ಸರ್ಕಾರಗಳಿಗಿಂತ ದೇಶವೇ ದೊಡ್ಡದು. ಉತ್ತರದಾಯಿಯೇ ಅಲ್ಲದ ಸಂಸ್ಥೆ ಇದ್ದರೆ ಅದು ತನಿಖಾ ದುಸ್ಸಾಹಸಕ್ಕೆ ಮತ್ತು ಭ್ರಷ್ಟಾಚಾರದ ರಕ್ಷಣೆಗೆ ಕಾರಣವಾಗುತ್ತದೆ
-ಅರುಣ್ ಜೇಟ್ಲಿ, ಕೇಂದ್ರ ಹಣಕಾಸು ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.