ನವದೆಹಲಿ:ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೈರ್ಮಲ್ಯ ಯೋಜನೆಗಳಿಗಾಗಿ ಕೇಂದ್ರ ಸರ್ಕಾರವು ರಾಜ್ಯಕ್ಕೆ ₹804 ಕೋಟಿ ಅನುದಾನ ಬಿಡುಗಡೆ ಮಾಡಿದೆ.
15ನೇ ಹಣಕಾಸು ಆಯೋಗದ ಶಿಫಾರಸು ಆಧರಿಸಿ, 2020-2021ರ ಹಣಕಾಸುವರ್ಷದಲ್ಲಿ ರಾಜ್ಯಕ್ಕೆ ಈ ಅನುದಾನವನ್ನು ನೀಡಲಾಗಿದೆ.
ಪಂಚಾಯತ್ ರಾಜ್ಮತ್ತು ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ, ಜಲ ಶಕ್ತಿ ಸಚಿವಾಲಯದ ಶಿಫಾರಸಿನ ಮೇರೆಗೆ, 28 ರಾಜ್ಯಗಳ 2.63 ಲಕ್ಷ ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿನ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಒಟ್ಟು ₹15,187 ಕೋಟಿ ಬಿಡುಗಡೆ ಮಾಡಲಾಗಿದೆ.
ಆಯಾ ರಾಜ್ಯ ಸರ್ಕಾರಗಳು ಈ ಹಣವನ್ನು ಗ್ರಾಮ ಪಂಚಾಯಿತಿಗಳಿಗೆ ಹತ್ತು ಕೆಲಸದ ದಿನಗಳೊಳಗೆಬಿಡುಗಡೆ ಮಾಡಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.
ಈ ಹಣವನ್ನು ಬಯಲು ಮುಕ್ತ ಶೌಚಾಲಯ, ಕುಡಿಯುವ ನೀರು ಸರಬರಾಜು, ಮಳೆ ನೀರು ಕೊಯ್ಲು ಮತ್ತು ನೀರಿನ ಮರುಬಳಕೆ ಯೋಜನೆಗೆ ಬಳಸಿಕೊಳ್ಳಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಕಾರ್ಯಗಳು ಈಗಾಗಲೇ ಪೂರ್ಣಗೊಂಡಿದ್ದರೆ, ಈ ಹಣವನ್ನು ಇತರ ಅಭಿವೃದ್ಧಿ ಕಾರ್ಯಗಳಿಗೆ ಬಳಸುವಂತೆ ಪಂಚಾಯತ್ ರಾಜ್ ಸಚಿವಾಲಯ ತಿಳಿಸಿದೆ.
ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ 2020–21ರ ಅವಧಿಯಲ್ಲಿ ಒಟ್ಟು ₹60,750 ಕೋಟಿ ಅನುದಾನವನ್ನು ಬಿಡುಗಡೆ ಮಾಡುವಂತೆ 15ನೇ ಹಣಕಾಸು ಆಯೋಗವು ತನ್ನ ಮಧ್ಯಂತರ ವರದಿಯಲ್ಲಿ ಶಿಫಾರಸು ಮಾಡಿದೆ. ಇದನ್ನು ಕೇಂದ್ರ ಸರ್ಕಾರ ಅಂಗೀಕರಿಸಿದ್ದು ಇಷ್ಟು ದೊಡ್ಡ ಮೊತ್ತದ ಅನುದಾನವನ್ನು ಒಂದು ವರ್ಷದಲ್ಲಿ ಹಂಚಿಕೆ ಮಾಡಿರುವುದು ಇದೇ ಮೊದಲು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.