ನವದೆಹಲಿ: ‘ಶೌಚಗುಂಡಿ ಶುಚಿ ಮಾಡಿದ್ದರಿಂದಜನರು ಮೃತಪಟ್ಟಿಲ್ಲ’ ಎಂದು ಕೇಂದ್ರ ಸರ್ಕಾರವು ಸಂಸತ್ತಿಗೆ ಹೇಳಿದೆ. ಸರ್ಕಾರದ ಈ ಹೇಳಿಕೆಗೆ ಸಾಮಾಜಿಕ ಹೋರಾಟಗಾರರಿಂದ ಆಕ್ರೋಶ ವ್ಯಕ್ತವಾಗಿದೆ.
ಮಲಹೊರುವವರ ಸಮೀಕ್ಷೆಯ ವಿವರ ಮತ್ತು ಶೌಚಗುಂಡಿ ಶುಚಿ ಮಾಡುವಾಗ ಮೃತಪಟ್ಟವರ ವಿವರ ನೀಡಿ ಎಂದು ರಾಜ್ಯಸಭೆಯಲ್ಲಿ ಕೇಳಲಾಗಿದ್ದ ಪ್ರಶ್ನೆಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ರಾಮದಾಸ್ ಆಠವಲೆ ಉತ್ತರ ನೀಡಿದ್ದಾರೆ. ‘ಮಲ ಮತ್ತು ಶೌಚಗುಂಡಿ ಶುಚಿ ಮಾಡಿದ್ದರಿಂದ ಯಾರೂ ಮೃತಪಟ್ಟ ಬಗ್ಗೆ ವರದಿಯಾಗಿಲ್ಲ’ ಎಂದು ಅವರು ಹೇಳಿದ್ದಾರೆ.
ಇದೇ ಮಾರ್ಚ್ 10ರಂದು ಸಂಸತ್ತಿನಲ್ಲಿ ಕೇಳಲಾಗಿದ್ದ ಪ್ರಶ್ನೆಗೂ ಅವರು ಇದೇ ರೀತಿ ಉತ್ತರ ನೀಡಿದ್ದರು. ‘ಮಲ ಮತ್ತು ಶೌಚಗುಂಡಿ ಶುಚಿ ಮಾಡಿದ್ದರಿಂದಮೃತಪಟ್ಟ ಬಗ್ಗೆ ವರದಿಯಾಗಿಲ್ಲ. ಆದರೆ ಶೌಚಗುಂಡಿ ಮತ್ತು ಮ್ಯಾನ್‌ಹೋಲ್ ಅನ್ನು ಅಪಾಯಕಾರಿ
ಯಾದ ರೀತಿಯಲ್ಲಿ ಸ್ವಚ್ಛಮಾಡುವಾಗ ಜನರು ಮೃತಪಟ್ಟ ಬಗ್ಗೆ ವರದಿಯಾಗಿದೆ’ ಎಂದು ಅವರು ಹೇಳಿದ್ದರು.
ಶೌಚಗುಂಡಿ ಮತ್ತು ಮ್ಯಾನ್‌ಹೋಲ್ ಶುಚಿ ಮಾಡುವಾಗ ಕಾರ್ಮಿಕರು ಮೃತಪಟ್ಟ ಪ್ರಕರಣಗಳನ್ನು ಸರ್ಕಾರವು ಮಲಹೊರುವುದರಿಂದ ಮೃತಪಟ್ಟ ಅಥವಾ ಶೌಚಗುಂಡಿ ಶುಚಿ ಮಾಡಿದ್ದರಿಂದ ಮೃತಪಟ್ಟ ಪ್ರಕರಣ ಎಂದುಪರಿಗಣಿಸುವುದಿಲ್ಲ.
‘ಘನತೆ ಕಸಿಯುವ ಹೇಳಿಕೆ’
‘10 ವರ್ಷಗಳಲ್ಲಿ 600ಕ್ಕೂ ಹೆಚ್ಚು ಜನರು ಶೌಚಗುಂಡಿ ಸ್ವಚ್ಛ ಮಾಡುವಾಗ ಮೃತಪಟ್ಟಿದ್ದಾರೆ ಎಂದು ಸರ್ಕಾರದ ದಾಖಲೆಗಳೇ ಹೇಳುತ್ತವೆ. ಸ್ವತಃ ಸಚಿವರೇ ಸಂಸತ್ತಿನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈಗ ಶೌಚಗುಂಡಿ ಶುಚಿ ಮಾಡುವಾಗ ಯಾರೂ ಸತ್ತಿಲ್ಲ ಎಂದು ಹೇಳುವ ಮೂಲಕ, ಹೀಗೆ ಸತ್ತವರ ಗೌರವವನ್ನು ಅವರು ನಿರಾಕರಿಸಿದ್ದಾರೆ’ ಎಂದು ಸಫಾಯಿ ಕರ್ಮಚಾರಿ ಆಂದೋಲನದ ರಾಷ್ಟ್ರೀಯ ಸಮನ್ವಯಕಾರ ಬೆಜವಾಡ ವಿಲ್ಸನ್ ಅವರು ಟೀಕಿಸಿದ್ದಾರೆ.
‘ಸಚಿವರು ತೀರಾ ತಾಂತ್ರಿಕವಾದ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ.ಒಣ ಮಲ ಶುಚಿ ಮಾಡುವುದನ್ನು ಮಾತ್ರ ಮಲಹೊರುವುದು ಎಂದು ಅವರು ಪರಿಗಣಿಸಿದ್ದಾರೆ. ಇದು ಸರಿಯಲ್ಲ. ಕೆಲವು ಲೋಪಗಳಿಂದ ಈ ಸಾವುಗಳು ಸಂಭವಿಸಿವೆ ಎಂಬುದನ್ನು ಒಪ್ಪಿಕೊಳ್ಳುವ ಧೈರ್ಯವನ್ನು ಸರ್ಕಾರ ತೋರಬೇಕು. ಅವರ ಸಾವಿನ ಲೆಕ್ಕಾಚಾರ ಇಡದೇ ಇರುವ ಮೂಲಕ ಘನತೆಯಿಂದ ಬದುಕುವ ಅವರ ಹಕ್ಕನ್ನು ನಿರಾಕರಿಸಲಾಗುತ್ತಿದೆ. ಇದೊಂದು ರೀತಿಯಲ್ಲಿ ಆಧುನಿಕ ಅಸ್ಪೃಶ್ಯತೆ’ ಎಂದು ಅವರು ಆರೋಪಿಸಿದ್ದಾರೆ.
‘ಸರ್ಕಾರ ಈವರೆಗೆ ನೀಡಿರುವ ಲೆಕ್ಕಕ್ಕೂ, ವಾಸ್ತವದ ಲೆಕ್ಕಕ್ಕೂ ಭಾರಿ ವ್ಯತ್ಯಾಸವಿದೆ. ಹಲವು ಸಾವುಗಳು ವರದಿಯಾಗುವುದೇ ಇಲ್ಲ. ಇಂತಹ ಹೇಳಿಕೆ ನೀಡುವ ಮೂಲಕ ಅವರ ಘನತೆಯನ್ನು ಸರ್ಕಾರ ಕಸಿದುಕೊಂಡಿದೆ’ ಎಂದು ದಲಿತ ಆದಿವಾಸಿ ಶಕ್ತಿ ಅಧಿಕಾರ ಮಂಚ್ ಕಾರ್ಯದರ್ಶಿ ಸಂಜೀವ್ ಕುಮಾರ್ ಅವರು ಟೀಕಿಸಿದ್ದಾರೆ.
ಕಾಯ್ದೆ ಹೇಳುವುದೇನು...
‘ಶೌಚಾಲಯ, ಶೌಚಗುಂಡಿ ಮತ್ತು ತೆರೆದ ಚರಂಡಿಯಿಂದ ಮಲವನ್ನು ಶುಚಿಮಾಡುವ ಅಥವಾ ಸಾಗಿಸುವ ಅಥವಾ ಯಾವುದೇ ರೀತಿಯಲ್ಲಿ ಮಲವನ್ನು ವ್ಯಕ್ತಿಗಳು ನಿರ್ವಹಣೆ ಮಾಡುವುದನ್ನು ‘ಮಲಹೊರುವುದು’ ಎಂದು ಕರೆಯಲಾಗುತ್ತದೆ. ಪೂರ್ಣವಾಗಿ ಕೊಳೆಯದ ಮಲಕ್ಕೆ ಇದು ಅನ್ವಯವಾಗುತ್ತದೆ. ಯಾವುದೇ ಸ್ಥಳ ಮತ್ತು ರೈಲ್ವೆ ಹಳಿಗಳಲ್ಲಿ ಇರುವ ಮಲಕ್ಕೂ ಇದು ಅನ್ವಯವಾಗುತ್ತದೆ’ ಎಂದು ‘ಮಲಹೊರುವ ಪದ್ಧತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ-2013’ ಹೇಳುತ್ತದೆ.
‘ಶೌಚಗುಂಡಿ, ಮ್ಯಾನ್‌ಹೋಲ್, ಒಳಚರಂಡಿ ಕೊಳವೆಯನ್ನು ಯಾವುದೇ ಸುರಕ್ಷಾ ಪರಿಕರಗಳು, ಸುರಕ್ಷಾ ಕ್ರಮಗಳು ಮತ್ತು ಯಂತ್ರ ಇಲ್ಲದೆ, ಬರಿಗೈಲಿ ಸ್ವಚ್ಛ ಮಾಡುವುದನ್ನು ‘ಶೌಚಗುಂಡಿಯನ್ನು ಅಪಾಯಕಾರಿಯಾಗಿ ಸ್ವಚ್ಛಗೊಳಿಸುವುದು’ ಎಂದು ಕಾಯ್ದೆ ಹೇಳುತ್ತದೆ.
ಮಲಹೊರುವುದು ಮತ್ತು ಶೌಚಗುಂಡಿಯನ್ನು ಅಪಾಯಕಾರಿಯಾಗಿ ಸ್ವಚ್ಛಗೊಳಿಸುವುದನ್ನು ಈ ಕಾಯ್ದೆಯು ನಿಷೇಧಿಸಿದೆ.
10 ವರ್ಷದಲ್ಲಿ 631 ಸಾವು
ಹತ್ತು ವರ್ಷಗಳಲ್ಲಿ ಶೌಚಗುಂಡಿ ಮತ್ತು ಮ್ಯಾನ್‌ಹೋಲ್ ಶುಚಿ ಮಾಡುವಾಗ 631 ಜನರು ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗವು 2020ರ ಸೆಪ್ಟೆಂಬರ್‌ನಲ್ಲಿ ವರದಿ ನೀಡಿತ್ತು. 2010ರ ಜನವರಿಯಿಂದ 2020ರ ಮಾರ್ಚ್ ಅಂತ್ಯದವರೆಗಿನ ದತ್ತಾಂಶಗಳನ್ನು ಆಯೋಗವು ನೀಡಿತ್ತು.
ವರ್ಷ;ಸಾವು
2010;27
2011;37
2012;47
2013;68
2014;52
2015;62
2016;55
2017;93
2018;73
2019;115
2020ರ ಮಾರ್ಚ್‌ವರೆಗೆ;22
* 2021ರ ಜೂನ್ 4ರಂದು ಕರ್ನಾಟಕದ ರಾಮನಗರ ಜಿಲ್ಲೆಯಲ್ಲಿ ಮ್ಯಾನ್‌ಹೋಲ್ ಸ್ವಚ್ಛಗೊಳಿಸುವಾಗ ಬೆಂಗಳೂರಿನ ಮೂವರು ಪೌರ ಕಾರ್ಮಿಕರು ಮೃತಪಟ್ಟಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.