ನವದೆಹಲಿ: ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಮಾಜಿ ಸಂಸದೆ ಮಹುವಾ ಮೊಯಿತ್ರಾ ಅವರು ತಮಗೆ ನೀಡಲಾಗಿದ್ದ ಸರ್ಕಾರಿ ಬಂಗಲೆಯನ್ನು ಇಂದು (ಶುಕ್ರವಾರ) ಖಾಲಿ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮಹುವಾ ಮೊಯಿತ್ರಾ ಅವರ ಸರ್ಕಾರಿ ಬಂಗಲೆ ಸಂಖ್ಯೆ 9B ಟೆಲಿಗ್ರಾಫ್ ಲೇನ್ ಅನ್ನು ಇಂದು ಬೆಳಿಗ್ಗೆ 10 ಗಂಟೆಗೆ ಸಂಪೂರ್ಣವಾಗಿ ಖಾಲಿ ಮಾಡಲಾಗಿದೆ. ಮೊಯಿತ್ರಾ ಪರ ವಕೀಲರು ಬಂಗಲೆಯ ಕೀಯನ್ನು ಡೈರಕ್ಟರೇಟ್ ಆಫ್ ಎಸ್ಟೇಟ್ಸ್ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದು, ಅವರು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಮೊಯಿತ್ರಾ ಕಚೇರಿ ಸಿಬ್ಬಂದಿ ತಿಳಿಸಿದ್ದಾರೆ.
ಸರ್ಕಾರಿ ಬಂಗಲೆಯನ್ನು ಖಾಲಿ ಮಾಡದ ಕಾರಣ ಮೊಹುವಾ ಮೊಯಿತ್ರಾ ಅವರಿಗೆ ಜನವರಿ 8ರಂದು ಡೈರಕ್ಟರೇಟ್ ಆಫ್ ಎಸ್ಟೇಟ್ಸ್ (ಡಿಒಇ) ಶೋಕಾಸ್ ನೋಟಿಸ್ ನೀಡಿದೆ ಎಂದು ಕೇಂದ್ರ ಗೃಹ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಮೂಲಗಳು ತಿಳಿಸಿದ್ದವು.
ಹಣಕ್ಕಾಗಿ ಪ್ರಶ್ನೆ ಕೇಳಿದ ಆರೋಪದಲ್ಲಿ 2023ರ ಡಿಸೆಂಬರ್ 8ರಂದು ಮೊಹುವಾ ಮೊಯಿತ್ರಾ ಅವರನ್ನು ಲೋಸಕಭೆಯಿಂದ ಉಚ್ಚಾಟನೆ ಮಾಡಲಾಗಿತ್ತು. ಬಳಿಕ ಜನವರಿ 7ರೊಳಗೆ ತಮಗೆ ನೀಡಲಾಗಿದ್ದ ಬಂಗಲೆಯನ್ನು ಖಾಲಿ ಮಾಡಬೇಕು ಎಂದು ಮಹುವಾ ಅವರಿಗೆ ತಿಳಿಸಲಾಗಿತ್ತು. ಆದರೆ, ಅವರು ಬಂಗಲೆಯನ್ನು ಇನ್ನೂ ಖಾಲಿ ಮಾಡಿಲ್ಲ. ಆದ್ದರಿಂದ ಡಿಒಇ ಈ ಕ್ರಮ ಕೈಗೊಂಡಿದ್ದು, ಮೂರು ದಿನಗಳೊಳಗಾಗಿ ‘ಬಂಗಲೆಯನ್ನು ಏಕೆ ಖಾಲಿ ಮಾಡಿಲ್ಲ’ ಎಂಬುದಕ್ಕೆ ಉತ್ತರ ನೀಡಬೇಕೆಂದು ಮಹುವಾ ಅವರಿಗೆ ಸೂಚಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.