ADVERTISEMENT

Delhi Chalo | ರೈತರ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಒಪ್ಪಬೇಕು: ಕಾಂಗ್ರೆಸ್

ಪಿಟಿಐ
Published 21 ಫೆಬ್ರುವರಿ 2024, 13:08 IST
Last Updated 21 ಫೆಬ್ರುವರಿ 2024, 13:08 IST
<div class="paragraphs"><p>ಪಂಜಾಬ್‌–ಹರಿಯಾಣ ಗಡಿ ಪ್ರದೇಶದ ಶಂಭು ಬಳಿ ರಸ್ತೆಯಲ್ಲೇ ಮಲಗಿ ವಿಶ್ರಮಿಸಿದ ರೈತರು</p></div>

ಪಂಜಾಬ್‌–ಹರಿಯಾಣ ಗಡಿ ಪ್ರದೇಶದ ಶಂಭು ಬಳಿ ರಸ್ತೆಯಲ್ಲೇ ಮಲಗಿ ವಿಶ್ರಮಿಸಿದ ರೈತರು

   

ಪಿಟಿಐ ಚಿತ್ರ

ಚಂಡೀಗಢ: 'ದೆಹಲಿ ಚಲೋ' ಪ್ರತಿಭಟನಾನಿರತ ರೈತರ ಎಲ್ಲಾ ಬೇಡಿಕೆಗಳನ್ನು ಒಪ್ಪಿಕೊಳ್ಳುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಹರಿಯಾಣ ವಿಧಾನಸಭೆ ಅಂಗೀಕರಿಸಬೇಕು ಎಂದು ಕಾಂಗ್ರೆಸ್‌ ಶಾಸಕರು ಬುಧವಾರ ಆಗ್ರಹಿಸಿದ್ದಾರೆ.

ADVERTISEMENT

ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ಮಾತನಾಡಿದ ಕಾಂಗ್ರೆಸ್‌ ಶಾಸಕ ರಘುವೀರ್‌ ಸಿಂಗ್‌ ಕದಿಯಾನ್, 'ರೈತರು ದೇಶದ ಬೆನ್ನೆಲುಬು. ಕೃಷಿ ಕಾಯ್ದೆಗಳ ರದ್ದತಿ ವೇಳೆ ಕೇಂದ್ರ ಸರ್ಕಾರವು ರೈತರಿಗೆ ಹಲವು ಭರವಸೆಗಳನ್ನು ನೀಡಿತ್ತು. ಆದರೆ, ಅವು ಇನ್ನೂ ಈಡೇರಿಕೆಯಾಗಿಲ್ಲ' ಎಂದು ಹೇಳಿದ್ದಾರೆ.

ಪಂಜಾಬ್‌–ಹರಿಯಾಣ ಗಡಿ ಪ್ರದೇಶದ ಶಂಭು ಮತ್ತು ಖನೌರಿ ಸ್ಥಳಗಳಲ್ಲಿ ರೈತರು ಸಮಾವೇಶಗೊಳ್ಳುತ್ತಿರುವುದನ್ನು ಉಲ್ಲೇಖಿಸಿದ ಕದಿಯಾನ್‌, ಕೇಂದ್ರವು ರೈತರ ಬೇಡಿಕೆಗಳನ್ನು ಒಪ್ಪಬೇಕು ಮತ್ತು ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕಲ್ಪಿಸುವ ಕಾನೂನು ಖಾತ್ರಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

'ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸುವ ನಿರ್ಣಯವನ್ನು ವಿಧಾನಸಭೆಯಲ್ಲಿ ಅಂಗೀಕರಿಸಬೇಕು. ಬಳಿಕ ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು' ಎಂದು ಕರೆ ನೀಡಿದ್ದಾರೆ.

ಈ ವೇಳೆ ಮಧ್ಯಪ್ರವೇಶಿಸಿದ ಪಕ್ಷೇತರ ಶಾಸಕ ಬಾಲರಾಜ್‌ ಕುಂದು ಅವರು, 'ನೀವು ನಿಜವಾಗಿಯೂ ರೈತರ ಬಗ್ಗೆ ಕಾಳಜಿ ಹೊಂದಿದ್ದರೆ ನಿರ್ಣಯ ಅಂಗೀಕರಿಸಿ. ಎಂಎಸ್‌ಪಿಗೆ ಕಾನೂನು ಖಾತ್ರಿ ನೀಡುವಂತೆ ಕೇಂದ್ರವನ್ನು ಒತ್ತಾಯಿಸಿ' ಎಂದು ಬಿಜೆಪಿ ಶಾಸಕರನ್ನುದ್ದೇಶಿಸಿ ಆಗ್ರಹಿಸಿದ್ದಾರೆ.

ರೈತರು ಅನುಭವಿಸುತ್ತಿರುವ ಕಷ್ಟಗಳು ಎಲ್ಲರ ಕಣ್ಣಮುಂದಿವೆ ಎಂದಿರುವ ಕಾಂಗ್ರೆಸ್‌ ಶಾಸಕ ಕುಲದೀದ್‌ ವತ್ಸ, 'ಬಿಜೆಪಿಯು ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಹೇಳುತ್ತದೆ. ಆದರೆ, ಇಂದು ರೈತರು ತಮ್ಮ ಬೆಳೆಗಳಿಗೆ ಎಂಎಸ್‌ಪಿಗಾಗಿ ಹೋರಾಡುತ್ತಿದ್ದಾರೆ. ತಮ್ಮ ಬೇಡಿಕೆಗಳನ್ನು ಮುಂದಿಟ್ಟ ಕಾರಣ ಅವರ ವಿರುದ್ಧ ಅಶ್ರುವಾಯು ಸಿಡಿಸಿ, ಲಾಠಿಚಾರ್ಜ್‌ ಮಾಡಲಾಗುತ್ತಿದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

'ರಾಜ್ಯದಲ್ಲಿ ಅಪರಾಧ ಪ್ರಕರಣಗಳ ಏರಿಕೆ'
ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಏರಿಕೆಯಾಗುತ್ತಿವೆ ಎಂದು ಆರೋಪಿಸಿ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕದಿಯಾನ್‌, 'ನಿರುದ್ಯೋಗ, ಅಪರಾಧ ಪ್ರಕರಣಗಳು ಏರಿಕೆಯಾಗುತ್ತಿವೆ. ಸರ್ಕಾರವು ರಾಜ್ಯವನ್ನು ವಿನಾಶದತ್ತ ಕೊಂಡೊಯ್ಯುತ್ತಿದೆ ಎಂಬುದು ಇದರರ್ಥ' ಎಂದು ಗುಡುಗಿದ್ದಾರೆ.

'ನೀವು (ಬಿಜೆಪಿಯವರು) ರಾಮ ರಾಜ್ಯದ ಬಗ್ಗೆ ಮಾತನಾಡುತ್ತೀರಿ. ಆದರೆ, ಕೊಲೆ, ಅತ್ಯಾಚಾರ, ಅಪಹರಣ, ಮಕ್ಕಳು ಮಹಿಳೆಯರ ಮೇಲಿನ ದೌರ್ಜನ್ಯ, ಮಾದಕವಸ್ತು ಕಳ್ಳಸಾಗಣೆ ಪ್ರಕರಣಗಳ ಏರಿಕೆಯೊಂದಿಗೆ ಅಪರಾಧ ದರ ಹೆಚ್ಚುತ್ತಲೇ ಇದೆ' ಎಂದು ಕಿಡಿಕಾರಿದ್ದಾರೆ.

ನೇಮಕಾತಿಗೆ ಸಂಬಂಧಿಸಿದಂತೆ ಸರ್ಕಾರ ನೀಡಿದ ಅಂಕಿ–ಅಂಶಗಳನ್ನು ಅಲ್ಲಗಳೆದ ಅವರು, ರಾಜ್ಯದಲ್ಲಿ 1.82 ಲಕ್ಷ ಉದ್ಯೋಗಗಳು ಖಾಲಿ ಇವೆ ಎಂದು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.