ಇಂಫಾಲ್ (ಪಿಟಿಐ): ‘ಮಣಿಪುರದ ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರು ಕೇಂದ್ರ ಸರ್ಕಾರಕ್ಕೆ ಭಾನುವಾರ ಮನವಿ ಮಾಡಿದ್ದಾರೆ.
ಪ್ರತ್ಯೇಕ ಆಡಳಿತಕ್ಕೆ ಒತ್ತಾಯಿಸಿರುವ ಕುಕಿ ಜೋ ಸಮುದಾಯಗಳ ಬೇಡಿಕೆಗೆ ಕೇಂದ್ರ ಸರ್ಕಾರ ಮಣಿಯಬಾರದು ಎಂದು ಅವರು ಒತ್ತಾಯಿಸಿದ್ದಾರೆ.
ವಿಧಾನಸಭೆಯ ಸ್ಪೀಕರ್ ಥೋಕ್ಚೋಮ್ ಸತ್ಯಬ್ರತ ಸಿಂಗ್ ಹಾಗೂ 20ಕ್ಕೂ ಹೆಚ್ಚು ಶಾಸಕರೊಂದಿಗೆ ರಾಜಭವನಕ್ಕೆ ಭೇಟಿ ನೀಡಿದ ಸಿಂಗ್, ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರಿಗೆ ಈ ಕುರಿತ ಮನವಿ ಪತ್ರ ಸಲ್ಲಿಸಿದ್ದಾರೆ.
‘ಕೇಂದ್ರ ಸರ್ಕಾರವು ಮಣಿಪುರದಲ್ಲಿ ಶಾಂತಿಯನ್ನು ಖಾತ್ರಿ ಪಡಿಸಬೇಕು ಹಾಗೂ ಚುನಾಯಿತ ರಾಜ್ಯ ಸರ್ಕಾರಕ್ಕೆ ಸಾಕಷ್ಟು ಅಧಿಕಾರವನ್ನು ನೀಡಬೇಕು’ ಎಂಬುದನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಭದ್ರತೆ ಹೆಚ್ಚಳ: ಮಣಿಪುರದಲ್ಲಿ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಸದ್ಯದ ಪರಿಸ್ಥಿತಿ ಉದ್ವಿಗ್ನಗೊಂಡಿದ್ದರೂ, ನಿಯಂತ್ರಣದಲ್ಲಿದೆ. ಜಿರಿಬಾಮ್‌ನಲ್ಲಿ ಶನಿವಾರ ನಡೆದ ಹಿಂಸಾಚಾರದಲ್ಲಿ ಐವರು ಮೃತಪಟ್ಟಿದ್ದರು.
‘ಜಿರಿಬಾಮ್‌ನಲ್ಲಿ ಶನಿವಾರ ಮನೆಯೊಂದಕ್ಕೆ ನುಗ್ಗಿದ ಉಗ್ರರು, ನಿದ್ರಿಸುತ್ತಿದ್ದ ವ್ಯಕ್ತಿಯ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಈ ಹತ್ಯೆ ನಂತರ ಸಂಘರ್ಷ ನಡೆಯುತ್ತಿರುವ ಸಮುದಾಯಗಳ ಸದಸ್ಯರ ನಡುವೆ ಭಾರಿ ಗುಂಡಿನ ಕಾಳಗ ನಡೆದಿದ್ದು, ಶಸ್ತ್ರಸಜ್ಜಿತ ನಾಲ್ವರು ಮೃತಪಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಜಿರಿಬಾಮ್ ಜಿಲ್ಲೆಯಲ್ಲಿ ಶನಿವಾರ ರಾತ್ರಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ಯಾವುದೇ ಡ್ರೋನ್‌ಗಳನ್ನು ಹಿಮ್ಮೆಟ್ಟಿಸಲು ಅಸ್ಸಾಂ ರೈಫಲ್ಸ್ ಪಡೆಯು ಇಂಫಾಲ್ ಕಣಿವೆಯ ಅಂಚಿನ ಪ್ರದೇಶಗಳಲ್ಲಿ ಡ್ರೋನ್ ವಿರೋಧಿ ವ್ಯವಸ್ಥೆಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Highlights - null
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.