ADVERTISEMENT

Covishield ಲಸಿಕೆಯ ಅಡ್ಡ ಪರಿಣಾಮ: ಪರಿಶೀಲನೆಗೆ ದೆಹಲಿ ಆರೋಗ್ಯ ಸಚಿವ ಒತ್ತಾಯ

ಪಿಟಿಐ
Published 30 ಏಪ್ರಿಲ್ 2024, 12:24 IST
Last Updated 30 ಏಪ್ರಿಲ್ 2024, 12:24 IST
   

ನವದೆಹಲಿ: ಕೋವಿಡ್ ಕಾಲದಲ್ಲಿ ದೇಶದ ಕೋಟ್ಯಂತರ ಜನರು ಪಡೆದಿರುವ ಕೋವಿಶೀಲ್ಡ್ ಲಸಿಕೆಯು ಗಂಭೀರ ಅಡ್ಡ ಪರಿಣಾಮ ಉಂಟುಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಕೇಂದ್ರ ಸರ್ಕಾರ ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ದೆಹಲಿಯ ಆರೋಗ್ಯ ಸಚಿವ ಸೌರಭ್ ಭಾರದ್ವಾಜ್ ಹೇಳಿದ್ದಾರೆ.

ಲಸಿಕೆಯ ಅಡ್ಡ ಪರಿಣಾಮ ಮತ್ತು ಭಾರತದಲ್ಲಿ ದಿಢೀರ್ ಸಾವುಗಳ ನಡುವಿನ ನಂಟಿರುವ ಆರೋಪಗಳ ಬಗ್ಗೆ ಭಾರದ್ವಾಜ್ ಕಳವಳ ವ್ಯಕ್ತಪಡಿಸಿದ್ದಾರೆ.

ಜರ್ಮನಿ, ಫ್ರಾನ್ಸ್, ಸ್ಪೇನ್, ಫಿನ್‌ಲ್ಯಾಂಡ್, ನಾರ್ವೆ ಮತ್ತು ಡೆನ್ಮಾರ್ಕ್‌ನಂತಹ ಯೂರೋಪಿಯನ್ ದೇಶಗಳು ಕೋವಿಶೀಲ್ಡ್ ಲಸಿಕೆಯ ಸುರಕ್ಷತೆ ಬಗ್ಗೆ ಅನುಮಾನ ವ್ಯಕ್ತಪಡಿಸಿ ನಿಷೇಧ ಹೇರಿದ್ದವು ಎಂದು ಅವರು ಹೇಳಿದ್ದಾರೆ.

ADVERTISEMENT

ತಮ್ಮ ಸಂಸ್ಥೆಯ ಕೋವಿಡ್ ಲಸಿಕೆಯು ಅತ್ಯಂತ ವಿರಳ ಪ್ರಕರಣಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಂತಹ ಅಡ್ಡ ಪರಿಣಾಮಕ್ಕೆ ಕಾರಣವಾಗಬಹುದು. ಆದರೆ, ಇದರ ಕಾರಣ ತಿಳಿದುಬಂದಿಲ್ಲ ಎಂದು ಬ್ರಿಟನ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಔಷಧ ಕಂಪನಿ ಆಸ್ಟ್ರಾಜೆನಿಕಾ, ನ್ಯಾಯಾಲಯಕ್ಕೆ ಸಲ್ಲಿಸಿದೆ ಎನ್ನಲಾದ ದಾಖಲೆ ಪತ್ರಗಳ ಬಗ್ಗೆ ಬ್ರಿಟನ್ ಮಾಧ್ಯಮಗಳು ವರದಿ ಮಾಡಿವೆ.

51 ಮಂದಿ ಸಲ್ಲಿಸಿದ್ದ ಅರ್ಜಿಯೊಂದರ ವಿಚಾರಣೆ ವೇಳೆ ಫೆಬ್ರುವರಿಯಲ್ಲಿ ಲಂಡನ್ ಹೈಕೋರ್ಟ್‌ಗೆ ದಾಖಲೆ ಸಲ್ಲಿಸಿರುವ ಆಸ್ಟ್ರಾಜೆನಿಕಾ, ಕೋವಿಡ್‌ನಿಂದ ರಕ್ಷಣೆ ಒದಗಿಸಲು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಜೊತೆ ಸೇರಿ ಅಭಿವೃದ್ಧಿಪಡಿಸಿರುವ ಲಸಿಕೆಯು ಅತ್ಯಂತ ವಿರಳ ಪ್ರಕರಣಗಳಲ್ಲಿ ಥ್ರೊಂಬೊಸಿಟೊಪೆನಿಯಾ ಸಿಂಡ್ರೋಮ್‌(ಟಿಟಿಎಸ್) ಕಾರಣವಾಗಲಿದೆ ಎಂದು ತಿಳಿಸಿರುವುದಾಗಿ ದಿ ಡೈಲಿ ಟೆಲಿಗ್ರಾಫ್ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.