ADVERTISEMENT

ವಯನಾಡ್ ಭೂಕುಸಿತ: ನೆರವು ನೀಡುವಲ್ಲಿ ವಿಳಂಬ ಖಂಡಿಸಿ ಹರತಾಳಕ್ಕೆ UDF, LDF ಕರೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2024, 0:48 IST
Last Updated 16 ನವೆಂಬರ್ 2024, 0:48 IST
ಪಿಣರಾಯಿ ವಿಜಯನ್‌
ಪಿಣರಾಯಿ ವಿಜಯನ್‌   

ತಿರುವನಂತಪುರ: ವಯನಾಡ್‌ ಭೂಕುಸಿತಕ್ಕೆ ಸಂಬಂಧಿಸಿದ ಪರಿಹಾರವನ್ನು ನೀಡುವಲ್ಲಿ ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಸರ್ಕಾರ ಆರೋಪಿಸಿದ್ದು, ಕೇಂದ್ರದ ಧೋರಣೆ ಖಂಡಿಸಿ ನ.19ರಂದು ಹರತಾಳ ನಡೆಸಲು ಕರೆ ನೀಡಿದೆ.

ಆಡಳಿತಾರೂಢ ಮೈತ್ರಿಕೂಟದ ಆರೋಪಕ್ಕೆ ದನಿಗೂಡಿಸಿರುವ ಕಾಂಗ್ರೆಸ್‌ ನೇತೃತ್ವದ ವಿರೋಧ ಪಕ್ಷಗಳ ಮೈತ್ರಿಕೂಟ ‘ಯುಡಿಎಫ್‌’ ಕೂಡ ನ.19ರಂದೇ ಪ್ರತ್ಯೇಕವಾಗಿ ಹರತಾಳ ನಡೆಸಲು ಮುಂದಾಗಿದೆ.

ನ.20ರಂದು ವಯನಾಡ್‌ ಲೋಕಸಭಾ ಕ್ಷೇತ್ರದ ಉಪಚುನಾವಣೆ ನಡೆಯಲಿದೆ. ಭೂಕುಸಿತಕ್ಕೆ ಸಂಬಂಧಿಸಿದ ಪರಿಹಾರ ಹಾಗೂ ಪುನರ್ವಸತಿ ವಿಚಾರವನ್ನು ಎಲ್‌ಡಿಎಫ್‌ ಹಾಗೂ ಯುಡಿಎಫ್‌ ಪಾಳಯಗಳು ಚುನಾವಣಾ ವಿಷಯವನ್ನಾಗಿಯೂ ಮಾಡಿದ್ದು, ಪ್ರಚಾರ ಸಭೆಗಳಲ್ಲಿಯೂ  ಪ್ರಸ್ತಾಪಿಸುತ್ತಿವೆ.

ADVERTISEMENT

‘ಕೇಂದ್ರ ಸರ್ಕಾರ ಕೇರಳ ಕುರಿತು ತಾರತಮ್ಯ ಮಾಡುತ್ತಿದೆ’ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಆರೋಪಿಸಿದ್ದಾರೆ.

ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಮುಖ್ಯಮಂತ್ರಿ ವಿಜಯನ್, ‘ಕೇರಳ ಕೂಡ ಭಾರತದ ಭಾಗವಾಗಿದ್ದು, ರಾಷ್ಟ್ರಕ್ಕೆ ಗಮನಾರ್ಹ ಕೊಡುಗೆ ನೀಡುತ್ತಿದೆ. ಆದಾಗ್ಯೂ, ಕೇರಳ ಕುರಿತಂತೆ ಕೇಂದ್ರ ಸರ್ಕಾರ ಪಕ್ಷಪಾತ ಧೋರಣೆ ಅನುಸರಿಸುತ್ತಿದೆ’ ಎಂದರು.

‘ವಯನಾಡ್‌ ಲೋಕಸಭಾ ಕ್ಷೇತ್ರದಿಂದ ಈ ಹಿಂದೆ ಪಕ್ಷದ ನಾಯಕ ರಾಹುಲ್‌ ಗಾಂಧಿ ಸ್ಪರ್ಧಿಸಿದ್ದರು. ಈಗ, ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧಿಸಿದ್ದಾರೆ. ಈ ಇಬ್ಬರು ನಾಯಕರಿಗೆ ಕ್ಷೇತ್ರದ ನಂಟು ಇದೆ ಎಂಬ ಕಾರಣಕ್ಕೆ ವಯನಾಡ್‌ ಕುರಿತು ಕೇಂದ್ರ ತಾರತಮ್ಯ ತೋರಿಸುತ್ತಿದೆಯೇ’ ಎಂದು ಕಾಂಗ್ರೆಸ್‌ನ ರಾಜ್ಯ ಘಟಕದ ಅಧ್ಯಕ್ಷ ಕೆ.ಸುಧಾರಕರನ್ ಪ್ರಶ್ನಿಸಿದ್ದಾರೆ.

ಪ್ರತಿಭಟನೆ ಏಕೆ?: ವಯನಾಡ್‌ ಭೂಕುಸಿತಕ್ಕೆ ಸಂಬಂಧಿಸಿ ಪರಿಹಾರ ನೀಡುವ ಕುರಿತು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್‌ ಅವರು ಇತ್ತೀಚೆಗೆ ದೆಹಲಿಯಲ್ಲಿ ಕೇರಳ ಸರ್ಕಾರದ ವಿಶೇಷ ಪ್ರತಿನಿಧಿ ಕೆ.ವಿ.ಥಾಮಸ್‌ ಅವರಿಗೆ ಬರೆದಿದ್ದ ಪತ್ರವೇ ಈಗ ಹೊಸದಾಗಿ ಪ್ರತಿಭಟನೆಗಳು ನಡೆಯಲು ಕಾರಣ ಎನ್ನಲಾಗುತ್ತಿದೆ.

‘ವಯನಾಡ್‌ ಭೂಕುಸಿತ ಘಟನೆಯನ್ನು ರಾಷ್ಟ್ರೀಯ ವಿಪತ್ತು ಎಂಬುದಾಗಿ ಘೋಷಿಸಲು ಕಾನೂನಿನಡಿ ಅವಕಾಶ ಇಲ್ಲ’ ಎಂಬುದಾಗಿ ಸಚಿವ ರಾಯ್‌ ಪತ್ರದಲ್ಲಿ ತಿಳಿಸಿದ್ದಾರೆ.

ಇನ್ನೊಂದೆಡೆ, ‘ಕೇರಳಕ್ಕೆ ಪರಿಹಾರ ನೀಡುವ ಕುರಿತು ಈ ತಿಂಗಳು ತೀರ್ಮಾನ ತೆಗೆದುಕೊಳ್ಳಲಾಗುತ್ತದೆ’ ಎಂಬುದಾಗಿ ಕೇರಳ ಹೈಕೋರ್ಟ್‌ಗೆ ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ.

ಬಿಜೆಪಿ ನಿಲುವು: ಪರಿಹಾರ ಕೋರಿ ಕೇರಳ ಸರ್ಕಾರ ಕೇಂದ್ರಕ್ಕೆ ಸಲ್ಲಿಸಿರುವ ಮನವಿ ಪತ್ರವೇ ದೋಷದಿಂದ ಕೂಡಿದೆ. ಹೀಗಾಗಿ ನೆರವು ನೀಡುವುದು ವಿಳಂಬವಾಗಿದೆ ಎಂದು ಬಿಜೆಪಿಯ ರಾಜ್ಯ ನಾಯಕರು ಹೇಳಿದ್ದಾರೆ.

‘ಎಸ್‌ಡಿಆರ್‌ಎಫ್‌ನಡಿ ರಾಜ್ಯಕ್ಕೆ ಈಗಾಗಲೇ ಹಣ ನೀಡಲಾಗಿದೆ’ ಎಂಬ ಕೇಂದ್ರದ ಹೇಳಿಕೆಯನ್ನು ಬಿಜೆಪಿ ನಾಯಕರು ಸಮರ್ಥಿಸಿಕೊಂಡಿದ್ದಾರೆ.

‘ಕೇಂದ್ರವು ಕೇರಳ ಸರ್ಕಾರಕ್ಕೆ ಬರೆದಿರುವ ಪತ್ರವನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ.

‘ಹಾನಿಯ ತೀವ್ರತೆಯ ಆಧಾರದಲ್ಲಿ ನೈಸರ್ಗಿಕ ವಿಕೋಪಗಳನ್ನು ವಿಂಗಡಿಸಲಾಗುತ್ತದೆ. ಹೀಗಾಗಿ, ವಯನಾಡ್‌ ದುರಂತವನ್ನು ರಾಷ್ಟ್ರೀಯ ವಿಪತ್ತು ಎಂಬುದಾಗಿ ಘೋಷಿಸಲು ಅವಕಾಶ ಇಲ್ಲ ಎಂಬುದಾಗಿ ಕೇಂದ್ರ ಸ್ಪಷ್ಟಪಡಿಸಿದೆ’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.