ADVERTISEMENT

ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ; ಕೇಂದ್ರದಿಂದ ಕಾರ್ಯಸೂಚಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 15:55 IST
Last Updated 8 ಏಪ್ರಿಲ್ 2021, 15:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸಾರ್ವಜನಿಕ ಮತ್ತು ಖಾಸಗಿ ವಲಯದಲ್ಲಿ ಶಿಕ್ಷಣದ ಗುಣಮಟ್ಟ ಮತ್ತು ನಿರ್ವಹಣೆಯಲ್ಲಿ ಏಕರೂಪತೆಗೆ ಒತ್ತುನೀಡುವ ಗುರಿಯುಳ್ಳ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅನುಷ್ಠಾನದ ಕಾರ್ಯಸೂಚಿಯನ್ನು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಅವರು ಗುರುವಾರ ಬಿಡುಗಡೆ ಮಾಡಿದರು.

‘ಗುಣಮಟ್ಟದ ಶಿಕ್ಷಣದ ಮೂಲಕ ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಆಮೂಲಾಗ್ರ ಬದಲಾವಣೆ’ (ಸಾರ್ಥಕ್‌) ಶೀರ್ಷಿಕೆಯನ್ನು ಈ ಕಾರ್ಯಸೂಚಿಯು ಒಳಗೊಂಡಿದೆ. ಹಾಲಿ ವ್ಯವಸ್ಥೆಯನ್ನೇ ಆಧರಿಸಿ ರೂಪಿಸಲಾದ ವಿಭಿನ್ನ 297 ಕಾರ್ಯ ಚಟುವಟಿಕೆಗಳ ಮೂಲಕ ಒಟ್ಟು 304 ಭಿನ್ನ ಗುರಿಗಳನ್ನು ಸಾಧಿಸುವುದು ಕಾರ್ಯಸೂಚಿಯ ಉದ್ದೇಶವಾಗಿದೆ.

ಅನುಷ್ಠಾನ ಕ್ರಮದಲ್ಲಿ ಸ್ಥಳೀಯ ಅಗತ್ಯವನ್ನು ಆಧರಿಸಿ ಅಗತ್ಯ ಬದಲಾವಣೆಯನ್ನು ಮಾಡಿಕೊಳ್ಳುವ ಅವಕಾಶವನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ಮೂಲಕ ನೀಡಲಾಗಿದೆ ಎಂದು ಈ ಕುರಿತು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

‘ಸಾರ್ಥಕ್‌’ ನೀತಿಯು ಹೊಸ ರಾಷ್ಟ್ರೀಯ ಮತ್ತು ರಾಜ್ಯ ಪಠ್ಯಕ್ರಮದ ಅನುಸಾರ ಪಠ್ಯದ ಸುಧಾರಣೆ, ಬಾಲ್ಯ ಹಕ್ಕುಗಳ ರಕ್ಷಣೆ ಮತ್ತು ಶಿಕ್ಷಣಕ್ಕೆ ಆದ್ಯತೆ ನೀಡುವ ಗುರಿ ಹೊಂದಿದೆ. ಒಟ್ಟು ಹಾಜರಿ (ಜಿಇಆರ್), ನಿವ್ವಳ ಹಾಜರಿ ಅನುಪಾತ (ಎನ್‌ಇಆರ್‌), ಎಲ್ಲ ಹಂತದಲ್ಲಿ ಹಾಜರಿ, ಉಳಿಕೆ ಪ್ರಮಾಣ ಏರಿಕೆ, ಶಾಲೆಯಿಂದ ಹೊರಗುಳಿಯುವವರ ಸಂಖ್ಯೆ ಕುಗ್ಗಿಸುವ ಗುರಿ ಇದೆ.

3ನೇ ತರಗತಿವರೆಗಿನ ಪ್ರಾಥಮಿಕ ಹಂತದಲ್ಲಿ ಗುಣಮಟ್ಟದ ಶಿಕ್ಷಣ, ಎಲ್ಲ ಹಂತದಲ್ಲಿ ಕಲಿಕೆಯ ಗುಣಮಟ್ಟ ಉತ್ತಮಪಡಿಸುವುದು, ಆರಂಭಿಕ ಹಂತದಲ್ಲಿ ಸ್ಥಳೀಯ, ಮಾತೃಭಾಷೆ, ಪ್ರಾದೇಶಿಕ ಭಾಷೆಯಲ್ಲಿಯೇ ಶಿಕ್ಷಣ ನೀಡಲು ಆದ್ಯತೆ ನೀಡಲಾಗಿದೆ.

ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಸ್ವಾಯತ್ತ ಸಂಸ್ಥೆಗಳು ಸೇರಿ ಎಲ್ಲ ಭಾಗಿದಾರರ ಜೊತೆ ನಡೆಸಿದೆ ವಿಸ್ತೃತ ಚರ್ಚೆ ಮತ್ತು ಸಲಹೆಗಳನ್ನು ಆಧರಿಸಿ ಕಾರ್ಯಸೂಚಿ ರೂಪಿಸಿದ್ದು, 7,177 ಸಲಹೆಗಳು ಬಂದಿದ್ದವು ಎಂದು ಹೇಳಿಕೆ ವಿವರಿಸಿದೆ.

ಮೌಖಿಕ ಶಿಕ್ಷಣ, ಕ್ರೀಡೆ, ಕಲೆ, ಸಾಮಾನ್ಯ ಜ್ಞಾನ, 21ನೇ ಶತಮಾನದ ಕೌಶಲಗಳು, ಪೌರತ್ವದ ಮೌಲ್ಯಗಳು, ಪರಿಸರ ಸಂರಕ್ಷಣೆ ಕುರಿತು ಅರಿವು ವಿಷಯಗಳಿಗೆ ಶಿಕ್ಷಣ ಎಲ್ಲ ಹಂತಗಳಲ್ಲಿಯೂ ಆದ್ಯತೆ ನೀಡಲಿದೆ. ಅಲ್ಲದೆ, ತರಗತಿಗಳಲ್ಲಿ ನವನವೀನ ಹಾಗೂ ಪ್ರಾಯೋಗಿಕ ಆಧಾರಿತ ಬೋಧನಾ ಕ್ರಮಗಳನ್ನು ಎಲ್ಲ ಹಂತಗಳಲ್ಲಿ ಅಳವಡಿಕೊಳ್ಳಲು ಅನುವು ಮಾಡಿಕೊಡಲಾಗಿದೆ.

ವಿವಿಧ ಪ್ರೌಢಶಿಕ್ಷಣ ಪರೀಕ್ಷೆಗಳು ಮತ್ತು ಪ್ರವೇಶ ಪರೀಕ್ಷೆಗಳನ್ನು ನಡೆಸುವ ಕ್ರಮಕ್ಕೆ ಪೂರಕವಾಗಿ ಕಲಿಕಾ ಕ್ರಮದಲ್ಲಿ ಬದಲಾವಣೆ ತರುವಂತೆ ಅನುಷ್ಠಾನಗೊಳಿಸಲು ಸಲಹೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.