ADVERTISEMENT

ನಮ್ಮೊಂದಿಗೆ ಭಾರತ-ಪಾಕಿಸ್ತಾನ ಪರಿಸ್ಥಿತಿ ನಿರ್ಮಾಣ ಮಾಡಿದ ಕೇಂದ್ರ: ಕೇಜ್ರಿವಾಲ್

ಪಿಟಿಐ
Published 8 ಫೆಬ್ರುವರಿ 2024, 10:01 IST
Last Updated 8 ಫೆಬ್ರುವರಿ 2024, 10:01 IST
<div class="paragraphs"><p>ಅರವಿಂದ ಕೇಜ್ರಿವಾಲ್ ಹಾಗೂ ಪಿಣರಾಯಿ ವಿಜಯನ್</p></div>

ಅರವಿಂದ ಕೇಜ್ರಿವಾಲ್ ಹಾಗೂ ಪಿಣರಾಯಿ ವಿಜಯನ್

   

(ಪಿಟಿಐ ಚಿತ್ರ)

ನವದೆಹಲಿ: ವಿರೋಧ ಪಕ್ಷಗಳ ಸರ್ಕಾರವಿರುವ ರಾಜ್ಯಗಳ ವಿರುದ್ಧ ಬಿಜೆಪಿ ಯುದ್ಧ ಸಾರಿದೆ. ಅವರು ನಮ್ಮೊಂದಿಗೆ 'ಭಾರತ-ಪಾಕಿಸ್ತಾನ' ಪರಿಸ್ಥಿತಿಯನ್ನು ನಿರ್ಮಾಣ ಮಾಡಿದ್ದಾರೆ. ವಿಪಕ್ಷಗಳ ಸರ್ಕಾರಗಳನ್ನು ಅಸ್ಥಿರಗೊಳಿಸಲು ಕೇಂದ್ರ ಎಲ್ಲ ತಂತ್ರಗಳನ್ನು ಹೆಣೆಯುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗುರುವಾರ ಆರೋಪಿಸಿದ್ದಾರೆ.

ADVERTISEMENT

ಆರ್ಥಿಕ ವಿಚಾರಗಳಲ್ಲಿ ಕೇಂದ್ರ ಸರ್ಕಾರವು ದಕ್ಷಿಣ ಭಾರತದ ರಾಜ್ಯಗಳನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನೇತೃತ್ವದ ಆಡಳಿತಾರೂಢ ಎಲ್‌ಡಿಎಫ್‌ ದೆಹಲಿಯ ಜಂತರ್ ಮಂತರ್‌ನಲ್ಲಿ ಇಂದು ಪ್ರತಿಭಟನೆ ನಡೆಸಿದೆ.

ಕೇರಳ ಸರ್ಕಾರಕ್ಕೆ ಬೆಂಬಲ ಸೂಚಿಸಿರುವ ಕೇಜ್ರಿವಾಲ್, ಪ್ರತಿಭಟನೆಯಲ್ಲಿ ಭಾಗವಹಿಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

'ಕೇಂದ್ರ ಸರ್ಕಾರವು ರಾಜ್ಯಗಳಿಗೆ ಅನುದಾನ ನೀಡುತ್ತಿಲ್ಲ. ರಾಜ್ಯಪಾಲರು ಹಾಗೂ ಲೆಫ್ಟಿನೆಂಟ್ ಗವರ್ನರ್‌ಗಳನ್ನು ಬಳಸಿಕೊಂಡು ರಾಜ್ಯ ಸರ್ಕಾರಗಳ ಕೆಲಸ ಕಾರ್ಯಗಳಲ್ಲಿ ಮಧ್ಯಪ್ರವೇಶಿಸುತ್ತಿದೆ. ವಿಪಕ್ಷ ನಾಯಕರನ್ನು ಬಂಧಿಸಲು ಕೇಂದ್ರದ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಕಿರುಕುಳ ನೀಡುತ್ತಿದೆ. ಹೀಗಾದ್ದಲ್ಲಿ ಸರ್ಕಾರ ನಡೆಸಲು ಹೇಗೆ ಸಾಧ್ಯ' ಎಂದು ಅವರು ಪ್ರಶ್ನಿಸಿದ್ದಾರೆ.

'ಪ್ರತಿಭಟನೆ ನಡೆಸುವವರು ಇಲ್ಲಿ ಭಿಕ್ಷೆ ಬೇಡಲು ಅಥವಾ ಸ್ವಂತ ಕುಟುಂಬಕ್ಕಾಗಿ ಬಂದಿಲ್ಲ. ಎರಡು ಕೋಟಿ ಜನರ ಹಕ್ಕಿಗಾಗಿ ಇಲ್ಲಿಗೆ ಬಂದಿದ್ದೇವೆ. ನೀವು ಅನುದಾನ ನೀಡದಿದ್ದಲ್ಲಿ ರಸ್ತೆ ನಿರ್ಮಾಣ, ವಿದ್ಯುತ್ ಪೂರೈಕೆ, ಅಭಿವೃದ್ಧಿ ಕೆಲಸ ಮಾಡಲು ಹೇಗೆ ಸಾಧ್ಯ? ಜನರ ಹಕ್ಕುಗಳನ್ನು ಕಸಿದುಕೊಳ್ಳಬಹುದೇ?' ಎಂದು ಕೇಳಿದ್ದಾರೆ.

ಪಂಜಾಬ್ ರಾಜ್ಯವನ್ನು ಉದಾಹರಣೆಯಾಗಿ ಉಲ್ಲೇಖಿಸಿರುವ ಅವರು, ಗ್ರಾಮೀಣಾಭಿವೃದ್ಧಿ ನಿಧಿ ಬಿಡುಗಡೆಗಾಗಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಬೇಕಾಯಿತು ಎಂದು ತಿಳಿಸಿದರು.

'ಸುಪ್ರೀಂ ಕೋರ್ಟ್ ಮುಂದಿನ ವಾರ ವಿಚಾರಣೆ ನಿಗದಿಪಡಿಸಿದೆ. ತಕ್ಷಣ ಕೇಂದ್ರದಿಂದ ಕರೆ ಬಂದಿದ್ದು, ಚರ್ಚೆಗೆ ಬನ್ನಿ ಎಂದು ಹೇಳಿದೆ. ದೆಹಲಿಯ ಜನರು ಎರಡು ಲಕ್ಷ ಕೋಟಿ ರೂಪಾಯಿಗಳನ್ನು ಆದಾಯ ತೆರಿಗೆಯಾಗಿ ಪಾವತಿ ಮಾಡುತ್ತಾರೆ. ಅದರಲ್ಲಿ 325 ಕೋಟಿ ರೂಪಾಯಿ ಮಾತ್ರ ಸಿಗುತ್ತಿದೆ. ಬ್ರಿಟಿಷರು ಕೂಡ 100 ವರ್ಷಗಳ ಆಳ್ವಿಕೆಯಲ್ಲಿ ದೇಶವನ್ನು ಇಷ್ಟೊಂದು ಲೂಟಿ ಮಾಡಿರಲಿಲ್ಲ' ಎಂದು ಕಿಡಿಕಾರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.