ಶ್ರೀನಗರ: ಕೇಂದ್ರ ಸರ್ಕಾರವು ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ಪ್ರಚಾರ ಮಾಡುತ್ತಿರುವ ಆಕ್ರಮಣಕಾರಿ ವಿಧಾನ ಮತ್ತು ಕಾಶ್ಮೀರಿ ಪಂಡಿತರ ನೋವನ್ನು 'ಆಯುಧ'ವನ್ನಾಗಿ ಮಾಡಿಕೊಂಡಿರುವುದನ್ನು ನೋಡಿದರೆ ಅದರ 'ದುರುದ್ದೇಶ' ಸ್ಪಷ್ಟವಾಗಿದೆ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಬುಧವಾರ ದೂರಿದ್ದಾರೆ.
'ಹಳೆಯ ಗಾಯಗಳನ್ನು ವಾಸಿಮಾಡುವ ಮತ್ತು ಎರಡು ಸಮುದಾಯಗಳ ನಡುವೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವ ಬದಲು ಕೇಂದ್ರ ಸರ್ಕಾರವು 'ಉದ್ದೇಶಪೂರ್ವಕವಾಗಿಯೇ ಅವುಗಳ ಮಧ್ಯೆ ಬಿರುಕುಂಟು ಮಾಡುತ್ತಿದೆ' ಎಂದು ಆರೋಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮುಫ್ತಿ, ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಮುಂದಿಟ್ಟುಕೊಂಡು ಸರ್ಕಾರ ನಡೆಸುತ್ತಿರುವ ಪ್ರಚಾರಕ್ಕೆ ಕಿಡಿಕಾರಿದ್ದಾರೆ.
1990ರಲ್ಲಿ ನಡೆದ ಕಾಶ್ಮೀರಿ ಪಂಡಿತರ ಮೇಲಿನ ದೌರ್ಜನ್ಯ ಮತ್ತು ಹತ್ಯಾಕಾಂಡದ ಕುರಿತ ಕಥಾಹಂದರ 'ದಿ ಕಾಶ್ಮೀರ್ ಫೈಲ್ಸ್' ಚಿತ್ರದಲ್ಲಿದೆ.
ಝೀ ಸ್ಟುಡಿಯೊ ನಿರ್ಮಾಣದ ಈ ಚಿತ್ರವನ್ನು ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿದ್ದು, ಅನುಪಮ್ ಖೇರ್, ದರ್ಶನ್ ಕುಮಾರ್, ಮಿಥುನ್ ಚಕ್ರವರ್ತಿ ಮತ್ತು ಪಲ್ಲವಿ ಜೋಶಿ ಸೇರಿದಂತೆ ಬಹು ತಾರಾಗಣವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.