ADVERTISEMENT

ಪರೀಕ್ಷಾ ಪ್ರಕ್ರಿಯೆ ಸುಧಾರಣೆ: ಪೋಷಕರು, ವಿದ್ಯಾರ್ಥಿಗಳ ಜತೆ ಚರ್ಚೆ; ರಾಧಾಕೃಷ್ಣನ್

ಪಿಟಿಐ
Published 25 ಜೂನ್ 2024, 15:45 IST
Last Updated 25 ಜೂನ್ 2024, 15:45 IST
ರಾಧಾಕೃಷ್ಣನ್
ರಾಧಾಕೃಷ್ಣನ್   

ನವದೆಹಲಿ: ಪರೀಕ್ಷಾ ವ್ಯವಸ್ಥೆಯ ಸುಧಾರಣೆಗಾಗಿ ಕೇಂದ್ರ ಶಿಕ್ಷಣ ಸಚಿವಾಲಯ ರಚಿಸಿರುವ, ಇಸ್ರೊ ಮಾಜಿ ಅಧ್ಯಕ್ಷ ಕೆ.ರಾಧಾಕೃಷ್ಣನ್‌ ನೇತೃತ್ವದ ಸಮಿತಿಯು ಪೋಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿ ಪರೀಕ್ಷಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅವರ ಕಳವಳ ಮತ್ತು ಎದುರಿಸುತ್ತಿರುವ ಸವಾಲುಗಳನ್ನು ಅರ್ಥೈಸಿಕೊಳ್ಳಲು ನಿರ್ಧರಿಸಿದೆ.  

‘ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿರುವ ಆತಂಕವನ್ನು ತಿಳಿಯುವುದಕ್ಕೆ ಮತ್ತು ಅವರ ಸಲಹೆಗಳನ್ನು ಪಡೆಯುವುದಕ್ಕೆ ನಾವು ಆದ್ಯತೆ ನೀಡುತ್ತೇವೆ. ಸಾಧ್ಯವಾದಷ್ಟೂ ನಾವು ಅವರೊಂದಿಗೆ ವೈಯಕ್ತಿಕವಾಗಿ ಅಥವಾ ಎಲೆಕ್ಟ್ರಾನಿಕ್‌ ಮಾಧ್ಯಮಗಳ ಮೂಲಕ ಚರ್ಚೆಯಲ್ಲಿ ತೊಡಗಿಕೊಳ್ಳಲಿದ್ದೇವೆ. 15 ದಿನಗಳಲ್ಲಿ ಎಲ್ಲ ಅಭಿಪ್ರಾಯಗಳನ್ನು ಕ್ರೋಡೀಕರಿಸಲಿದ್ದೇವೆ’ ಎಂದು ರಾಧಾಕೃಷ್ಣನ್‌ ಅವರು ಮಂಗಳವಾರ ಹೇಳಿದರು. 

ಸದೃಢ ವ್ಯವಸ್ಥೆಯ ಗುರಿ: ‘ದೇಶದಲ್ಲಿ ಪರೀಕ್ಷೆಗಳನ್ನು ಆರಂಭಿಸಲು ಸದೃಢವಾದ ವ್ಯವಸ್ಥೆಯನ್ನು ತ್ವರಿತವಾಗಿ ರೂಪಿಸಿವುದು ನಮ್ಮ ಎರಡನೇ ಆದ್ಯತೆ. ಅತ್ಯಂತ ಪ್ರಬಲವಾದ, ದೋಷರಹಿತ, ಅಕ್ರಮ ಎಸಗಲು ಸಾಧ್ಯವಾಗದ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲೂ ನಾವು ಗಮನ ನೀಡಲಿದ್ದೇವೆ. ವಿದ್ಯಾರ್ಥಿಗಳಿಗೆ ಸುಲಭವಾಗಿರುವ ಮತ್ತು ಹೆಚ್ಚು ಒತ್ತಡ ನೀಡದ ವ್ಯವಸ್ಥೆಯನ್ನು ರೂಪಿಸಲೂ ಒತ್ತು ನೀಡಲಿದ್ದೇವೆ’ ಎಂದು ಅವರು ವಿವರಿಸಿದರು. 

ADVERTISEMENT

ಮೊದಲ ಸಭೆ: ಈ ಮಧ್ಯೆ, ನೀಟ್‌–ಯುಜಿ, ಯುಜಿಸಿ– ನೆಟ್‌ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ನಡೆದಿರುವ ಆರೋಪಗಳ ನಡುವೆಯೇ, ಏಳು ಸದಸ್ಯರನ್ನೊಳಗೊಂಡ ರಾಧಾಕೃಷ್ಣನ್‌ ನೇತೃತ್ವದ ಸಮಿತಿಯು ಸೋಮವಾರ ಸಂಜೆ ತನ್ನ ಮೊದಲ ಸಭೆ ನಡೆಸಿತು. 

ಸಭೆಯಲ್ಲಿ ಪರೀಕ್ಷೆಗಳಿಗೆ ಸಂಬಂಧಿಸಿದ ಸದ್ಯದ ಸ್ಥಿತಿ ಹಾಗೂ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಎದುರಿಸಿರುವ ಸವಾಲುಗಳ ಬಗ್ಗೆ ಅವಲೋಕನ ನಡೆಸಲಾಗಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಮೂಲಗಳು ತಿಳಿಸಿವೆ.  

‘ಪರೀಕ್ಷೆ ನಡೆಸುವಾಗ ಅನುಸರಿಸಲಾಗುವ ಪ್ರಕ್ರಿಯೆಗಳು ಮತ್ತು ಎನ್‌ಟಿಎಯ ಕಾರ್ಯವಿಧಾನದ ಬಗ್ಗೆ ಸಮಿತಿ ಮಾಹಿತಿ ಪಡೆಯಿತು. ಎನ್‌ಟಿಎ ನಡೆಸುವ ಹಲವು ಪರೀಕ್ಷೆಗಳು ಮತ್ತು ಪ್ರತಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಸಂಬಂಧಿಸಿದ ಅಂಕಿ ಅಂಶಗಳನ್ನು ಪರಿಶೀಲಿಸಿತು’ ಎಂದು ಮೂಲವೊಂದು ತಿಳಿಸಿದೆ. 

‘ಸಾಂಪ್ರದಾಯಿಕ ವಿಧಾನದಲ್ಲಿ (ಪೆನ್ನು ಮತ್ತು ಕಾಗದ ಬಳಸಿ) ಮಾಡುವ ಪರೀಕ್ಷೆಗಳು ಮತ್ತು ಕಂಪ್ಯೂಟರ್‌ ಆಧಾರಿತವಾಗಿ ನಡೆಸಲಾಗುವ ಪರೀಕ್ಷೆಗಳ ಬಗ್ಗೆ ಮಾಹಿತಿ ಪಡೆದ ಸಮಿತಿಯು, ಎರಡೂ ವಿಧಾನಗಳ ನಡುವಿನ ವ್ಯತ್ಯಾಸದ ಬಗ್ಗೆಯೂ ತಿಳಿದುಕೊಂಡಿತು’ ಎಂದು ಮೂಲ ಹೇಳಿದೆ.  

ಸೈಬರ್‌ ಭದ್ರತೆ ವಿಚಾರ, ಡಾರ್ಕ್‌ನೆಟ್‌ನಿಂದ ಎದುರಾಗಿರುವ ಸವಾಲುಗಳ ಬಗ್ಗೆಯೂ ಸಮಿತಿಯ ಸದಸ್ಯರು ಚರ್ಚಿಸಿದ್ದಾರೆ ಎನ್ನಲಾಗಿದೆ. 

ರಾಧಾಕೃಷ್ಣನ್‌ ನೇತೃತ್ವದ ಸಮಿತಿಯು ಮಾಡಲಿರುವ ಸುಧಾರಣಾ ಶಿಫಾರಸುಗಳನ್ನು ಮುಂದಿನ ಸಾಲಿನ ಪರೀಕ್ಷೆಗಳಲ್ಲಿ ಅಳವಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಶಿಕ್ಷಣ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.    

ನೀಟ್‌ ಅಕ್ರಮ: ಶಿಕ್ಷಕ ಪೊಲೀಸ್‌ ಕಸ್ಟಡಿಗೆ

ಲಾತೂರ್‌ (ಮಹಾರಾಷ್ಟ್ರ, ಪಿಟಿಐ): ನೀಟ್‌–ಯುಜಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಭಯೋತ್ಪಾದನೆ ನಿಗ್ರಹ ಪಡೆ ಬಂಧಿಸಿದ್ದ ಜಿಲ್ಲಾ ಪರಿಷತ್‌ ಶಾಲೆಯ ಶಿಕ್ಷಕರೊಬ್ಬರನ್ನು ಇಲ್ಲಿನ ನ್ಯಾಯಾಲಯ ಜುಲೈ 2ರವರೆಗೆ ಪೊಲೀಸ್‌ ಕಸ್ಟಡಿಗೆ ಒ‍ಪ್ಪಿಸಿದೆ. 

ಪ್ರಕರಣದ ಬಗ್ಗೆ ವಿಚಾರಣೆ ನಡೆಸಲು ಶಿಕ್ಷಕ ಸಂಜಯ್‌ ಜಾಧವ್‌ ಅವರನ್ನು ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದರು. ಮಂಗಳವಾರ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. 

ಮೇ 5ರಂದು ನಡೆದಿದ್ದ ‘ನೀಟ್‌’ನಲ್ಲಿ ಹಣ ನೀಡಲು ಸಿದ್ಧವಿದ್ದ ಅಭ್ಯರ್ಥಿಗಳಿಗೆ ನೆರವಾಗುವುದಕ್ಕಾಗಿ ಅಕ್ರಮ ಜಾಲವೊಂದನ್ನು ನಿರ್ವಹಿಸುತ್ತಿದ್ದ ಆರೋಪದಲ್ಲಿ ಎಟಿಎಸ್‌ ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಪೈಕಿ ಜಿಲ್ಲಾ ಪರಿಷತ್‌ ಶಾಲೆಯ ಮುಖ್ಯ ಶಿಕ್ಷಕ ಜಲೀಲ್‌ ಖಾನ್‌ ಉಮರ್‌ ಖಾನ್‌ ಪಠಾಣ್‌ ಮತ್ತು ಜಾಧವ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನಿಬ್ಬರು ತಲೆ ಮರೆಸಿಕೊಂಡಿದ್ದಾರೆ. 

ಪಠಾಣ್‌ ಅವರನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಅವರನ್ನೂ ಜುಲೈ 2ರವರೆಗೆ ಪೊಲೀಸ್‌ ಕಸ್ಟಡಿಗೆ ನ್ಯಾಯಾಲಯ ಒಪ್ಪಿಸಿತ್ತು. 

ನೀಟ್‌ ರದ್ದತಿಗೆ ಎಸ್‌ಪಿ ಆಗ್ರಹ (ಲಖನೌ ವರದಿ): ನೀಟ್‌–ಯುಜಿ ಅಕ್ರಮದ ವಿರುದ್ಧ ಮಂಗಳವಾರ ಲಖನೌದಲ್ಲಿ ಪ್ರತಿಭಟನೆ ನಡೆಸಿರುವ ಸಮಾಜವಾದಿ ಪಕ್ಷದ ಯುವ ಘಟಕ, ನೀಟ್‌ ರದ್ದು ಮಾಡಬೇಕು ಮತ್ತು ಶಿಕ್ಷಣ ಸಚಿವ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ. 

ಪಕ್ಷದ ಪ್ರಧಾನ ಕಚೇರಿಯಿಂದ ಮೆರಣಿಗೆ ಆರಂಭಿಸಿದ ಪ್ರತಿಭಟನಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಮೆರವಣಿಗೆ ತಡೆಯಲು ವಿಕ್ರಮಾದಿತ್ಯ ಮಾರ್ಗದಲ್ಲಿ ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ಗಳನ್ನು ಹತ್ತಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರವನ್ನು ನಡೆಸಿದರಲ್ಲದೆ, ಎಲ್ಲರನ್ನೂ ವಶಕ್ಕೆ ಪಡೆದರು. 

ಪ್ರಶ್ನೆಪತ್ರಿಕೆ ಸೋರಿಕೆ: ಜೀವಾವಧಿ ಶಿಕ್ಷೆ, ₹1 ಕೋಟಿ ದಂಡ

ಲಖನೌ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ತಡೆಯುವುದಕ್ಕಾಗಿ ಉತ್ತರ ಪ್ರದೇಶದಲ್ಲಿ ಕಠಿಣ ಕಾನೂನು ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. 

ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಅಪರಾಧ ಸಾಬೀತಾದರೆ ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆಯ ಜೊತೆಗೆ ₹1 ಕೋಟಿಯಷ್ಟು ದಂಡ ವಿಧಿಸುವ ಕಾಯ್ದೆ ಜಾರಿಗೆ ಯೋಗಿ ಆದಿತ್ಯನಾಥ್‌ ಸರ್ಕಾರ ನಿರ್ಧರಿಸಿದ್ದು, ಮಂಗಳವಾರ ನಡೆದ ಸಚಿವ ಸಂಪುಟ ಸಭೆಯು ‘ಉತ್ತರ ಪ್ರದೇಶ ನಾಗರಿಕ ಪರೀಕ್ಷೆಗಳು (ಅಕ್ರಮ ತಡೆ) ಸುಗ್ರೀವಾಜ್ಞೆ–2024’ಕ್ಕೆ ಅನುಮೋದನೆ ನೀಡಿದೆ. 

ಪ್ರಸ್ತುತ ವಿಧಾನಸಭಾ ಅಧಿವೇಶನ ನಡೆಯದಿರುವುದರಿಂದ ಕಾಯ್ದೆ ಜಾರಿಗಾಗಿ ಸುಗ್ರೀವಾಜ್ಞೆ ಹೊರಡಿಸಲಾಗಿದೆ ಎಂದು ಮೂಲಗಳು ಹೇಳಿವೆ. 

‘ಸುಗ್ರೀವಾಜ್ಞೆಯ ನಿಯಮಗಳು, ನಾಗರಿಕ ಸೇವೆಗಳ ನೇಮಕಾತಿ ಪರೀಕ್ಷೆಗಳು, ಹುದ್ದೆ ಕಾಯಂ ಅಥವಾ ಬಡ್ತಿ ಪರೀಕ್ಷೆಗಳು ಮಾತ್ರವಲ್ಲದೇ ಪದವಿ, ಡಿಪ್ಲೊಮಾ ಹಾಗೂ ಇತರ ಕೋರ್ಸ್‌ಗಳ ಪ್ರವೇಶ ಪರೀಕ್ಷೆಗಳಿಗೆ ಅನ್ವಯವಾಗುತ್ತವೆ’ ಎಂದು ಸರ್ಕಾರದ ವಕ್ತಾರರೊಬ್ಬರು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.