ADVERTISEMENT

ದೇಶದಾದ್ಯಂತ ‘ಚಕ್ಕಾ ಜಾಮ್’ ಚಳವಳಿ

ಪಂಜಾಬ್, ಹರಿಯಾಣದಲ್ಲಿ ತೀವ್ರ ಪ್ರತಿಭಟನೆ; ಎಲ್ಲೆಡೆ ರಸ್ತೆ ತಡೆದು ಆಕ್ರೋಶ

ಪಿಟಿಐ
Published 6 ಫೆಬ್ರುವರಿ 2021, 19:56 IST
Last Updated 6 ಫೆಬ್ರುವರಿ 2021, 19:56 IST
ಜಲಂಧರ್–ನವದೆಹಲಿ ಹೆದ್ದಾರಿಯಲ್ಲಿ ಶನಿವಾರ ರೈತರು ರಸ್ತೆ ತಡೆ ನಡೆಸಿದರು–ಪಿಟಿಐ ಚಿತ್ರ
ಜಲಂಧರ್–ನವದೆಹಲಿ ಹೆದ್ದಾರಿಯಲ್ಲಿ ಶನಿವಾರ ರೈತರು ರಸ್ತೆ ತಡೆ ನಡೆಸಿದರು–ಪಿಟಿಐ ಚಿತ್ರ   

ಚಂಡೀಗಡ/ನವದೆಹಲಿ: ಪಂಜಾಬ್, ಹರಿಯಾಣ ಸೇರಿದಂತೆ ದೇಶದಾದ್ಯಂತ ಶನಿವಾರ ಮೂರು ಗಂಟೆಗಳ ಕಾಲ ರೈತರು ‘ಚಕ್ಕಾ ಜಾಮ್’ (ರಸ್ತೆ ತಡೆ) ಆಂದೋಲನವನ್ನು ಶಾಂತಿಯುತವಾಗಿ ನಡೆಸಿದ್ದಾರೆ. ಟ್ರ್ಯಾಕ್ಟರ್- ಟ್ರೇಲರ್‌ಗಳನ್ನು ರಸ್ತೆ ಮಧ್ಯದಲ್ಲಿ ನಿಲ್ಲಿಸಿ ರೈತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತ ಸಂಘಟನೆಗಳು ದೆಹಲಿ ಗಡಿಯಲ್ಲಿ ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ಹಾಗೂ ಪ್ರತಿಭಟನಾ ಸ್ಥಳಗಳ ಸುತ್ತಮುತ್ತ ಅಂತರ್ಜಾಲ ನಿಷೇಧಿಸಿರುವುದನ್ನು ಖಂಡಿಸಿ ರಾಷ್ಟ್ರವ್ಯಾಪಿ ಆಂದೋಲನಕ್ಕೆ ಕರೆ ನೀಡಲಾಗಿತ್ತು. ಉತ್ತರ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಹೋರಾಟ ನಡೆಸುವುದಿಲ್ಲ ಎಂದು ರೈತ ಸಂಘಟನೆಗಳ ಒಕ್ಕೂಟ ತಿಳಿಸಿತ್ತು.

ಪಂಜಾಬ್ ಮತ್ತು ಹರಿಯಾಣದಲ್ಲಿ ಪ್ರತಿಭಟನೆ ಜೋರಾಗಿತ್ತು. ಸಂಗ್ರೂರ್, ಬರ್ನಾಲಾ ಮತ್ತು ಭಟಿಂಡಾ ಸೇರಿದಂತೆಪಂಜಾಬ್‌ನ 15 ಜಿಲ್ಲೆಗಳ 33 ಸ್ಥಳಗಳಲ್ಲಿ ರಸ್ತೆತಡೆ ನಡೆಸಲಾಯಿತು ಎಂದು ಭಾರತಿ ಕಿಸಾನ್ ಯೂನಿಯನ್ (ಏಕ್ತಾ ಉಗ್ರಾಹಣ್) ಪ್ರಧಾನ ಕಾರ್ಯದರ್ಶಿ ಸುಖದೇವ್ ಸಿಂಗ್ ಕೊಕ್ರಿಕಲನ್ ತಿಳಿಸಿದ್ದಾರೆ.

ADVERTISEMENT

ಟ್ರ್ಯಾಕ್ಟರ್-ಟ್ರೇಲರ್ ಮತ್ತು ಇತರ ವಾಹನಗಳನ್ನು ರಸ್ತೆಗಳಲ್ಲಿ ನಿಲ್ಲಿಸಿದ ರೈತರು, ‘ಜೈ ಜವಾನ್, ಜೈ ಕಿಸಾನ್’ ಮತ್ತು ‘ಕಿಸಾನ್ ಏಕ್ತಾ ಜಿಂದಾಬಾದ್’ ಎಂಬ ಘೋಷಣೆಗಳೊಂದಿಗೆ ಭಿತ್ತಿ ಫಲಕಗಳನ್ನು ಪ್ರದರ್ಶಿಸಿದರು.

ಮತ್ತೆ ಅಂತರ್ಜಾಲ ಸ್ಥಗಿತ: ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿರುವ ದೆಹಲಿಯ ಸಿಂಘು, ಗಾಜಿಪುರ ಮತ್ತು ಟಿಕ್ರಿ ಗಡಿಗಳಲ್ಲಿ ತಾತ್ಕಾಲಿಕವಾಗಿ ಅಂತರ್ಜಾಲ ಸೇವೆಗಳನ್ನು ಸ್ಥಗಿತಗೊಳಿಸಲು ಗೃಹ ಸಚಿವಾಲಯ ಆದೇಶಿಸಿತ್ತು.

ರೈತರು ‘ಚಕ್ಕಾ ಜಾಮ್‌’ಗೆ ಕರೆ ನೀಡಿದ್ದರಿಂದ ಈ ಮೂರು ಪ್ರದೇಶಗಳಿಗೆ ಹೊಂದಿಕೊಂಡ ಜಾಗಗಳಲ್ಲಿ 24 ಗಂಟೆಗಳ ಕಾಲ ಇಂಟರ್ನೆಟ್ ಸ್ಥಗಿತಗೊಳಿಸುವ ಆದೇಶ ಹೊರಡಿಸಲಾಗಿತ್ತು.

‘ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅ.2ರವರೆಗೂ ಧರಣಿ: ಟಿಕಾಯತ್

ಕೇಂದ್ರ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಲು ಆಗ್ರಹಿಸಿ ನಡೆಸುತ್ತಿರುವ ಹೋರಾಟವು ಅಕ್ಟೋಬರ್ 2ರವರೆಗೂ ಮುಂದುವರಿಯಲಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ರಾಷ್ಟ್ರೀಯ ವಕ್ತಾರರೂ ಆಗಿರುವ ರೈತ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ.

‘ಚಕ್ಕಾ ಜಾಮ್ ಸಂದರ್ಭದಲ್ಲಿ ಶಾಂತಿ ಕದಡಲು ಕೆಲವು ದುಷ್ಕರ್ಮಿಗಳು ಯತ್ನಿಸುತ್ತಿದ್ದರು ಎಂಬ ಮಾಹಿತಿ ಸಿಕ್ಕಿತ್ತು. ಆ ಕಾರಣಕ್ಕೆ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಪ್ರತಿಭಟನೆ ನಡೆಸಲಿಲ್ಲ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಮಹಾರಾಷ್ಟ್ರದಲ್ಲಿ 40 ಜನ ವಶಕ್ಕೆ (ಮುಂಬೈ ವರದಿ): ಮಹಾರಾಷ್ಟ್ರದ ಕರಾಡ್, ಕೊಲ್ಲಾಪುರ ಸೇರಿದಂತೆ ಹಲವು ಕಡೆಗಳಲ್ಲಿ ರಸ್ತೆ ತಡೆ ನಡೆಸಲಾಯಿತು. ಕಾಂಗ್ರೆಸ್ ಮುಖಂಡ ಪೃಥ್ವಿರಾಜ್ ಚವಾಣ್ ಅವರ ಪತ್ನಿ ಸತ್ವಶೀಲ ಚವಾಣ್ ಸೇರಿದಂತೆ 40ಕ್ಕೂ ಹೆಚ್ಚು ಪ್ರತಿಭಟನಕಾರರನ್ನು ವಶಕ್ಕೆ ಪಡೆಯಲಾಯಿತು.

ಕೊಲ್ಲಾಪುರದಲ್ಲಿ ಸ್ವಾಭಿಮಾನಿ ಶೇತ್ಕರಿ ಸಂಘಟನೆಯ ಮುಖಂಡ ರಾಜು ಶೆಟ್ಟಿ ಅವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ದಾಭೋಲ್ಕರ್ ಚೌಕದಲ್ಲಿ ರಸ್ತೆ ತಡೆ ನಡೆಸಿದ ಕೆಲವು ರೈತರನ್ನು ವಶಕ್ಕೆ ಪಡೆಯಲಾಯಿತು. ರಾಜಸ್ಥಾನದ ದಲ್ಲಿ ರೈತರ ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸಿತ್ತು.

ತಮಿಳುನಾಡಿನ ತಂಜಾವೂರು, ನಾಗಪಟ್ಟನಂ ಮತ್ತು ತಿರುವರೂರು ಸೇರಿದಂತೆ ಹಲವು ಕಡೆ ರೈತ ಪ್ರತಿಭಟನೆ ನಡೆದಿದೆ. ರಾಜ್ಯದಲ್ಲಿ ಪ್ರತಿಭಟನೆಯನ್ನು ಮುನ್ನಡೆಸಿದ ತಮಿಳುನಾಡು ರೈತ ಸಂಘದ ಸಮನ್ವಯ ಸಮಿತಿ ಮುಖ್ಯಸ್ಥ ಪಿ.ಆರ್. ಪಾಂಡಿಯನ್, ‘ರೈತರಿಗೆ ಆಗಿರುವ ಅನ್ಯಾಯದ ವಿರುದ್ಧ ಈ ಹೋರಾಟ ನಡೆಸುತ್ತಿದ್ದೇವೆ. ಮೋದಿ ಅವರು ರೈತರಿಗೆ ದೆಹಲಿ ಪ್ರವೇಶಕ್ಕೆ ಅನುಮತಿ ನೀಡದಿದ್ದಲ್ಲಿ, ಪ್ರಧಾನಿ ತಮಿಳುನಾಡಿಗೆ ಭೇಟಿ ನೀಡಲು ಬಿಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು. ಮುಂದಿನ ತಿಂಗಳು ಪ್ರಧಾನಿ ತಮಿಳುನಾಡಿಗೆ ಭೇಟಿ ನೀಡುವ ಕಾರ್ಯಕ್ರಮವಿದೆ.

ದೆಹಲಿಯಲ್ಲಿ ಬಿಗಿಭದ್ರತೆ

ರೈತರ ಪ್ರತಿಭಟನೆಯ ಕಾರಣ ದೆಹಲಿಯಾದ್ಯಂತ ಪೊಲೀಸ್ ಭದ್ರತೆ ಹೆಚ್ಚಿಸಲಾಗಿತ್ತು. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಅರೆಸೇನಾ ಪಡೆಗಳು ಸೇರಿದಂತೆ ಸಾವಿರಾರು ಪೊಲೀಸ್‌ ಸಿಬ್ಬಂದಿಯನ್ನು ದೆಹಲಿಯ ಎಲ್ಲಾ ಗಡಿ ಕೇಂದ್ರಗಳಲ್ಲಿ ನಿಯೋಜಿಸಲಾಗಿತ್ತು.

‘ದೆಹಲಿಯ ಸುತ್ತಮುತ್ತಲಿನ ಸೂಕ್ಷ್ಮ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆಗೆ ಅಡ್ಡಿಯಿಲ್ಲ’ ಎಂದು ಉತ್ತರ ಪ್ರದೇಶದ ಪೊಲೀಸ್ ವಕ್ತಾರ ಅತುಲ್ ಶ್ರೀವಾಸ್ತವ ತಿಳಿಸಿದ್ದಾರೆ.

50 ಜನರ ಬಂಧನ: ರೈತರು ನೀಡಿದ್ದ ‘ಚಕ್ಕಾ ಜಾಮ್’ ಕರೆಯನ್ನು ಬೆಂಬಲಿಸಿ, ದೆಹಲಿಯ ಶಾಹೀದಿ ಪಾರ್ಕ್ ಬಳಿ ಪ್ರತಿಭಟನೆ ನಡೆಸಿದ 50 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೆಟ್ರೊಸೇವೆ ಕೆಲ ಸಮಯ ರದ್ದು: ಪ್ರತಿಭಟನೆ ಕಾರಣಕ್ಕೆ ದೆಹಲಿಯ ಮಂಡಿ ಹೌಸ್ ಮತ್ತು ಐಟಿಒ ಸೇರಿದಂತೆ ಹತ್ತು ದೆಹಲಿ ಮೆಟ್ರೊ ನಿಲ್ದಾಣಗಳನ್ನು ಶನಿವಾರ ಮುಚ್ಚಲಾಗಿತ್ತು. ಮಧ್ಯಾಹ್ನ 3 ಗಂಟೆಗೆ ಪ್ರತಿಭಟನೆ ಮುಗಿದ ನಂತರ ಮತ್ತೆ ತೆರೆಯಲಾಯಿತು.

ರೈತರಿಗೆ ಪ್ರಚೋದನೆ: ಆರೋಪ

ಕೃಷಿ ಕಾನೂನುಗಳು ರೈತರಿಗೆ ಹೇಗೆ ಹಾನಿಕಾರಕವೆಂದು ಸಾಬೀತುಪಡಿಸುವಂತೆ ಹೋರಾಟಗಾರರಿಗೆ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಸವಾಲು ಹಾಕಿದ್ದಾರೆ.

‘ರೈತರ ಆಂದೋಲನದ ಹಿಂದೆ ಇರುವವರು ರಾಷ್ಟ್ರ ಒಡೆಯಲು ಬಯಸಿದ್ದಾರೆ. ಜಸ್ಟೀಸ್ ಫಾರ್ ಸಿಖ್ ಸಂಘಟನೆ ಸೇರಿದಂತೆ ಅಮೆರಿಕ ಮೂಲದ ಸಿಖ್ಖರ ಸಂಘಟನೆಗಳು ಮತ್ತು ಪಾಕಿಸ್ತಾನ ಮೂಲದ 302 ಟ್ವಿಟರ್ ಖಾತೆಗಳ ಮೂಲಕ ರೈತರಿಗೆ ಪ್ರಚೋದನೆ ನೀಡಲಾಗುತ್ತಿದೆ ಎಂದು ರಾವತ್ ಶನಿವಾರ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.