ಗುವಾಹಟಿ: ಜೆಎಂಎಂ ನಾಯಕ, ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್ ಅವರ ಮೇಲೆ ಕಳೆದ ಐದು ತಿಂಗಳಿನಿಂದ ಪೊಲೀಸರು ನಿಗಾ ಇರಿಸಿದ್ದರು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈಚೆಗೆ ಚಂಪೈ ಸೊರೇನ್ ಅವರು ದೆಹಲಿಯಲ್ಲಿ ತಂಗಿದ್ದ ಹೋಟೆಲ್‌ನಲ್ಲಿ ಇಬ್ಬರು ಸಬ್ ಇನ್ಸ್‌ಪೆಕ್ಟರ್‌ಗಳು ಸಿಕ್ಕಿಬಿದ್ದಿದ್ದರು. ಇದರ ಬೆನ್ನಲ್ಲೇ ಚಂಪೈ ಮೇಲೆ ಪೊಲೀಸರು ನಿಗಾ ಇರಿಸಿದ್ದ ಸಂಗತಿ ಬಹಿರಂಗವಾಗಿದೆ’ ಎಂದು ಹೇಳಿದ್ದಾರೆ.
‘ಚಂಪೈ ಸೊರೇನ್ ದೆಹಲಿಗೆ ತೆರಳಿದ್ದ ವಿಮಾನದಲ್ಲೇ ಇನ್ಸ್‌ಪೆಕ್ಟರ್‌ಗಳು ಕೂಡ ಪ್ರಯಾಣಿಸಿದ್ದಾರೆ. ಜತೆಗೆ, ಚಂಪೈ ಅವರು ತಂಗಿದ್ದ ಹೋಟೆಲ್‌ನಲ್ಲೇ ರೂಮ್ ಕಾಯ್ದಿರಿಸಿದ್ದಾರೆ. ಇದು ಬೇಹುಗಾರಿಕೆ ಪ್ರಕರಣ ಎಂಬುದು ಸ್ಪಷ್ಟವಾಗಿದೆ. ಸಿಕ್ಕಿಬಿದ್ದಿರುವ ಅಧಿಕಾರಿಗಳ ವಿರುದ್ಧ ದೆಹಲಿಯ ಚಾಣಕ್ಯಪುರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ’ ಎಂದು ಶರ್ಮಾ ತಿಳಿಸಿದ್ದಾರೆ.
ಆಗಸ್ಟ್ 30ರಂದು ರಾಂಚಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಚಂಪೈ ಸೊರೇನ್ ಅವರು ಬಿಜೆಪಿ ಸೇರಲಿದ್ದಾರೆ ಎಂದು ಈಚೆಗೆ ಶರ್ಮಾ ಹೇಳಿದ್ದರು. ಜತೆಗೆ ಚಂಪೈ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ದೆಹಲಿಯಲ್ಲಿ ಭೇಟಿಯಾದ ಚಿತ್ರವನ್ನು ಹಿಮಂತ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದರು.
ಜೆಎಂಎಂ ನಾಯಕತ್ವದ ವಿರುದ್ಧ ಅಸಮಾಧಾನ ಹೊರಹಾಕಿದ್ದ ಚಂಪೈ, ‘ಮುಂದಿನ ರಾಜಕೀಯ ನಡೆಯ ಬಗ್ಗೆ ಶೀಘ್ರದಲ್ಲೇ ನಿರ್ಧರಿಸುತ್ತೇನೆ’ ಎಂದಿದ್ದರು. ಅವರು ಬಿಜೆಪಿ ಸೇರಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡಿದ್ದವು.
ಬಿಜೆಪಿಯು ತಮ್ಮ ಪಕ್ಷದ ಶಾಸಕರನ್ನು ಖರೀದಿಸುತ್ತಿದೆ ಎಂದು ಜೆಎಂಎಂ ನಾಯಕ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಈಚೆಗೆ ಆರೋಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.