ADVERTISEMENT

Jharkhand Politics: ಸರ್ಕಾರ ರಚನೆಗೆ ಮತ್ತೊಮ್ಮೆ ಹಕ್ಕು ಪ್ರತಿಪಾದಿಸಿದ ಚಂಪೈ

ರೆಸಾರ್ಟ್‌ ರಾಜಕಾರಣ ಶುರು, ಹೈದರಾಬಾದ್‌ನತ್ತ ಹೊರಟ ಜೆಎಂಎಂ ಮೈತ್ರಿಕೂಟದ ಶಾಸಕರು?

ಪಿಟಿಐ
Published 1 ಫೆಬ್ರುವರಿ 2024, 23:30 IST
Last Updated 1 ಫೆಬ್ರುವರಿ 2024, 23:30 IST
<div class="paragraphs"><p>ಚಂಪೈ ಸೊರೇನ್‌</p></div>

ಚಂಪೈ ಸೊರೇನ್‌

   

ಪಿಟಿಐ ಚಿತ್ರ

ರಾಂಚಿ: ರಾಜಕೀಯ ಬಿಕ್ಕಟ್ಟು ಉದ್ಭವಿಸಿರುವ ಜಾರ್ಖಂಡ್‌ನಲ್ಲಿ ಜೆಎಂಎಂ ಶಾಸಕಾಂಗ ಪಕ್ಷದ ನಾಯಕ ಚಂಪೈ ಸೊರೇನ್‌ ಅವರು ಹೊಸ ಸರ್ಕಾರ ರಚನೆಗೆ ಆದಷ್ಟು ಬೇಗ ಅವಕಾಶ ನೀಡಬೇಕೆಂದು ರಾಜ್ಯಪಾಲ ಸಿ.ಪಿ. ರಾಧಾಕೃಷ್ಣ ಅವರಿಗೆ ಗುರುವಾರ ಮತ್ತೊಮ್ಮೆ ಒತ್ತಾಯಿಸಿದ್ದಾರೆ.

ADVERTISEMENT

ಚಂಪೈ ಅವರಿಗೆ ಶಾಸಕರ ಬೆಂಬಲ ಸಾಬೀತುಪಡಿಸಿ, ಹೊಸ ಸರ್ಕಾರ ರಚಿಸಲು ರಾಜ್ಯಪಾಲರು ಸದ್ಯಕ್ಕೆ ಆಹ್ವಾನ ನೀಡಿಲ್ಲ. ಇದು ರಾಜ್ಯದಲ್ಲಿ ರಾಜಕೀಯ ಅನಿಶ್ಚಿತತೆಯನ್ನು ಸೃಷ್ಟಿಸಿದೆ.

‘ಜಾರ್ಖಂಡ್‌ನಲ್ಲಿ ಯಾವುದೇ ಸರ್ಕಾರವಿಲ್ಲದಂತಾಗಿ 20 ಗಂಟೆಗಳಿಗೂ ಹೆಚ್ಚು ಸಮಯ ಆಗಿದ್ದು, ಪರಿಸ್ಥಿತಿ ಗೊಂದಲಮಯವಾಗಿದೆ. ಹೊಸ ಸರ್ಕಾರ ರಚನೆಗೆ ಶೀಘ್ರ ನಿರ್ಧಾರ ತೆಗೆದುಕೊಳ್ಳುವಂತೆ ರಾಜ್ಯಪಾಲರಿಗೆ ವಿನಂತಿಸಿದ್ದೇವೆ. ರಾಜ್ಯಪಾಲರು ಈ ಬಗ್ಗೆ ಶೀಘ್ರ ನಿರ್ಧರಿಸುವುದಾಗಿ ಜೆಎಂಎಂ ಮೈತ್ರಿಕೂಟದ ನಿಯೋಗಕ್ಕೆ ಭರವಸೆ ನೀಡಿದ್ದಾರೆ’ ಎಂದು ಚಂಪೈ ಸೊರೇನ್ ಅವರು ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾದ ನಂತರ ತಿಳಿಸಿದರು.

‘ನಾವು ಒಗ್ಗಟ್ಟಾಗಿ ನಿಲ್ಲುತ್ತೇವೆ. ನಮ್ಮ ಮೈತ್ರಿ ತುಂಬಾ ಗಟ್ಟಿಯಾಗಿದೆ. ಯಾರೂ ಅದನ್ನು ಮುರಿಯಲು ಸಾಧ್ಯವಿಲ್ಲ’ ಎಂದು ಚಂಪೈ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

‘ರಾಜ್ಯಪಾಲರು ನಮ್ಮನ್ನು ಸರ್ಕಾರ ರಚಿಸಲು ಆಹ್ವಾನಿಸದಿದ್ದರೆ ನಾವು ನಾಳೆ (ಶುಕ್ರವಾರ) ಮಧ್ಯಾಹ್ನ ಮತ್ತೆ ರಾಜ್ಯಪಾಲರ ಭೇಟಿಗೆ  ಸಮಯ ಕೇಳುತ್ತೇವೆ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಅಲಂಗೀರ್ ಆಲಂ ಹೇಳಿದರು.

ಸರ್ಕಾರ ರಚನೆ ಕುರಿತು ಶೀಘ್ರ ನಿರ್ಧಾರ ಕೈಗೊಳ್ಳದಿದ್ದರೆ, ಶಾಸಕರ ಕುದುರೆ ವ್ಯಾಪಾರಕ್ಕೆ ದಾರಿಯಾಗುತ್ತದೆ, ಇದಕ್ಕೆ ಯಾರು ಹೊಣೆ ಎಂದು ಶಾಸಕರ ಸಭೆಯಲ್ಲಿ ಆತಂಕ ವ್ಯಕ್ತವಾಗಿದೆ ಎಂದೂ ಆಲಂ ಹೇಳಿದರು.

ಆಲಂ, ಆರ್‌ಜೆಡಿ ಶಾಸಕ ಸತ್ಯಾನಂದ್ ಭೋಕ್ತಾ, ಸಿಪಿಎಂಎಲ್ ಶಾಸಕ ವಿನೋದ್ ಸಿಂಗ್ ಮತ್ತು ಶಾಸಕ ಪ್ರದೀಪ್ ಯಾದವ್ ಅವರು ಇದಕ್ಕೂ ಮೊದಲು ಚಂಪೈ ಸೊರೇನ್ ಅವರೊಂದಿಗೆ ಸಭೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.