ಗೊಡ್ಡಾ, ಜಾರ್ಖಂಡ್: ಜೆಎಂಎಂ ನಾಯಕ ಚಂಪೈ ಸೊರೆನ್ ಅವರು ಬಿಜೆಪಿ ಸೇರಲಿದ್ದಾರೆ ಎಂಬ ಊಹಾಪೋಹಗಳ ನಡುವೆಯೇ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಕಮಲ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ.
ಬಿಜೆಪಿಯು ನಮ್ಮ ಶಾಸಕರನ್ನು ‘ಖರೀದಿ’ಸುವ ಮತ್ತು ಸಮಾಜದಲ್ಲಿ ಒಡಕು ಉಂಟುಮಾಡುವ ಕೆಲಸದಲ್ಲಿ ನಿರತವಾಗಿದೆ ಎಂದು ಅವರು ಭಾನುವಾರ ಆರೋಪಿಸಿದ್ದಾರೆ.
ಜೆಎಂಎಂ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಚಂಪೈ ಅವರು ದೆಹಲಿಗೆ ಪ್ರಯಾಣಿಸಿದ ಬೆನ್ನಲ್ಲೇ ಹೇಮಂತ್ ಸೊರೇನ್ ಈ ಹೇಳಿಕೆ ನೀಡಿದ್ದಾರೆ. ಚಂಪೈ ಅವರು ನವದೆಹಲಿಯಲ್ಲಿ ಬಿಜೆಪಿ ಸೇರುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ. ಅವರು ಕೋಲ್ಕತ್ತದಿಂದ ದೆಹಲಿಗೆ ತೆರಳಿದ್ದಾಗಿ ಆಪ್ತರೊಬ್ಬರು ತಿಳಿಸಿದ್ದಾರೆ.
ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮುಖ್ಯಮಂತ್ರಿ, ‘ಬುಡಕಟ್ಟು ಜನರು, ದಲಿತರು, ಹಿಂದುಳಿದ ವರ್ಗದವರು ಮತ್ತು ಅಲ್ಪಸಂಖ್ಯಾತರ ನಡುವೆ ದ್ವೇಷವನ್ನು ಬಿತ್ತಿ ಪರಸ್ಪರ ಹೊಡೆದಾಡುವಂತೆ ಮಾಡಲು ಬಿಜೆಪಿಯವರು ಗುಜರಾತ್, ಅಸ್ಸಾಂ ಮತ್ತು ಮಹಾರಾಷ್ಟ್ರದಿಂದ ಇಲ್ಲಿಗೆ ಜನರನ್ನು ಕರೆತಂದಿದ್ದಾರೆ’ ಎಂದು ಆರೋಪಿಸಿದರು.
‘ಈ ಜನರು (ಬಿಜೆಪಿಯವರು) ಸಮಾಜದಲ್ಲಿ ಮಾತ್ರವಲ್ಲದೆ, ಕುಟುಂಬಗಳು ಮತ್ತು ಪಕ್ಷಗಳಲ್ಲಿ ಒಡಕು ಮೂಡಿಸುತ್ತಿದ್ದಾರೆ. ನಮ್ಮ ಶಾಸಕರನ್ನು ಸೆಳೆಯಲು ಮುಂದಾಗಿದ್ದಾರೆ. ಹಣವನ್ನು ಕಂಡರೆ ರಾಜಕಾರಣಿಗಳು ಅತ್ತ–ಇತ್ತ ಹೋಗಲು ಹೆಚ್ಚು ಸಮಯ ಬೇಕಾಗುವುದಿಲ್ಲ’ ಎಂದಿದ್ದಾರೆ.
‘ಸಿ.ಎಂ. ಆಗಿ ಅವಮಾನ ಎದುರಿಸಿದೆ’
‘ಜಾರ್ಖಂಡ್‌ನ ಮುಖ್ಯಮಂತ್ರಿಯಾಗಿ ಸಾಕಷ್ಟು ಅವಮಾನ ಎದುರಿಸಿದೆ’ ಎಂದು ಚಂಪೈ ಸೊರೇನ್ ಹೇಳಿದ್ದಾರೆ. ದೆಹಲಿಗೆ ತಲುಪಿದ ಬೆನ್ನಲ್ಲೇ ಅವರ ಹೇಳಿಕೆ ಹೊರಬಿದ್ದಿದೆ. ತಾನು ಸಿ.ಎಂ. ಆಗಿದ್ದ ಅವಧಿಯಲ್ಲಿ ಜಾರಿಗೊಳಿಸಿದ್ದ ಎಲ್ಲ ಯೋಜನೆಗಳನ್ನು ಪಕ್ಷದ ಹೈಕಮಾಂಡ್ ರದ್ದುಗೊಳಿಸಿದೆ ಎಂದು ಅವರು ದೂರಿದರು. ‘ಮುಖ್ಯಮಂತ್ರಿಯೊಬ್ಬರು ಜಾರಿಗೊಳಿಸಿದ ಯೋಜನೆಗಳನ್ನು ಮತ್ತೊಬ್ಬರು ರದ್ದುಗೊಳಿಸುವುದಕ್ಕಿಂತ ಹೆಚ್ಚು ಅವಮಾನ ಪ್ರಜಾಪ್ರಭುತ್ವದಲ್ಲಿ ಬೇರೇನಿದೆ’ ಎಂದು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.