ಅಯೋಧ್ಯಾ: ‘ರಾಮಜನ್ಮಭೂಮಿಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದಲ್ಲಿ ಶ್ರೀರಾಮನ ವಿಗ್ರಹ ಪ್ರತಿಷ್ಠಾಪನೆಯ ದಿನವಾದ ಜ. 22ನೇ ತಾರೀಕು ಆಗಸ್ಟ್ 15ರಷ್ಟೇ ಮಹತ್ವದ್ದು’ ಎಂದು ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ.
‘ರಾಮ ಮಂದಿರ ನಿರ್ಮಾಣವು ಹಿಂದೂಸ್ಥಾನದ ಸಮ್ಮಾನದ ಪುನರ್ ಪ್ರತಿಷ್ಠಾಪನೆಯಾಗಿದೆ. ಈ ದಿನವು ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆ’ ಎಂದು ಎಎನ್‌ಐಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
‘ಜ. 22 ಎಂಬ ದಿನಾಂಕವು ಕಾರ್ಗಿಲ್ ಅನ್ನು ಭಾರತ ವಾಪಾಸ್ ಪಡೆದಷ್ಟೇ ಹೆಮ್ಮೆಯ ದಿನ. ಅಷ್ಟು ಮಾತ್ರವಲ್ಲ 1971ರಲ್ಲಿ ಭಾರತೀಯ ಸೇನೆಯು ಪಾಕಿಸ್ತಾನದ ಸುಮಾರು ಒಂದು ಲಕ್ಷ ಸೈನಿಕರನ್ನು ಸೆರೆ ಹಿಡಿದಷ್ಟೇ ಮಹತ್ವದ ದಿನವಾಗಿರಲಿದೆ’ ಎಂದು ಚಂಪತ್ ರಾಯ್ ಹೇಳಿದ್ದಾರೆ.
ಜ. 22ರಂದು ನಡೆಯಲಿರುವ ಶ್ರೀರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯ ಸಿದ್ಧತೆ ಭರದಿಂದ ಸಾಗಿದೆ. ಸುಮಾರು 7 ಸಾವಿರ ಗಣ್ಯರನ್ನು ಸಮಿತಿ ಆಹ್ವಾನಿಸಿದೆ. ವಿಗ್ರಹ ಕೆತ್ತನೆ ಕಾರ್ಯವೂ ಪೂರ್ಣಗೊಂಡಿದ್ದು, ಜ. 16ರಿಂದ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.