ನವದೆಹಲಿ: ‘ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮಮಂದಿರ ಬಹುತೇಕ ಸಿದ್ಧಗೊಂಡಿದ್ದು, ಜ. 22ರಂದು ಶ್ರೀರಾಮ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನೆರವೇರಲಿದೆ. ಈ ಸಂದರ್ಭದಲ್ಲಿ ಅಯೋಧ್ಯೆಗೆ ಬರುವ ಬದಲು, ನೀವಿರುವ ಊರಿನಲ್ಲೇ ಇರುವ ಗುಡಿಯಲ್ಲಿ ಆನಂದ ಮಹೋತ್ಸವವನ್ನು ಆಚರಿಸಿ’ ಎಂದು ರಾಮ ಮಂದಿರ ಟ್ರಸ್ಟ್ ಕಾರ್ಯದರ್ಶಿ ಚಂಪಕ್ ರೈ ಮನವಿ ಮಾಡಿಕೊಂಡಿದ್ದಾರೆ.
‘ದೇವಾಲಯದ ಗರ್ಭಗುಡಿ ಹಾಗೂ ಮುಖ್ಯ ಸಭಾಂಗಣ ಸಿದ್ಧಗೊಂಡಿದೆ. ಜ. 22ರಂದು ಮಧ್ಯಾಹ್ನ 12ಕ್ಕೆ ಪ್ರಾಣ ಪ್ರತಿಷ್ಠಾಪನೆ ನೆರವೇರಲಿದೆ. ಆದರೆ ಇಡೀ ದೇಗುಲದ ಉದ್ದೇಶಿತ ಎಲ್ಲಾ ಕೆಲಸಗಳು ಪೂರ್ಣಗೊಳ್ಳಲು ಇನ್ನೂ ಎರಡು ವರ್ಷಗಳು ಬೇಕು’ ಎಂದು ಎನ್‌ಡಿಟಿವಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
‘ಬಹಳಷ್ಟು ಕಾಮಗಾರಿಗಳು ಬಾಕಿ ಇವೆ. ಸಾಕಷ್ಟು ಜನ ಅಯೋಧ್ಯೆಗೆ ಭೇಟಿ ನೀಡಲು ಈಗಾಗಲೇ ಯೋಜನೆ ರೂಪಿಸುತ್ತಿದ್ದಾರೆ. ಅತಿಯಾದ ಜನದಟ್ಟಣೆ ನಿಯಂತ್ರಿಸುವುದು ಅಸಾಧ್ಯ. ಹೀಗಾಗಿ ಭಕ್ತರು ತಾವಿರುವ ಸ್ಥಳದಲ್ಲೇ ದೇಗುಲಕ್ಕೆ ಭೇಟಿ ನೀಡಿ ಆನಂದ ಮಹೋತ್ಸವ ಆಚರಿಸಬೇಕು. ಅದು ದೇವ ಅಥವಾ ದೇವಿಯ ಗುಡಿಯೇ ಆಗಿರಬಹುದು. ಸಣ್ಣದೋ ಅಥವಾ ದೊಡ್ಡ ದೇಗುಲವೇ ಆಗಿರಬಹುದು. ಅಲ್ಲಿ ಭೇಟಿ ನೀಡಿ ಮಹೋತ್ಸವದಲ್ಲಿ ಪಾಲ್ಗೊಳ್ಳಿ’ ಎಂದಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಾಣ ಪ್ರತಿಷ್ಠಾಪನೆಯ ಧಾರ್ಮಿಕ ವಿಧಿ ವಿಧಾನಗಳು ಜ. 16ರಿಂದ ಆರಂಭವಾಗಲಿವೆ. ದೇವರ ಮೂರ್ತಿಯ ಪ್ರತಿಷ್ಠಾಪನಾ ಕಾರ್ಯವನ್ನು ಲಕ್ಷ್ಮಿಕಾಂತ ದೀಕ್ಷಿತ್ ಅವರು ನಡೆಸಲಿದ್ದಾರೆ’ ಎಂದು ಚಂಪತ್ ರೈ ವಿವರಿಸಿದ್ದಾರೆ.
ಭೇಟಿ ನೀಡಲಿರುವ ಸಾವಿರಾರು ಜನರಿಗಾಗಿ ಅಯೋಧ್ಯೆಯಲ್ಲಿ ಹಲವಾರು ಟೆಂಟ್‌ಗಳನ್ನು ಸ್ಥಾಪಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.