ನವದೆಹಲಿ: ಆಂಧ್ರಪ್ರದೇಶದ ಮುಖ್ಯಮಂತ್ರಿ ಹಾಗೂ ಎನ್‌ಡಿಎ ಮಿತ್ರಪಕ್ಷ ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರು ದೆಹಲಿಗೆ ತೆರಲಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವರನ್ನು ಭೇಟಿ ಮಾಡಿ ರಾಜ್ಯಕ್ಕೆ ಆರ್ಥಿಕ ನೆರವು ಒದಗಿಸುವಂತೆ ಪ್ರಸ್ತಾಪಿಸಲಿದ್ದಾರೆ ಎಂದು ತೆಲುಗು ದೇಶಂ ಪಕ್ಷದ ಮೂಲಗಳು ತಿಳಿಸಿವೆ.
ಇಂದು ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ನಾಯ್ಡು ಭೇಟಿಯಾಗಲಿದ್ದಾರೆ. ’ಸ್ವೀಕರ್ ಹಾಗೂ ಸಚಿವರ ಆಯ್ಕೆಗೆ ಪ್ರಧಾನಿ ಅವರಿಗೆ ನಾಯ್ಡು ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. 16 ಸಂಸದರ ಬಲವನ್ನು ಹೊಂದಿರುವ ಟಿಡಿಪಿ ಎನ್‌ಡಿಎ ಸರ್ಕಾರ ರಚನೆಗೆ ಪ್ರಮುಖ ಕಾರಣವಾಗಿದೆ. ಹೀಗಾಗಿ ರಾಜ್ಯಕ್ಕೆ ಆರ್ಥಿಕ ನೆರವಿನ ನಿರೀಕ್ಷೆಯಲ್ಲಿ ಪಕ್ಷ ಇದೆ ಎಂದು ವರದಿಯಾಗಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಇತರೆ ಸಚಿವರನ್ನೂ ನಾಯ್ಡು ಭೇಟಿಯಾಗಲಿದ್ದಾರೆ ಎನ್ನಲಾಗಿದೆ.
ಹಿಂದಿನ ವೈ.ಎಸ್ ಜಗನ್ ಮೋಹನ್ ರೆಡ್ಡಿ ಸರ್ಕಾರದ ಅನಾವಶ್ಯಕ ವೆಚ್ಚ, ನಿರ್ಲಕ್ಷ್ಯ ನಿರ್ಧಾರ ಸೇರಿದಂತೆ ಅವರ ಆಡಳಿತದಲ್ಲಿ ಕೈಗೊಂಡಿರುವ ನಿರ್ಣಯಗಳಿಂದಾಗಿ ರಾಜ್ಯದ ಬೊಕ್ಕಸಕ್ಕೆ ₹70,000 ಕೋಟಿ ನಷ್ಟವಾಗಿದೆ ಎಂದು ನಾಯ್ಡು ಆರೋಪಿಸಿದ್ದಾರೆ.
ಆಂಧ್ರಪ್ರದೇಶದ ನೂತನ ರಾಜಧಾನಿಯಾಗಿ ಅಮರಾವತಿಯನ್ನು ಅಭಿವೃದ್ಧಿಪಡಿಸಲು ಹಣಕಾಸಿನ ನೆರವು ಅಗತ್ಯವಿದೆ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.