ನವದೆಹಲಿ: ಓಬಳಾಪುರಂನಲ್ಲಿ ಗಣಿಗಾರಿಕೆ ನಡೆಸಲು ಹಿಂದಿನ ಸರ್ಕಾರ ನೀಡಿರುವ ಅನುಮತಿಗಳ ಅಧ್ಯಯನ ನಡೆಸಬೇಕಿದ್ದು, ಸಮಗ್ರ ಪ್ರಮಾಣಪತ್ರ ಸಲ್ಲಿಸಲು ಕಾಲಾವಕಾಶ ನೀಡಬೇಕು’ ಎಂದು ಆಂಧ್ರ ಪ್ರದೇಶ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಓಬಳಾಪುರಂ ಗಣಿ ಕಂಪನಿಯ ಗಣಿ ಗುತ್ತಿಗೆ ಪ್ರದೇಶಗಳನ್ನು ಖರೀದಿಸಿದ್ದ ಆಗಿನ ಸಚಿವ ಜಿ. ಜನಾರ್ದನ ರೆಡ್ಡಿ ಕುಟುಂಬವು ಅಕ್ರಮ ಗಣಿಗಾರಿಕೆ ನಡೆಸಿದ ಆರೋಪ 2007 ರಲ್ಲಿ ಕೇಳಿಬಂದಿತ್ತು. ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಿದ್ದ ಹಿಂದಿನ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ ಅವರು ವರದಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್ ಆದೇಶದಂತೆ ತನಿಖೆ ನಡೆಸಿದ್ದ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ), ಅಕ್ರಮ ಗಣಿಗಾರಿಕೆಯಿಂದ ಅಂತರ ರಾಜ್ಯ ಗಡಿ ಗುರುತುಗಳು ನಾಶವಾಗಿರುವುದನ್ನು ದೃಢಪಡಿಸಿತ್ತು.
ಈ ಸಂಬಂಧ ಆಂಧ್ರ ಪ್ರದೇಶ ಸರ್ಕಾರ ಸಲ್ಲಿಸಿರುವ ವಿಶೇಷ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಹಾಗೂ ಸತೀಶ್ಚಂದ್ರ ಶರ್ಮಾ ಅವರಿದ್ದ ಪೀಠಕ್ಕೆ ಆಂಧ್ರ ಸರ್ಕಾರ ಈ ಮನವಿ ಮಾಡಿತು.
ರಾಜ್ಯ ಸರ್ಕಾರ ಈಗಾಗಲೇ ಪ್ರಮಾಣಪತ್ರ ಸಲ್ಲಿಸಿದೆ ಎಂದು ಗಣಿ ಕಂಪನಿಗಳ ವಕೀಲರು ಗಮನ ಸೆಳೆದರು. ಆಗ ಆಂಧ್ರ ಸರ್ಕಾರದ ಪರ ವಕೀಲರು, ‘ಹಿಂದಿನ ಸರ್ಕಾರದ ಪ್ರಮಾಣಪತ್ರವನ್ನು ಮತ್ತೊಮ್ಮೆ ಪರಿಶೀಲಿಸಬೇಕಿದೆ. ಜತೆಗೆ, ಅಮಿಕಸ್ ಕ್ಯೂರಿ ಈಗಾಗಲೇ ವರದಿ ಸಲ್ಲಿಸಿದ್ದಾರೆ. ಇದಕ್ಕೆ ಕಾಲಾವಕಾಶ ಬೇಕು’ ಎಂದರು. ಸಮಗ್ರ ಪ್ರಮಾಣಪತ್ರ ಸಲ್ಲಿಸಲು ನ್ಯಾಯಪೀಠವು ನಾಲ್ಕು ವಾರಗಳ ಕಾಲಾವಕಾಶ ನೀಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.