ADVERTISEMENT

4ನೇ ಬಾರಿ ಆಂಧ್ರ CM ಆಗಿ ಪ್ರಮಾಣವಚನ ಸ್ವೀಕರಿಸಿದ ಚಂದ್ರಬಾಬು ನಾಯ್ಡು: ಮೋದಿ ಭಾಗಿ

ಎನ್. ಚಂದ್ರಬಾಬು ನಾಯ್ಡು ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜೂನ್ 2024, 6:25 IST
Last Updated 12 ಜೂನ್ 2024, 6:25 IST
<div class="paragraphs"><p>ಚಂದ್ರಬಾಬು ನಾಯ್ಡು</p></div>

ಚಂದ್ರಬಾಬು ನಾಯ್ಡು

   

ವಿಜಯವಾಡ: ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಹಾಗೂ ಎನ್‌ಡಿಎ ಶಾಸಕಾಂಗ ಪಕ್ಷದ ನಾಯಕ ಎನ್. ಚಂದ್ರಬಾಬು ನಾಯ್ಡು ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ವಿಜಯವಾಡದ ಹೊರವಲಯದಲ್ಲಿರುವ ಗನ್ನವರಂ ವಿಮಾನ ನಿಲ್ದಾಣದ ಬಳಿ ಇರುವ ಕೆಸರಪಲ್ಲಿ ಐಟಿ ಪಾರ್ಕ್‌ನಲ್ಲಿ ನಡೆದ ಸಮಾರಂಭದಲ್ಲಿ ನಾಯ್ಡು ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ADVERTISEMENT

ರಾಜ್ಯಪಾಲ ಎಸ್.ಅಬ್ದುಲ್ ನಜೀರ್ ಅವರು ಪ್ರಮಾಣವಚನ ಬೋಧಿಸಿದರು.

ನಾಯ್ಡು ಅವರು ನಾಲ್ಕನೇ ಅವಧಿಗೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು. ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಸಚಿವರಾಗಿ ಜನಸೇನಾದ ಪವನ್ ಕಲ್ಯಾಣ್, ನಾರಾ ಲೋಕೇಶ್ ಸಹ ಪ್ರಮಾಣವಚನ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಎನ್‌ಡಿಎ ಮೈತ್ರಿಕೂಟದ ನಾಯಕರು ಸೇರಿದಂತೆ ಲಕ್ಷಾಂತರ ಜನ ಪಾಲ್ಗೊಂಡಿದ್ದರು.

ನಾಯ್ಡು ಅವರು 1995ರಿಂದ 1999, 2004ರಿಂದ 2009 ಹಾಗೂ 2014ರಿಂದ 2019ರ ವರೆಗೆ ಒಟ್ಟು ಮೂರು ಬಾರಿ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದರು. 2019ರ ವಿಧಾನಸಭೆ ಚುನಾವಣೆಯಲ್ಲಿ ಟಿಡಿಪಿ ಪಕ್ಷ ಸೋಲು ಕಂಡಿತ್ತು.

ಆಂಧ್ರಪ್ರದೇಶದಲ್ಲಿ ಮೇ 13ರಂದು ಲೋಕಸಭಾ ಚುನಾವಣೆಯ ಜೊತೆಯಲ್ಲೇ ವಿಧಾನಸಭೆಗೂ ಮತದಾನ ನಡೆದಿತ್ತು. ವಿಧಾನಸಭೆಯ 175 ಸ್ಥಾನಗಳ ಪೈಕಿ ಟಿಡಿಪಿ 135, ಜನಸೇನಾ 21, ಬಿಜೆಪಿ 8 ಹಾಗೂ ವೈಎಸ್‌ಆರ್‌ಸಿಪಿ 11 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದವು. ಅದೇ ರೀತಿ 25 ಲೋಕಸಭಾ ಕ್ಷೇತ್ರಗಳ ಪೈಕಿ ಟಿಡಿಪಿ 16, ವೈಎಸ್‌ಆರ್‌ಸಿಪಿ 4, ಬಿಜೆಪಿ 3, ಜನಸೇನಾ 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.