ಹೈದರಾಬಾದ್: ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರ ಪರ ಜನಾಭಿಪ್ರಾಯ ರೂಪಿಸುವ ಸಲುವಾಗಿ ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳಲು ಅವರ ಕುಟುಂಬದ ಮಹಿಳಾ ಸದಸ್ಯರು ತಯಾರಿ ನಡೆಸಿದ್ದಾರೆ.
ಕೌಶಲ ಅಭಿವೃದ್ಧಿ ನಿಗಮದ ಹಣ ದುರುಪಯೋಗಪಡಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಆಂಧ್ರಪ್ರದೇಶ ಸಿಐಡಿ ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ನಾಯ್ಡು ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರಕ್ಕೆ ನಿಗದಿಪಡಿಸಿದೆ.
ನಾಯ್ಡು ಪತ್ನಿ ನಾರಾ ಭುವನೇಶ್ವರಿ ಅವರು ಯಾತ್ರೆ ಕೈಗೊಳ್ಳುವುದು ಸುಪ್ರೀಂ ಕೋರ್ಟ್‌ನ ತೀರ್ಪು ಆಧರಿಸಿದೆ. ಬಸ್ ಮೂಲಕ ನಡೆಸುವ ಯಾತ್ರೆ ಇದಾಗಿದ್ದು, ಆಂಧ್ರಪ್ರದೇಶದ ಪ್ರತಿ ಜಿಲ್ಲೆಗಳಿಗೆ ತೆರಳಿ ಅವರು ಜನಾಭಿಪ್ರಾಯ ರೂಪಿಸಲಿದ್ದಾರೆ. ತಮ್ಮ ಪತಿಯ ಬಂಧನದ ಹಿಂದೆ ರಾಜಕೀಯ ದುರುದ್ದೇಶವಿದೆ ಎಂದು ಅವರು ಜನರಿಗೆ ವಿವರಿಸಲಿದ್ದಾರೆ ಎನ್ನಲಾಗಿದೆ.
ನಾಯ್ಡು ಅವರ ವಿಧಾನಸಭಾ ಕ್ಷೇತ್ರವಾದ ಚಿತ್ತೂರಿನ ಕುಪ್ಪಂನಿಂದಲೇ ಯಾತ್ರೆ ಆರಂಭಿಸುವ ಸಾಧ್ಯತೆ ಇದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
‘ರಾಜ್ಯ ಪ್ರವಾಸಕ್ಕೆ ಸಿದ್ಧತೆಗಳು ನಡೆದಿವೆ. ಪ್ರವಾಸದ ನಕ್ಷೆಯನ್ನು ಅಂತಿಮಗೊಳಿಸಲಾಗಿದೆ. ನಾಯ್ಡು ಪರವಾಗಿ ಸುಪ್ರೀಂ ಕೋರ್ಟ್ ಆದೇಶ ನೀಡಿದರೆ ಪ್ರವಾಸ ಕೈಬಿಡಲಾಗುವುದು. ನಾಯ್ಡು ವಿರುದ್ಧವಾಗಿ ಆದೇಶ ಹೊರಬಿದ್ದರೆ ಭುವನೇಶ್ವರಿ ಅವರು ಅ.5ರಿಂದ ಪ್ರವಾಸ ಆರಂಭಿಸುವರು’ ಎಂದು ಮೂಲಗಳು ತಿಳಿಸಿವೆ.
ನಾಯ್ಡು ಅವರ ಬಂಧನ ಬಳಿಕ ಪತ್ನಿ ಭುವನೇಶ್ವರಿ ಮತ್ತು ಅವರ ಸೊಸೆ ನಾರಾ ಬ್ರಹ್ಮಣಿ ಅವರು ಪಕ್ಷದ ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ತೊಡಗಿದ್ದಾರೆ. ಗಾಂಧಿ ಜಯಂತಿ ದಿನವಾದ ಸೋಮವಾರ ಅವರು ‘ಸತ್ಯಮೇವ ಜಯತೇ’ ಎಂಬ ಹೆಸರಿನಲ್ಲಿ ನಿರಶನ ಕೈಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.