ADVERTISEMENT

ಚಂದ್ರಯಾನ–2: ತಾಂತ್ರಿಕ ದೋಷ, ಅನಿರ್ದಿಷ್ಟಾವಧಿಗೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2019, 0:20 IST
Last Updated 15 ಜುಲೈ 2019, 0:20 IST
   

ಚೆನ್ನೈ:ರಾಕೆಟ್‌ನಲ್ಲಿತಾಂತ್ರಿಕ ದೋಷಪತ್ತೆಯಾದ ಹಿನ್ನೆಲೆಯಲ್ಲಿ ಮಹತ್ವಾಕಾಂಕ್ಷಿ ಚಂದ್ರಯಾನ–2 ಬಾಹ್ಯಾಕಾಶ ಯೋಜನೆಯನ್ನು ಇಸ್ರೋ ಅನಿರ್ದಿಷ್ಟಾವಧಿಗೆ ಮುಂದೂಡಿದೆ.ಸೋಮವಾರ ನಸುಕಿನ 2.51ಕ್ಕೆ ಬಾಹ್ಯಾಕಾಶ ನೌಕೆಯ ಉಡ್ಡಯನಕ್ಕೆ ಸಮಯ ನಿಗದಿಯಾಗಿತ್ತು.ಇಡೀ ಜಗತ್ತಿನ ಚಿತ್ತ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದತ್ತ ನೆಟ್ಟಿತ್ತು.

ಚಂದ್ರನ ಮೇಲೆ ಮನುಷ್ಯ ಹೆಜ್ಜೆ ಇಟ್ಟ 50ನೇ ವರ್ಷಾಚರಣೆಗೆ ಕೇವಲ ಐದು ದಿನಗಳ ಮೊದಲು ಭಾರತದ ಮಹತ್ವದ ಬಾಹ್ಯಾಕಾಶ ಸಾಹಸಕ್ಕೆ ದಿನಾಂಕ ನಿಗದಿಯಾಗಿತ್ತು. ಅಮೆರಿಕದ ನೀಲ್ ಆರ್ಮ್‌ಸ್ಟ್ರಾಂಗ್ ಮೊದಲ ಬಾರಿಗೆ ಚಂದ್ರನ ಮೇಲೆ ಹೆಜ್ಜೆ ಇಟ್ಟ ದಿನ ಜುಲೈ 20, 1969. ಚಂದ್ರಯಾನ-2 ಉಡ್ಡಯನಕ್ಕೆ ಇಸ್ರೋ ದಿನಾಂಕ ನಿಗದಿಪಡಿಸುವಲ್ಲಿ ಈ ಅಂಶವನ್ನೂ ಈ ಹಿಂದೆ ಗಮನದಲ್ಲಿ ಇರಿಸಿಕೊಂಡಿತ್ತು. ಈಗ ಮುಂದಿನ ದಿನಾಂಕ ಎಂದು ಘೋಷಿಸಬಹುದು ಎಂಬ ಕುತೂಹಲ ಬಾಹ್ಯಾಕಾಶ ಆಸಕ್ತರಲ್ಲಿ ಮೂಡಿದೆ.

ಹೊಸ ದಿನಾಂಕ ಘೋಷಿಸುತ್ತೇವೆ

ADVERTISEMENT

ಚಂದ್ರಯಾನ-2 ಉಪಕರಣಗಳನ್ನು ಹೊತ್ತ ಬಾಹ್ಯಾಕಾಶ ವಾಹನ ವ್ಯವಸ್ಥೆಯಲ್ಲಿ ಉಡ್ಡಯನಕ್ಕೆ ಒಂದು ತಾಸು ಮೊದಲು ತಾಂತ್ರಿಕ ಸಮಸ್ಯೆಯೊಂದು ಪತ್ತೆಯಾಯಿತು. ಮುಂಜಾಗರೂಕತೆ ಕ್ರಮವಾಗಿ ಚಂದ್ರಯಾನ-2ರ ಉಡ್ಡಯನವನ್ನು ಇಂದು ರದ್ದುಪಡಿಸಲು ನಿರ್ಧರಿಸಲಾಯಿತು. ಹೊಸ ದಿನಾಂಕಗಳನ್ನು ನಂತರ ಘೋಷಿಸಲಾಗುವುದು ಎಂದು ಇಸ್ರೋ ಟ್ವೀಟ್ ಮೂಲಕ ತಿಳಿಸಿತು.

ಜುಲೈನಲ್ಲಿ ನಡೆಯುವುದು ಅನುಮಾನ

ಚಂದ್ರಯಾನ-2 ಉಡ್ಡಯನಕ್ಕೆ ಜುಲೈ 15, 16, 29 ಮತ್ತು 30 ಸೂಕ್ತ ದಿನಗಳೆಂದು ಗುರುತಿಸಲಾಗಿತ್ತು. ಇದೀಗ ಜುಲೈ 15ರಂದು ನೌಕೆ ನಭಕ್ಕೆ ನೆಗೆಯಲಿಲ್ಲ.ತಾಂತ್ರಿಕ ಪರಿಶೀಲನೆಗೆ ಕನಿಷ್ಠ 10 ದಿನಗಳು ಬೇಕು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಜುಲೈ ತಿಂಗಳಲ್ಲಿ ಕಂಡುಕೊಂಡಿದ್ದಇತರ ಮೂರು ದಿನಾಂಕಗಳಂದು ಉಡಾವಣೆ ಸಾಧ್ಯವಿಲ್ಲ.

'ಎಲ್ಲಿ ತಪ್ಪಾಗಿದೆ ಎಂಬುದನ್ನು ಪತ್ತೆ ಹಚ್ಚಿ ಸರಿಪಡಿಸಲು ಕಾಲಾವಕಾಶ ಬೇಕು. ಬಹುಶಃ ಸೆಪ್ಟೆಂಬರ್‌ ತಿಂಗಳಲ್ಲಿ ಮುಂದಿನ ದಿನಾಂಕ ನಿಗದಿಪಡಿಸಬಹುದು' ಎನ್ನುವ ಇಸ್ರೋ ಮೂಲಗಳ ಹೇಳಿಕೆಯನ್ನು 'ಹಿಂದೂಸ್ತಾನ್ ಟೈಮ್ಸ್‌' ವರದಿ ಮಾಡಿದೆ.

ಉಡ್ಡಯನಕ್ಕೆ 56 ನಿಮಿಷ 24 ಸೆಕೆಂಡ್ ಬಾಕಿಯಿತ್ತು

ಚಂದ್ರಯಾನ-2 ಉಡ್ಡಯನವನ್ನು ಟಿ-56 ನಿಮಿಷದಲ್ಲಿ ಮುಂದೂಡುವ ನಿರ್ಧಾರವನ್ನು ಇಸ್ರೋ ಪ್ರಕಟಿಸಿತು. ಇಸ್ರೋದಿಂದ ಈ ಘೋಷಣೆ ಹೊರಬಿದ್ದಾಗ ಸಮಯ ಸೋಮವಾರ ನಸುಕಿನ 1.55 ಗಂಟೆ. ಉಡ್ಡಯನಕ್ಕೆ ಕೇವಲ 56 ನಿಮಿಷ 24 ಸೆಕೆಂಡ್ ಬಾಕಿಯಿತ್ತು.

ರಾಕೆಟ್‌ನ ಸೂಕ್ಷ್ಮಪರಿಶೀಲನೆಗೆ 10 ದಿನ ಬೇಕಾಗುತ್ತೆ

ತಾಂತ್ರಿಕ ದೋಷ ಪತ್ತೆಯಾಗಿರುವ ರಾಕೆಟ್‌ ಅನ್ನು ಪ್ರಯೋಗಾಲಯಕ್ಕೆ ಮತ್ತೆ ತೆಗೆದುಕೊಂಡು ಹೋಗಬೇಕು. ಅದಕ್ಕೆ ತುಂಬಿರುವ ಇಂಧನ ಖಾಲಿ ಮಾಡಬೇಕು. ದೋಷವನ್ನು ಸರಿ ಅರ್ಥೈಸಿಕೊಂಡ ನಂತರವಷ್ಟೇ ಮುಂದಿನ ಉಡ್ಡಯನ ದಿನಾಂಕ ತಿಳಿಸಲು ಸಾಧ್ಯ. ಕನಿಷ್ಠ 10 ದಿನಗಳಾದರೂ ಬೇಕು ಎಂದು ಇಸ್ರೋ ಅಧಿಕಾರಿಗಳನ್ನು ಉಲ್ಲೇಖಿಸಿ ಐಎಎನ್‌ಎಸ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಚಂದ್ರಯಾನ-2:ಉಡ್ಡಯನ ರದ್ದು ಮಾಡುವ ನಿರ್ಧಾರ ಪ್ರಕಟಿಸುವ ಮೊದಲು

01.45 – ಹೈಡ್ರೋಜನ್‌ ಇಂಧನ ಭರ್ತಿ ಮಾಡುವ ಕೆಲಸ ಪೂರ್ಣಗೊಂಡಿದೆ.

12.15 – ಕ್ರಯೋಜನಿಕ್‌ ಎಂಜಿನ್‌ಗೆ ಇಂಧನ ಭರ್ತಿ ಮಾಡುವ ಕೆಲಸ ಪೂರ್ಣಗೊಂಡಿದ್ದು, ಈಗ ದ್ರವ ರೂಪದ ಹೈಡ್ರೋಜನ್‌ ತುಂಬಿಸುವ ಕಾರ್ಯ ಪ್ರಗತಿಯಲ್ಲಿದೆ.

11.30 –ಚಂದ್ರಯಾನ 2 ಸಿದ್ಧತೆ

11.17 – ಐತಿಹಾಸಿಕ ಚಂದ್ರಯಾನ 2 ಉಡಾವಣೆಗೆ 5 ತಾಸು ಮಾತ್ರ ಬಾಕಿ ಇದೆ.

11.05 -ಜಿಎಸ್‌ಎಲ್‌ವಿ ಎಂಕೆ3ಯ ಕ್ರಯೋಜನಿಕ್‌ ಎಂಜಿನ್‌ಗೆ ಇಂಧನ ಭರ್ತಿ ಮಾಡಲಾಗುತ್ತಿದೆ ಎಂದು ಇಸ್ರೊ ಟ್ವೀಟ್‌ ಮಾಡಿದೆ.

10.50 – ಚಂದ್ರನ ಬಗ್ಗೆ ಸಾಧ್ಯವಾದಷ್ಟು ತಿಳಿದುಕೊಳ್ಳಲು ಎಲ್ಲ ದೇಶಗಳೂ ಪ್ರಯತ್ನಿಸುತ್ತಿವೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಇಸ್ರೊ ಈ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ.

10.30 – ಕೃಷ್ಣ ಮಠಕ್ಕೆ ಭಾನುವಾರ ಭೇಟಿ ನೀಡಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಅಧ್ಯಕ್ಷ ಕೆ.ಶಿವನ್‌, ಮಹಾತ್ವಾಕಾಂಕ್ಷೆಯ ಚಂದ್ರಯಾನ-2 ನೌಕೆಯ ಯಶಸ್ವಿ ಉಡಾವಣೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.