ADVERTISEMENT

ಚಂದ್ರಯಾನ 2:  ಚಂದ್ರನ ಅಂಗಳದಲ್ಲಿ ವಿಕ್ರಮ್ ಲ್ಯಾಂಡರ್ ಅವಶೇಷ ಪತ್ತೆ 

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2019, 5:05 IST
Last Updated 3 ಡಿಸೆಂಬರ್ 2019, 5:05 IST
ಚಂದ್ರನ ಅಂಗಳದಲ್ಲಿ ವಿಕ್ರಮ್ ಅವಶೇಷ
ಚಂದ್ರನ ಅಂಗಳದಲ್ಲಿ ವಿಕ್ರಮ್ ಅವಶೇಷ   

ನವದೆಹಲಿ: ಚಂದ್ರಯಾನ 2ಲ್ಯಾಂಡರ್ ವಿಕ್ರಮ್ ಚಂದ್ರನ ಅಂಗಳದಲ್ಲಿ ರಭಸವಾಗಿ ಅಪ್ಪಳಿಸಿದ್ದು ಮೂರು ತಿಂಗಳ ನಂತರ ಇದರ ಅವಶೇಷ ಪತ್ತೆಯಾಗಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮಂಗಳವಾರ ಹೇಳಿದೆ.

ಸೆಪ್ಟೆಂಬರ್‌ 7ರಂದು ದಕ್ಷಿಣ ಧ್ರುವದಲ್ಲಿ ವಿಕ್ರಮ್‌ ಲ್ಯಾಂಡರ್‌ ಇಳಿಸುವ ಪ್ರಕ್ರಿಯೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ)ನಡೆಸಿತ್ತು. ಆದರೆ ಚಂದ್ರನ ಮೇಲ್ಮೈಯಿಂದ ಕೇವಲ 2.1 ಕಿ.ಮೀ. ಎತ್ತರದಲ್ಲಿರಬೇಕಾದರೆ ವಿಕ್ರಮ್‌ ಲ್ಯಾಂಡರ್‌ ಜತೆಗಿನ ಸಂಪರ್ಕ ಕಡಿದುಕೊಂಡಿತ್ತು.

ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿರುವ ‘ದಿ ಲೂನಾರ್‌ ರಿಕಾನೈಸೆನ್ಸ್‌ ಆರ್ಬಿಟರ್‌’(ಎಲ್‌ಆರ್‌ಒ) ಉಪಗ್ರಹವು ಸೆರೆ ಹಿಡಿದಿರುವ ಚಿತ್ರದಲ್ಲಿ ವಿಕ್ರಮ್ಲ್ಯಾಂಡರ್ ಚಂದ್ರನ ಅಂಗಳದಲ್ಲಿರುವುದು ಕಾಣಿಸುತ್ತಿದೆ ಎಂದು ನಾಸಾ ಹೇಳಿದೆ.

ADVERTISEMENT

ಭಾರತದ ಕಂಪ್ಯೂಟರ್ ಪ್ರೋಗ್ರಾಮರ್ ಮತ್ತು ಮೆಕಾನಿಕಲ್ ಇಂಜಿನಿಯರ್ ಆಗಿರುವ ಷಣ್ಮುಖ ಸುಬ್ರಮಣ್ಯನ್ ಎಂಬವರು ನಾಸಾವನ್ನು ಸಂಪರ್ಕಿಸಿದ್ದು, ಚಂದ್ರನ ಅಂಗಳದಲ್ಲಿರುವ ಎರಡು ಚಿತ್ರಗಳನ್ನು ಹೋಲಿಸಿ ನೋಡಿದ ನಂತರ ನಾಸಾ, ವಿಕ್ರಮ್ ಲ್ಯಾಂಡರ್ ಅವಶೇಷ ಪತ್ತೆಯಾಗಿರುವುದನ್ನು ದೃಢೀಕರಿಸಿದೆ.

ಷಣ್ಮುಖ ಸುಬ್ರಮಣಿಯನ್ ಅವರು ಎಲ್‌ಆರ್‌ಒ ಪ್ರಾಜೆಕ್ಟ್‌ನ್ನುಸಂಪರ್ಕಿಸಿ, ಚಂದ್ರನ ಅಂಗಳದಲ್ಲಿ ವಿಕ್ರಮ್ ಅವಶೇಷವಿರುವುದನ್ನು ತೋರಿಸಿದ್ದರು. ಆಮೇಲೆ ಚಂದ್ರನಲ್ಲಿ ವಿಕ್ರಮ್ ಇಳಿಯುವುದಕ್ಕಿಂತ ಮುನ್ನ ಮತ್ತು ನಂತರ ತೆಗೆದ ಚಿತ್ರಗಳನ್ನು ಪರಿಶೀಲಿಸಿದಾಗ, ವಿಕ್ರಮ್ ಲ್ಯಾಂಡರ್ ಅವಶೇಷವಿರುವುದು ಫೋಟೊದಲ್ಲಿ ಪತ್ತೆಯಾಗಿದೆ.

ಲ್ಯಾಂಡರ್ ಅಪ್ಪಳಿಸಿದ ಪ್ರದೇಶಕ್ಕಿಂತ ವಾಯವ್ಯ ದಿಕ್ಕಿನಲ್ಲಿ ಸುಮಾರು 750 ಮೀಟರ್ ದೂರದಲ್ಲಿ ಅವಶೇಷವಿರುವುದನ್ನು ಷಣ್ಮುಖ ತೋರಿಸಿದ್ದರು. ಎಲ್‌ಆರ್‌ಒಸಿ ತಂಡವು ಇದೇ ಪ್ರದೇಶದಲ್ಲಿ ಅವಶೇಷಗಳಿಗಾಗಿ ಹುಡುಕಾಡಿದಾಗ (70.8810°S, 22.7840°E, 834 ಮೀ) ಓರೆಯಾಗಿ ಅವಶೇಷಗಳು ಪತ್ತೆಯಾಗಿತ್ತು.

ಚಂದ್ರನ ಅಂಗಳದ ಸನಿಹ ಲ್ಯಾಂಡರ್ ತಲುಪಿದ್ದು, ಇಸ್ರೊದ ಈ ಸಾಧನೆಯನ್ನು ನಾಸಾ ಶ್ಲಾಘಿಸಿದೆ. ಚಂದ್ರನ ಅಂಗಳಕ್ಕೆ ಇಳಿಯುವ ಮುನ್ನ ಲ್ಯಾಂಡರ್ ಸಂಪರ್ಕ ಕಡಿದುಕೊಂಡಿತ್ತು. ಹೀಗಾದರೂ ಕೂಡಾ ಚಂದ್ರನ ಸನಿಹಕ್ಕೆ ತಲುಪಿದ್ದು ದೊಡ್ಡ ಸಾಧನೆ ಎಂದು ನಾಸಾ ಪ್ರಶಂಸೆ ವ್ಯಕ್ತಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.