ADVERTISEMENT

ಚಂದ್ರಯಾನ- 2: ವಿಕ್ರಂ ಲ್ಯಾಂಡರ್‌ನ ಪಯಣ ಹೇಗಿರುತ್ತದೆ?

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2019, 7:56 IST
Last Updated 6 ಸೆಪ್ಟೆಂಬರ್ 2019, 7:56 IST
   

ಬೆಂಗಳೂರು: ಚಂದ್ರನ ದಕ್ಷಿಣ ಧ್ರುವದತ್ತ ಚಲಿಸಿರುವ ಚಂದ್ರಯಾನ–2 ಬಾಹ್ಯಾಕಾಶ ನೌಕೆಯಿಂದ ‘ವಿಕ್ರಂ’ ಲ್ಯಾಂಡರ್‌ ಇಳಿಸುವ ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ.

ಶನಿವಾರ ಮುಂಜಾನೆ 1.30ರಿಂದ 2.20ರ ಅವಧಿಯಲ್ಲಿ ಮಾತೃ ನೌಕೆಯಿಂದ ಪ್ರತ್ಯೇಕ ಗೊಳ್ಳುವ ಲ್ಯಾಂಡರ್‌ ಚಂದ್ರನ ನೆಲವನ್ನು ಸ್ಪರ್ಶ ಮಾಡಲಿದೆ.

ಚಂದ್ರಯಾನ–2’ ಬಾಹ್ಯಾಕಾಶ ನೌಕೆಯ ಯಾನ ಜುಲೈ 22ರಂದು ಆರಂಭವಾಗಿತ್ತು.ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಅಂದು ಮಧ್ಯಾಹ್ನ 2.43ಕ್ಕೆ ಆರ್ಬಿಟರ್‌, ವಿಕ್ರಂ ಲ್ಯಾಂಡರ್‌ ಹಾಗೂ ಪ್ರಜ್ಞಾನ್‌ ರೋವರ್‌ ಒಳಗೊಂಡ ‘ಚಂದ್ರಯಾನ–2’ ಉಪಕರಣಗಳನ್ನು ಹೊತ್ತ ಜಿಎಸ್‌ಎಲ್‌ವಿ ಮಾರ್ಕ್‌ 3 ರಾಕೆಟ್‌ ಉಡಾವಣೆಗೊಂಡಿತ್ತು.

ADVERTISEMENT

ಕಕ್ಷೆಗಾಮಿ (ಚಂದ್ರನ ಸುತ್ತ ಸುತ್ತುವ ನೌಕೆ), ವಿಕ್ರಂ ಲ್ಯಾಂಡರ್‌ (ಚಂದ್ರನಲ್ಲಿ ಸುರಕ್ಷಿತವಾಗಿ ಇಳಿಯುವ ನೌಕೆ) ಮತ್ತು ಪ್ರಜ್ಞಾನ್‌ ರೋವರ್‌ (ಚಂದ್ರನ ಮೇಲೆ ಚಲಿಸಿ ದತ್ತಾಂಶ ಸಂಗ್ರಹಿಸುವ ನೌಕೆ) ಇವು ಚಂದ್ರಯಾನ–2ರ ಮೂರು ಭಾಗಗಳು.

ಏನಿದು ವಿಕ್ರಂ ಲ್ಯಾಂಡರ್? ಹೇಗೆ ಕಾರ್ಯ ನಿರ್ವಹಿಸುತ್ತದೆ?
ಚಂದ್ರನಲ್ಲಿ ಸುರಕ್ಷಿತವಾಗಿ ಇಳಿಯುವ ನೌಕೆಯೇವಿಕ್ರಂ ಲ್ಯಾಂಡರ್. ವಿಜ್ಞಾನಿ ವಿಕ್ರಂ ಸಾರಾಭಾಯಿ ಅವರ ಹೆಸರನ್ನು ಈ ನೌಕೆಗೆ ಇಡಲಾಗಿದೆ. ವಿಕ್ರಂ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ70 ಡಿಗ್ರಿ ದಕ್ಷಿಣ ಅಕ್ಷಾಂಶದಲ್ಲಿ ಮೆಂಜಿನಸ್ ಸಿ ಮತ್ತು ಸಿಂಪೆಲಿಯಸ್ ಎಸ್ ಹೆಸರಿನ ಕುಳಿಗಳ ನಡುವಿನ ಜಾಗದಲ್ಲಿ ಇದುಇಳಿಯಲಿದೆ.

2019 ಸೆಪ್ಟೆಂಬರ್ 7ರಂದು ಲ್ಯಾಂಡರ್‌ನಿಂದ ಪ್ರಜ್ಞಾನ್ ರೋವರ್ ಪ್ರತ್ಯೇಕಗೊಂಡು ಚಂದ್ರನ ಅಂಗಳದಲ್ಲಿ ಕಾರ್ಯಾಚರಣೆ ಆರಂಭಿಸಲಿದೆ. ಅಂದಹಾಗೆ ವಿಕ್ರಂ ಲ್ಯಾಂಡರ್ ಕಾರ್ಯಾಚರಣೆ ಅವಧಿ 14 ದಿನವಾಗಿದೆ. ಈ ದಿನಗಳಲ್ಲಿ ವಿಕ್ರಂ ಲ್ಯಾಂಡರ್ ನಿರಂತರವಾಗಿ ಬೆಂಗಳೂರು ಹೊರವಲಯಬ್ಯಾಲಾಳುನಲ್ಲಿರುವ ಇಂಡಿಯನ್ ಡೀಪ್ ಸ್ಪೇಸ್ ನೆಟ್ವರ್ಕ್ (ಐಡಿಎಸ್‌ಎನ್) ಕೇಂದ್ರದೊಂದಿಗೆ ಸಂಪರ್ಕದಲ್ಲಿರುತ್ತದೆ. ಆರ್ಬಿಟರ್ ಮತ್ತು ರೋವರ್ ಸಂವಹನಕ್ಕಾಗಿ ಇದೇ ನೆಟ್ವರ್ಕ್ ಬಳಸಲ್ಪಡುತ್ತದೆ.

ಪ್ರಜ್ಞಾನ್ ರೋವರ್ ತೂಕ 27 ಕೆಜಿ ಆಗಿದ್ದು ಲ್ಯಾಂಡರ್‌ನ ಒಟ್ಟು ತೂಕ 1, 471 ಕೆಜಿ ಆಗಿದೆ. ಇದು 650 W ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಆರಂಭದಲ್ಲಿ ಲ್ಯಾಂಡರ್‌ ಮತ್ತು ರೋವರ್‌ ಎರಡನ್ನೂ ರಷ್ಯಾದಿಂದ ಅಭಿವೃದ್ಧಿಪಡಿಸಿ ಪಡೆಯುವ ಯೋಜನೆ ಇಸ್ರೊದ್ದಾಗಿತ್ತು. ಇದನ್ನು ಸಕಾಲದಲ್ಲಿ ರಷ್ಯಾ ಪೂರೈಕೆ ಮಾಡುವಲ್ಲಿ ವಿಫಲವಾಯಿತು. ಹೀಗಾಗಿ ಇವೆರಡರ ವಿನ್ಯಾಸ ಮತ್ತು ಅಭಿವೃದ್ಧಿಯನ್ನು ಇಸ್ರೊ ಕೈಗೆತ್ತಿಕೊಂಡಿತ್ತು.

ಭಾರೀ ಸವಾಲು

ಚಂದ್ರನ ಕತ್ತಲೆಯ ಭಾಗವನ್ನು ಇದುವರೆಗೆ ಯಾರೂ ಅಧ್ಯಯನ ನಡೆಸಿಲ್ಲ. ಹೀಗಾಗಿ ಚಂದ್ರಯಾನ–2 ಲ್ಯಾಂಡರ್‌ ಮತ್ತು ರೋವರ್‌ ಅನ್ನು ದಕ್ಷಿಣ ಧ್ರುವದಲ್ಲೇ ಸ್ವಯಂಚಾಲಿತವಾಗಿ ಇಳಿಸುವ ಪ್ರಯತ್ನ ನಡೆಯಲಿದೆ. ಇದೊಂದು ಬಹಳ ದೊಡ್ಡ ಸವಾಲು. ಚಂದ್ರನ ಮೇಲೆ ಇಳಿದ 15–20 ನಿಮಿಷಕ್ಕೆ ಲ್ಯಾಂಡರ್‌ ಚಿತ್ರವನ್ನು ಭೂಮಿಗೆ ಕಳುಹಿಸಲಿದ್ದರೆ, 4.5 ಗಂಟೆಯೊಳಗೆ ರೋವರ್‌ ಚಿತ್ರ ಕಳುಹಿಸಲಿದೆ. ಚಂದ್ರನ ಮೇಲ್ವೈಯ 100 ಕಿ.ಮೀ.ದೂರದಲ್ಲಿ ಆರ್ಬಿಟರ್‌ ಸುತ್ತುತ್ತ ಲ್ಯಾಂಡರ್‌ ಮತ್ತು ರೋವರ್‌ ಕಳುಹಿಸುವ ಸಂದೇಶವನ್ನು ಭೂಮಿಗೆ ರವಾನಿಸಲಿದೆ. ಒಟ್ಟು 14 ದಿನಗಳ ಕಾಲ (ಒಂದು ಚಂದ್ರ ದಿನ) ಈ ಮೂರೂ ಯಂತ್ರಗಳು ವಿವಿಧ ಸಂಶೋಧನೆ ನಡೆಸಿ ಮಾಹಿತಿ ಸಂಗ್ರಹಿಸಲಿವೆ. ಅಲ್ಲಿಗೇ ಅವುಗಳ ಆಯಸ್ಸು ಸಹ ಕೊನೆಗೊಳ್ಳಲಿದೆ

- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಅಧ್ಯಕ್ಷ ಡಾ.ಕೆ.ಶಿವನ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.