ಚೆನ್ನೈ/ತಿರುವನಂತಪುರ: ಭೂಕಕ್ಷೆಯಲ್ಲಿ ಪರಿಭ್ರಮಿಸುತ್ತಿರುವ ಚಂದ್ರಯಾನ-3ರ ಬಾಹ್ಯಾಕಾಶ ನೌಕೆಯನ್ನು ಕಕ್ಷೆಗೆ ಏರಿಸುವ ಮೊದಲ ಹಂತದ ಪ್ರಕ್ರಿಯೆಯನ್ನು ಶನಿವಾರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
‘ನೌಕೆಗೆ ಅಗತ್ಯ ನೂಕುಬಲವನ್ನು ನೀಡುವ ಪ್ರಕ್ರಿಯೆಯನ್ನು ಇಸ್ರೊದ ಬೆಂಗಳೂರಿನಲ್ಲಿರುವ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ (ಐಎಸ್‌ಟಿಆರ್‌ಎಸಿ) ಕೇಂದ್ರದಿಂದ ಯಶಸ್ವಿಯಾಗಿ ನಿರ್ವಹಿಸಲಾಗಿದೆ. ನೌಕೆಯು ಸುಸ್ಥಿತಿಯಲ್ಲಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ನೌಕೆಯು ಈಗ ಭೂಮಿಗೆ ಅತಿ ಕಡಿಮೆ ಅಂತರದ 173 ಕಿಲೋಮೀಟರ್ ಮತ್ತು ಭೂಮಿಯಿಂದ 41,762 ಕಿ.ಮೀ. ದೂರದ ಕಕ್ಷೆಯಲ್ಲಿ ಪರಿಭ್ರಮಿಸುತ್ತಿದೆ’ ಎಂದು ಇಸ್ರೊ, ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ಬಿಡುಗಡೆ ಮಾಡಿದೆ. ಬಾಹ್ಯಾಕಾಶ ನೌಕೆಯ ಚಿತ್ರವನ್ನು ಹಂಚಿಕೊಂಡಿದೆ.
‘ಭೂಕಕ್ಷೆ ದಾಟಿ ಚಂದ್ರನಲ್ಲಿ ಇಳಿಯಲು ಪ್ಯೊಪಲ್ಷನ್ ಮಾಡ್ಯೂಲ್‌ಗೆ ನೂಕುಬಲ ಬೇಕು. ಈ ಉದ್ದೇಶಕ್ಕಾಗಿಯೇ ಅಳವಡಿಸಲಾಗಿರುವ ಯಂತ್ರಗಳ (ಥ್ರಸ್ಟರ್) ಕಾರ್ಯಾಚರಣೆಗೆ ಚಾಲನೆ ನೀಡಿ, ಅಗತ್ಯ ನೂಕುಬಲ ಸಿಗುವಂತೆ ಮಾಡಲಾಗುತ್ತಿದೆ’ ಎಂದು ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಎಸ್. ಉಣ್ಣಿಕೃಷ್ಣನ್ ನಾಯರ್ ಹೇಳಿದ್ದಾರೆ.
ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಉಡ್ಡಯನ ಮಾಡಲಾಗಿರುವ ‘ಚಂದ್ರಯಾನ–3’ ನೌಕೆಯು ಚಂದ್ರನ ದಕ್ಷಿಣ ಧ್ರುವದ ನೆಲದಲ್ಲಿ ಸಾಪ್ಟ್ ಲ್ಯಾಂಡಿಂಗ್ ಮಾಡುವ ಮುನ್ನ ಚಂದ್ರನ ಕಕ್ಷೆಯನ್ನು ಸೇರಲು 41 ದಿನಗಳ ಮಹತ್ವದ ಹಂತಗಳನ್ನು ದಾಟಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.