ADVERTISEMENT

Live Chandrayaan-3: ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್– ಹೊಸ ಚಿತ್ರಗಳ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಆಗಸ್ಟ್ 2023, 1:24 IST
Last Updated 24 ಆಗಸ್ಟ್ 2023, 1:24 IST
   

ಭಾರತೀಯ ಬಾಹ್ಯಾಕಾಶ ಸಂಸ್ಥೆಯ(ಇಸ್ರೊ) ಮಹತ್ವದ ಚಂದ್ರಯಾನ–3 ಯಶಸ್ವಿಯಾಗಿದೆ.

ಬೆಂಗಳೂರು: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಯೋಜನೆಯ 'ವಿಕ್ರಮ್' ಲ್ಯಾಂಡರ್ ಚಂದ್ರನ ಅಂಗಳಕ್ಕೆ ಕಾಲಿಡಲು ಕ್ಷಣಗಣನೆ ಆರಂಭವಾಗಿದೆ.

ಚಂದ್ರಯಾನ–3ರ ಚಂದ್ರ ಸ್ಪರ್ಶ ಇಂದು ಸಂಜೆ 6.04 ಕ್ಕೆ ಸರಿಯಾಗಿ ಸಮಯ ನಿಗದಿಪಡಿಸಲಾಗಿದೆ. ಇದಕ್ಕೆ ಪೂರಕವಾಗಿ ಭಾನುವಾರ ಲ್ಯಾಂಡರ್‌ನ ವೇಗ ತಗ್ಗಿಸಿ, ಚಂದ್ರನ ಮೇಲ್ಮೈಗೆ ಅತ್ಯಂತ ಸನಿಹದಲ್ಲಿ ಅಂದರೆ, 25 ಕಿ.ಮೀ ಕಕ್ಷೆಗೆ ತಂದು ನೆಲೆಗೊಳಿಸಲಾಗಿದೆ. ಲ್ಯಾಂಡರ್‌ ಈಗ 25 ಕಿ.ಮೀ x 134 ಕಕ್ಷೆಯಲ್ಲಿದೆ.

ನೋದನ ಘಟಕದಿಂದ (ಪ್ರೊಪಲ್ಷನ್‌ ಮಾಡ್ಯೂಲ್‌) ಪ್ರತ್ಯೇಕಗೊಂಡ ನಂತರ ಎರಡು ಹಂತಗಳಲ್ಲಿ ಲ್ಯಾಂಡರ್‌ನ ವೇಗ ತಗ್ಗಿಸುವ ಕಾರ್ಯ ನಡೆದಿದೆ. ಈಗ ಆಂತರಿಕ ತಪಾಸಣೆ ಕಾರ್ಯ ನಡೆಯುತ್ತಿದ್ದು, ಇಳಿದಾಣದ (ಲ್ಯಾಂಡಿಂಗ್‌ ಸ್ಥಳ) ಪ್ರದೇಶದಲ್ಲಿ ಸೂರ್ಯೋದಯಕ್ಕಾಗಿ ನಿರೀಕ್ಷಿಸಲಾಗುತ್ತಿದೆ. ಬುಧವಾರ ಸಂಜೆ 5.45 ಕ್ಕೆ ಸರಿಯಾಗಿ ಕಕ್ಷೆಯಿಂದ ಲ್ಯಾಂಡರ್‌ ಅನ್ನು ಕೆಳಗಿಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಇಸ್ರೊ ತಿಳಿಸಿದೆ. ಲ್ಯಾಂಡರ್‌ (ವಿಕ್ರಮ್‌) ಸಂಜೆ 6.04 ಕ್ಕೆ ಚಂದ್ರ ಸ್ಪರ್ಶ ಮಾಡಲಿದೆ.

ADVERTISEMENT

ಈಗಾಗಲೇ ಚಂದ್ರನಿಗೆ ಅತಿ ಸನಿಹದಲ್ಲಿರುವ ಕಕ್ಷೆಯಲ್ಲಿ ವಿಕ್ರಮ್ 26 ಕೆ.ಜಿ ತೂಗುವ ಆರು ಚಕ್ರಗಳನ್ನು ಹೊಂದಿರುವ ಪ್ರಗ್ಯಾನ್‌(ರೋವರ್) ಅನ್ನು ಒಡಲಲ್ಲಿ ಇಟ್ಟುಕೊಂಡು ಚಂದ್ರನಿಗೆ ಕೋಳಿ ಮೊಟ್ಟೆ ಆಕಾರದಲ್ಲಿ ಸುತ್ತು ಹಾಕುತ್ತಿದೆ. ಸುಮಾರು 25 ಕಿ.ಮೀ.ಗಳಷ್ಟು ಎತ್ತರದಲ್ಲಿ ಕಾದು ನಿಂತಿದೆ.

ವಿಕ್ರಮ್‌ ಮೊದಲಿಗೆ ತನ್ನ ವೇಗವನ್ನು ಇಳಿಸಿಕೊಳ್ಳಬೇಕು. ಈಗ ಗಂಟೆಗೆ ಸುಮಾರು 5,000 ಕಿ.ಮೀನಷ್ಟು ವೇಗದಲ್ಲಿ ಸಾಗುತ್ತಿದೆ. ಆ ವೇಗವನ್ನು ಶೂನ್ಯಕ್ಕೆ ತಂದುಕೊಳ್ಳುವುದು ದೊಡ್ಡ ಸವಾಲು. ಕಕ್ಷೆಯಲ್ಲಿ ವೇಗ ಕಡಿಮೆ ಮಾಡಿಕೊಳ್ಳುತ್ತಿರುವಂತೆಯೇ ಕೆಳಗೆ ಬೀಳಲಾರಂಭಿಸುತ್ತದೆ. ಆಗ ವೇಗ, ದಿಕ್ಕು ತಪ್ಪಲಾರಂಭಿಸುತ್ತದೆ. ಎಲ್ಲವನ್ನೂ ಲೆಕ್ಕಹಾಕಿ ನಿಗದಿಯಾದ ಪ್ರದೇಶದಲ್ಲೇ ಬಂದಿಳಿಯುವಂತೆ ಮಾಡಬೇಕು. ಈ ಸಂದರ್ಭದಲ್ಲಿ ವಿಕ್ರಮ್ ಜೋಲಿ ಹೊಡೆಯುವ ಅಥವಾ ದಿಕ್ಕು ತಪ್ಪುವ ಸಾಧ್ಯತೆ ಹೆಚ್ಚು. ಅದನ್ನು ತಿಳಿದುಕೊಂಡು ಸರಿಪಡಿಸಿಕೊಳ್ಳಲು ಬೀಳುವಾಗಿನ ವೇಗವನ್ನು ನಿಯಂತ್ರಿಸಿ ಸ್ವಸ್ಥಿತಿಗೆ ಬಂದು ನಿಲ್ಲಲು ರಾಕೆಟ್‌ಗಳನ್ನು ಉರಿಸಲಾಗುತ್ತದೆ. ಲ್ಯಾಂಡರ್‌ ಮತ್ತೆ ಕಕ್ಷೆಯತ್ತ ಸಾಗುತ್ತದೆ ಎಂದು ವಿಜ್ಞಾನಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಲ್ಯಾಂಡರ್ ಸಾಫ್ಟ್‌ ಲ್ಯಾಂಡಿಂಗ್‌ ಮಾಡಲು ಈ 4 ಹಂತಗಳು ಅತಿ ಮುಖ್ಯ

ಹಂತ 1: ಚಂದ್ರನ ಮೇಲ್ಮೈಯಿಂದ 30 ಕಿ.ಮೀ ಎತ್ತರದಲ್ಲಿರುವ ಚಂದ್ರನ ಲ್ಯಾಂಡರ್ ವಿಕ್ರಮ್ ಅನ್ನು ಸಮತಲ ಸ್ಥಿತಿಯಿಂದ ಲಂಬ ಸ್ಥಿತಿಗೆ ಪರಿವರ್ತಿಸಲು ಕಾರ್ಯ ಆರಂಭವಾಗುತ್ತದೆ. ಪ್ರತಿ ಸೆಕೆಂಡಿಗೆ 1.68 ಕಿಮೀ ವೇಗದಲ್ಲಿ ಸಂಭವಿಸುವ ಈ ಇಳಿಜಾರು ಪ್ರಕ್ರಿಯೆ 690 ಸೆಕೆಂಡು ತೆಗೆದುಕೊಳ್ಳುತ್ತದೆ.

ಹಂತ 2: ಲ್ಯಾಂಡರ್ ಚಂದ್ರನ ಮೇಲ್ಮೈಯಿಂದ 7.4 ಕಿ.ಮೀ ಎತ್ತರವನ್ನು ಸಮೀಪಿಸುತ್ತಿದ್ದಂತೆ ಅದು ಸಮತಲದಿಂದ ಲಂಬ ಸ್ಥಿತಿಗೆ ಪರಿವರ್ತನೆಗೊಳ್ಳುತ್ತದೆ. ಅದರ ವೇಗವನ್ನು ಮತ್ತಷ್ಟು ಕಡಿಮೆ ಮಾಡುತ್ತದೆ. ಈ ಪ್ರಕ್ರಿಯೆ ಸುಮಾರು 10 ಸೆಕೆಂಡು ತೆಗೆದುಕೊಳ್ಳುತ್ತದೆ ಎಂದು ಅಂದಾಜಿಸಲಾಗಿದೆ.

ಹಂತ 3: ಅಂತಿಮ ಮತ್ತು ಅತ್ಯಂತ ಸೂಕ್ಷ್ಮವಾದ ಬ್ರೇಕಿಂಗ್ ಹಂತವು ಲ್ಯಾಂಡರ್ ಸಂಪೂರ್ಣವಾಗಿ ಲಂಬ ಸ್ಥಿತಿಗೆ ಬಂದು ನಿಂತಿರುತ್ತದೆ. ನಿಗದಿಪಡಿಸಿದ ಲ್ಯಾಂಡಿಂಗ್ ಜಾಗಕ್ಕೆ 28.52 ಕಿ.ಮೀ ದೂರವನ್ನು ಕ್ರಮಿಸುತ್ತದೆ. ಅಂತಿಮವಾಗಿ ಅದರ ವೇಗವನ್ನು ಶೂನ್ಯಕ್ಕೆ ಇಳಿಸಲಾಗುತ್ತದೆ. ಈ ಹಂತವು ಅತ್ಯಂತ ಪರಿಣಾಮಕಾರಿಯಾಗಿದೆ.

ಹಂತ 4: ಲ್ಯಾಂಡರ್ ಲ್ಯಾಂಡಿಂಗ್ ಜಾಗವನ್ನು ಸಮೀಪಿಸಿದಾಗ ಅಡೆತಡೆಗಳ ಉಪಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ಅದು ನಿರ್ಣಾಯಕ ಪರೀಕ್ಷೆಗಳನ್ನು ನಡೆಸುತ್ತದೆ. ಯೋಜಿತ ಲ್ಯಾಂಡಿಂಗ್‌ನೊಂದಿಗೆ ಮುಂದುವರಿಯಬೇಕೆ ಅಥವಾ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕೆ ಎಂಬುದನ್ನು ನಂತರ ನಿರ್ಧರಿಸುತ್ತದೆ.

'ಸಾಫ್ಟ್ ಲ್ಯಾಂಡಿಂಗ್' ಎಂದರೇನು?

Video | ಚಂದ್ರಯಾನ–3 ಯಶಸ್ಸಿಗೆ ಮಂದಿರ, ಮಸೀದಿ, ಚರ್ಚ್‌ಗಳಲ್ಲಿ ಪ್ರಾರ್ಥನೆ

Chandrayaan-3 Landing: ದ.ಆಫ್ರಿಕಾದಿಂದಲೇ ಪ್ರಧಾನಿ ಮೋದಿ ಚಂದ್ರಯಾನ-3 ವೀಕ್ಷಣೆ

ಚಂದ್ರಯಾನ ಯೋಜನೆಗಳಿಗೆ ತನ್ನದೇ ಕೊಡುಗೆ ನೀಡುತ್ತಿರುವ ತಮಿಳುನಾಡಿನ ಮಣ್ಣು

ಸ್ವಯಂಚಾಲಿತ ಲ್ಯಾಂಡಿಂಗ್ ಸೀಕ್ವೆನ್ಸ್ (ಎಎಲ್‌ಎಸ್) ಅನ್ನು ಪ್ರಾರಂಭಿಸಲು ಎಲ್ಲಾ ಸಿದ್ಧವಾಗಿದೆ. 17:44ರ ಸುಮಾರಿಗೆ ಗೊತ್ತುಪಡಿಸಿದ ಸ್ಥಳದಲ್ಲಿ ಲ್ಯಾಂಡರ್ ಮಾಡ್ಯೂಲ್ (ಎಲ್‌ಎಂ) ಆಗಮನಕ್ಕಾಗಿ ನಿರೀಕ್ಷಿಸಲಾಗುತ್ತಿದೆ. ಎಎಲ್‌ಎಸ್ ಸಂದೇಶವನ್ನು ಸ್ವೀಕರಿಸಿದ ನಂತರ, ಎಲ್‌ಎಂ ಚಾಲಿತ ಇಳಿಯುವಿಕೆಗಾಗಿ ಥ್ರೊಟಲ್ ಎಂಜಿನ್‌ಗಳನ್ನು ಸಕ್ರಿಯಗೊಳಿಸುತ್ತದೆ. ಮಿಷನ್ ಕಾರ್ಯಾಚರಣೆಗಳ ತಂಡವು ಸಣದೇಶಗಳಿಗೆ ಅನುಕ್ರಮವಾಗಿ ಲ್ಯಾಂಡಿಂಗ್ ಕಾರ್ಯಾಚರಣೆಯನ್ನು ದೃಢೀಕರಿಸುತ್ತದೆ ಎಂದು ಇಸ್ರೊ ಟ್ವೀಟ್ ಮಾಡಿದೆ.

ವಿಕ್ರಮ್ ಲ್ಯಾಂಡರ್ ಸಾಫ್ಟ್‌ ಲ್ಯಾಂಡಿಂಗ್‌ ಪ್ರಕ್ರಿಯೆ ಆರಂಭ ಲೈವ್ ಇಲ್ಲಿ ವೀಕ್ಷಿಸಿ

ದ.ಆಫ್ರಿಕಾದಿಂದಲೇ ಶುಭ ಕೋರಿದ ಪ್ರಧಾನಿ ಮೋದಿ

ಚಂದ್ರಯಾನ-3 ಯೋಜನೆ ಯಶಸ್ಸು ಕುರಿತು ಮಾತನಾಡಿರುವ ಮೋದಿ, ‘ಇಂತಹ ಐತಿಹಾಸಿಕ ಕ್ಷಣಗಳನ್ನು ನೋಡಿದಾಗ ನಮಗೆ ತುಂಬಾ ಹೆಮ್ಮೆಯಾಗುತ್ತದೆ. ಇದು ನವಭಾರತದ ಉದಯ’ ಎಂದು ಕೊಂಡಾಡಿದ್ದಾರೆ.

‘ಈ ಹಿಂದೆ ಯಾವುದೇ ದೇಶವು (ಚಂದ್ರನ ದಕ್ಷಿಣ ಧ್ರುವ) ಅಲ್ಲಿಗೆ ತಲುಪಿಲ್ಲ. ನಮ್ಮ ವಿಜ್ಞಾನಿಗಳ ಕಠಿಣ ಪರಿಶ್ರಮದಿಂದ ನಾವು ಅಲ್ಲಿಗೆ ತಲುಪಿದ್ದೇವೆ’ ಎಂದು ಮೋದಿ ಬಣ್ಣಿಸಿದ್ದಾರೆ.

ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಅಡಿ ಇಟ್ಟ ವಿಕ್ರಮ್ ಲ್ಯಾಂಡರ್

ಭಾರತದ ಮಹತ್ವಕಾಂಕ್ಷೆಯ ಚಂದ್ರಯಾನ-3 ಯೋಜನೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಘೋಷಿಸಿದೆ.

ಈ ಮೂಲಕ ವಿಕ್ರಮ್ ಲ್ಯಾಂಡರ್, ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡ್ ಆಗಿದೆ.

ಲ್ಯಾಂಡರ್ ವಿಕ್ರಮ್ ಸ್ವಯಂಚಾಲಿತ ಕ್ರಮದಲ್ಲಿ ಚಂದ್ರನ ಕಕ್ಷೆಗೆ ಇಳಿಯಿತು. ಈ ಐತಿಹಾಸಿಕ ಕ್ಷಣವನ್ನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಕಣ್ತುಂಬಿಕೊಂಡರು.

ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆಗಿದೆ ಎಂದು ಘೋಷಿಸಿದ ಇಸ್ರೊ ಮುಖ್ಯಸ್ಥ ಎಸ್. ಸೋಮನಾಥ್

ನಿಗದಿಯಂತೆ ಸಂಜೆ 6.04ರ ಸುಮಾರಿಗೆ ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ನಿಗದಿತ ಸ್ಥಳದಲ್ಲಿ ಸುರಕ್ಷಿತ ಲ್ಯಾಂಡಿಂಗ್ ಮಾಡಿದೆ. ಈ ಮೂಲಕ ದಕ್ಷಿಣ ಧ್ರುವದಲ್ಲಿ ಅಡಿ ಇಟ್ಟ ಮೊದಲ ದೇಶ ಭಾರತ ಎಂಬ ಖ್ಯಾತಿ ಪಡೆದಿದೆ.

ಚಂದ್ರಯಾನ–3 ಯಶಸ್ವಿ: ಲೈವ್ ವೀಕ್ಷಿಸುತ್ತಾ ಚಪ್ಪಾಳೆ ತಟ್ಟಿ ಸಂಭ್ರಮಿಸಿದ ಅಮಿತ್ ಶಾ, ಜೆ.ಪಿ. ನಡ್ಡಾ

ಚಂದ್ರಯಾನ–3 ಯಶಸ್ವಿ ಇಸ್ರೋ ಸಿಬ್ಬಂದಿ ಸಂಭ್ರಮ
ಚಂದ್ರಯಾನ–3 ಯಶಸ್ವಿ ಇಸ್ರೋ ಸಿಬ್ಬಂದಿ ಸಂಭ್ರಮ

ಈ ಕ್ಷಣಕ್ಕಾಗಿ ಕಾಯುತ್ತಿದ್ದೆವು: ಇಸ್ರೊ ಮಾಜಿ ಅಧ್ಯಕ್ಷ ಕೆ. ಶಿವನ್

ಇತಿಹಾಸ ಬರೆದ ಇಸ್ರೊ; ಚಂದ್ರನ ದಕ್ಷಿಣ ಧ್ರುವಕ್ಕೆ ಅಡಿ ಇಟ್ಟ ಮೊದಲ ದೇಶ ಭಾರತ

ಬೆಂಗಳೂರು: ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ದಕ್ಷಿಣ ಧ್ರುವದ ಪ್ರದೇಶದಲ್ಲಿ ಇಳಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ದೇಶವೆಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.

ಭಾರತದ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ-3 ಯಶಸ್ವಿಯಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಧೆಯ (ಇಸ್ರೊ) ಘೋಷಿಸಿದೆ.

ಬಳಿಕ ಪ್ರತಿಕ್ರಿಯಿಸಿರುವ ಚಂದ್ರಯಾನ-3 ಯೋಜನೆಯ ಕಾರ್ಯಾಚರಣಾ ನಿರ್ದೇಶಕ ಪಿ. ವೀರಮುತ್ತುವೇಲ್, ಭಾರತವು ಚಂದ್ರನ ದಕ್ಷಿಣ ಧ್ರುವದಲ್ಲಿ ಕಾರ್ಯಾಚರಣೆ ನಡೆಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೇಳಿದ್ದಾರೆ.

ಇದರ ಜೊತೆಗೆ ಚಂದ್ರನ ಅಂಗಳದಲ್ಲಿ ಲ್ಯಾಂಡರ್ ಮತ್ತು ರೋವರ್ ಇಳಿಸಿದ ನಾಲ್ಕನೇ ದೇಶ ಎನಿಸಿಕೊಂಡಿದೆ. ಚಂದ್ರನಲ್ಲಿ ಈಗಾಗಲೇ ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಯಶಸ್ವಿ ಕಾರ್ಯಾಚರಣೆ ನಡೆಸಿದ್ದವು.

2019ರಲ್ಲಿ ಭಾರತದ ಚಂದ್ರಯಾನ-2 ಯೋಜನೆ ಭಾಗಶಃ ಯಶ ಕಂಡಿತ್ತು.

ಚಂದ್ರಯಾನ-3: ಹೊಸ ಚಿತ್ರಗಳ ಬಿಡುಗಡೆ

ಚಂದ್ರಯಾನ-3 ಲ್ಯಾಂಡರ್ ಮತ್ತು ಬೆಂಗಳೂರಿನ ಮಿಷನ್ ಆಪರೇಷನ್ಸ್ ಕಾಂಪ್ಲೆಕ್ಸ್ (MOX)-ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್(ISTRAC)ನಡುವೆ ಸಂವಹನ ಸಂಪರ್ಕವನ್ನು ಸ್ಥಾಪಿಸಲಾಗಿದೆ. ಲ್ಯಾಂಡರ್ ಹಾರಿಜಾಂಟಲ್ ವೆಲಾಸಿಟಿ ಕ್ಯಾಮರಾದಿಂದ ಇಳಿಯುವಾಗ ತೆಗೆದ ಚಿತ್ರಗಳು ಇಲ್ಲಿವೆ ಎಂದು ಇಸ್ರೊ ಎಕ್ಸ್‌ನಲ್ಲಿ(ಟ್ವಿಟರ್) ಪೋಸ್ಟ್ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.