ನವದೆಹಲಿ: ‘ಭಾರತ ಈಗ ಚಂದಿರನ ಮೇಲಿದೆ. ಚಂದಮಾಮಾನ ಪಥದಲ್ಲಿ ಮಾನವಸಹಿತ ನಡೆದಾಡುವ ಸಮಯವೂ ಕೂಡಿಬಂದಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಜೋಹಾನಸ್‌ಬರ್ಗ್‌ನಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಅವರು, ಲ್ಯಾಂಡರ್ ವಿಕ್ರಮ್ ಚಂದ್ರನನ್ನು ಸ್ಪರ್ಶಿಸಿದ ತಕ್ಷಣವೇ ಭಾರತದ ಬಾವುಟವನ್ನು ಎತ್ತಿಹಿಡಿದು ಯಶಸ್ಸನ್ನು ಸೂಚಿಸಿದರು. ಇಸ್ರೊ ಕುಟುಂಬದ ಸಾಧನೆಗೆ ಚಪ್ಪಾಳೆಯ ಸುರಿಮಳೆಗರೆದರು. ವರ್ಚುವಲ್ ಆಗಿ ಮಾತನಾಡಿ ವಿಜ್ಞಾನಿಗಳ ಸಾಧನೆಯನ್ನು ಮುಕ್ತಕಂಠದಿಂದ ಹೊಗಳಿದರು.
‘ವಿಕ್ರಮ್ ಚಂದಿರನ ಮೇಲೆ ಹೆಜ್ಜೆ ಇಟ್ಟ ಕ್ಷಣ ಐತಿಹಾಸಿಕವಾದುದು. ಅದರ ಹೆಜ್ಜೆಯ ಸಪ್ಪಳವು ಭಾರತದ ಅಭಿವೃದ್ಧಿಗೆ ಕಹಳೆ ಮೊಳಗಿಸಿದೆ’ ಎಂದು ಅಭಿಪ್ರಾಯಪಟ್ಟರು.
‘ಇಂದಿನ ಚಾರಿತ್ರಿಕ ದಿನವನ್ನು ಎಂದಿಗೂ ಮರೆಯಲಾಗದು. ಭಾರತವು ಚಂದಿರನ ದಕ್ಷಿಣ ಧ್ರುವಕ್ಕೆ ಬಾಹ್ಯಾಕಾಶ ನೌಕೆ ಕಳುಹಿಸಿದ ವಿಶ್ವದ ಮೊದಲ ರಾಷ್ಟ್ರವಾಗಿದೆ. ಬೇರೆ ಯಾವುದೇ ರಾಷ್ಟ್ರಕ್ಕೂ ಇದುವರೆಗೆ ಈ ಸಾಧನೆ ಮಾಡಲಾಗಿಲ್ಲ’ ಎಂದು ಹೇಳಿದರು.
‘ಭಾರತವು ಏಕಾಂಗಿಯಾಗಿ ಈ ಚಂದ್ರಯಾನದ ಯಶಸ್ಸು ಸಾಧಿಸಿಲ್ಲ. ಇಡೀ ವಿಶ್ವಕ್ಕೆ ಒಂದೇ ಭೂಮಿ; ಒಂದೇ ಕುಟುಂಬ; ಒಂದೇ ಭವಿಷ್ಯ ಎಂಬುದು ಭಾರತದ ತತ್ವ. ಇದು ಮಾನವ ಕೇಂದ್ರಿತ ಯೋಜನೆ. ಹಾಗಾಗಿ, ಇದರ ಸಂಪೂರ್ಣ ಯಶಸ್ಸು ಇಡೀ ಮನುಕುಲಕ್ಕೆ ಸಲ್ಲುತ್ತದೆ’ ಎಂದು ವ್ಯಾಖ್ಯಾನಿಸಿದರು.
ಭಾರತ ಈಗ ಜಿ20 ಶೃಂಗಸಭೆಯ ಆತಿಥ್ಯ ಹೊತ್ತಿದೆ. ಇದರ ಹೊಸ್ತಿನಲ್ಲಿಯೇ ಈ ಸಾಧನೆ ಮಾಡಿದೆ. ನವ ಭಾರತಕ್ಕೆ ನಾವು ಸಾಕ್ಷಿಯಾಗಿದ್ದೇವೆ. ಹೊಸ ಇತಿಹಾಸ ಸೃಷ್ಟಿಸಿದ್ದೇವೆ ಎಂದು ಅವರು, ‘ನಾನು ದೈಹಿಕವಾಗಿಯಷ್ಟೇ ಬ್ರಿಕ್ಸ್ ಸಭೆಯಲ್ಲಿ ಪಾಲ್ಗೊಂಡಿದ್ದೇನೆ. ನನ್ನ ಹೃದಯ ಮತ್ತು ಆತ್ಮ ಅಲ್ಲಿದೆ (ಭಾರತ)’ ಎಂದು ಹೇಳಿದರು.
‘ನಾವು ದೇಶವನ್ನು ಭಾರತ ಮಾತೆಯೆಂದೂ ಚಂದ್ರನನ್ನು ಚಂದಾಮಾಮಾ ಎಂದೂ ಕರೆಯುತ್ತಿದ್ದೆವು. ಇನ್ನುಮೇಲೆ ಮಕ್ಕಳು ಕಲಿಯಬೇಕಾಗಿರುವ ಪದ್ಯಗಳು ಬದಲಾಗಲಿವೆ. ನಾವೆಲ್ಲ ಚಂದ್ರ ಬಹುದೂರ ಇದ್ದಾನೆ (ಚಂದಾಮಾಮಾ ಬಡೇ ದೂರ್ ಕೆ ಹೈ) ಅಂತಿದ್ವಿ. ಈಗಿನ ಮಕ್ಕಳು ಚಂದ್ರಮಾಮಾನತ್ತ ಪ್ರವಾಸಕ್ಕೆ ಹೋಗುತ್ತೇವೆ (ಚಂದಾಮಾಮಾ ಏಕ್ ಟೂರ್ ಕೆ ಹೈ) ಎಂದು ಕಲಿಯುತ್ತಾರೆ’ ಎಂದು ಹೇಳಿದರು.
ಸೌರ ಮಂಡಲದ ಸೀಮೆಗಳನ್ನು ಮೀರಿ ಅಧ್ಯಯನ ನಡೆಸಲಾಗುವುದು. ಬ್ರಹ್ಮಾಂಡದ ಎಲ್ಲ ರಹಸ್ಯಗಳನ್ನು ಭೇದಿಸಲಾಗುವುದು. ಶೀಘ್ರವೇ ಸೂರ್ಯನ ವಿಸ್ತೃತ ಅಧ್ಯಯನಕ್ಕಾಗಿ ಆದಿತ್ಯ ಎಲ್‌ಒನ್ ಯೋಜನೆ ಹಾಗೂ ಶುಕ್ರನ ಅಧ್ಯಯನಕ್ಕೂ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.
‘ದೇಶದ ಅಭ್ಯುದಯಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನವೇ ಬುನಾದಿ. ಇನ್ನುಮುಂದೆ ದೇಶದ ಕಥನಗಳೇ ಬದಲಾಗುತ್ತವೆ. ಮೊದಲೆಲ್ಲ ಸಂಕಲ್ಪಗಳ ಸಿದ್ಧಿಯ ಮಾರ್ಗ ತೋರುತ್ತಿದ್ದೆವು. ಸೋಲಿನಿಂದ ಪಾಠ ಕಲಿತು ಗೆಲುವನ್ನು ಸಾಧಿಸುವ ಪಾಠಕ್ಕೆ ಇದು ಉದಾಹರಣೆಯಾಗಿದೆ. ಇಸ್ರೊದ ಭವಿಷ್ಯದ ಯೋಜನೆಗಳಿಗೆ ಶುಭವಾಗಲಿದೆ’ ಎಂದರು.
ಓದಿ... Live Chandrayaan-3: ಚಂದ್ರನ ದಕ್ಷಿಣ ಧ್ರುವದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಇಸ್ರೊ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.