ಬೆಂಗಳೂರು: ‘ಚಂದ್ರಯಾನ–2 ವ್ಯೋಮನೌಕೆ ಚಂದ್ರನ ಅಂಗಳದಲ್ಲಿ ಇಳಿಯುವ ಹಾದಿಯಲ್ಲಿದೆ, ವಿಕ್ರಮ್ ಲ್ಯಾಂಡರ್‌ನ ವೇಗವನ್ನು ತಗ್ಗಿಸಲಾಗುತ್ತಿದೆ. ಎಲ್ಲವೂ ಯೋಜನೆಯಂತೆಯೇ ನಡೆಯುತ್ತಿದೆ...’
ಈ ಘೋಷಣೆ ಕೇಳುತ್ತಿದ್ದಂತೆ ಮಾಸ್ಟರ್ ಕಂಟ್ರೋಲ್ ಕೊಠಡಿಯಲ್ಲಿ ಚಪ್ಪಾಳೆ ಮುಗಿಲು ಮುಟ್ಟಿತು. ಪ್ರಧಾನಿ ನರೇಂದ್ರ ಮೋದಿ, ಇಸ್ರೊದ ವಿಜ್ಙಾನಿಗಳು, ವಿದ್ಯಾರ್ಥಿಗಳು ಖುಷಿ ಪಟ್ಟರು. ಚಪ್ಪಾಳೆ ಹೊಡೆಯುತ್ತಿದ್ದರು.
‘ಇನ್ನು ಕೇವಲ 75 ಕಿ.ಮೀ.ದೂರದಲ್ಲಿ ವಿಕ್ರಂ ಲ್ಯಾಂಡರ್ ಇದೆ. ಸರಿಯಾದ ವೇಗದಲ್ಲೇ ಚಲಿಸುತ್ತಿದೆ...’ ಎಂದಾಗಲೂ ಚಪ್ಪಾಳೆಯ ಸುರಿಮಳೆ.
‘ಇನ್ನೇನು 2 ನಿಮಿಷದಲ್ಲಿ ಲ್ಯಾಂಡರ್ ಚಂದ್ರನ ಅಂಗಳ ತಲುಪುತ್ತದೆ. ಅದಕ್ಕೆ ಮೊದಲಾಗಿ ಲಂಬವಾಗಿ ಅದನ್ನು ಇಳಿಸುವ ಕಮಾಂಡ್ ನೀಡಲಾಗುತ್ತದೆ...’ ಎಂದಾಗಲೂ ಚಪ್ಪಾಳೆ ಕೇಳಿಸಿತು.
ಆದರೆ ಮರುಕ್ಷಣದಲ್ಲೇ ಇಂತಹ ಆಘಾತ ಎದುರಾಗುತ್ತದೆ ಎಂಬುದು ಅಲ್ಲಿದ್ದವರ ನಿರೀಕ್ಷೆಗೂ ಮೀರಿದ್ದಾಗಿತ್ತು. ‘ಕೇವಲ 2.1 ಕಿ.ಮೀ.ಎತ್ತರದಲ್ಲಿರುವ ಲ್ಯಾಂಡರ್ ಚಂದ್ರನ ಅಂಗಳಕ್ಕೆ ಇಳಿಯಿತು’ ಎಂಬ ಪ್ರಕಟಣೆಯನ್ನು ನಿರೀಕ್ಷಿಸುತ್ತಿದ್ದವರಿಗೆ ಆ ಪ್ರಕಟಣೆ ಕೇಳಿಸದೆ ಆತಂಕ ಶುರುವಾಯಿತು. ದೊಡ್ಡ ಪರದೆಯಲ್ಲಿ ಸಹ ಟ್ರಾಜೆಕ್ಟರಿ ಸ್ತಬ್ಧವಾದಂತೆ ಕಾಣಿಸುತ್ತಿತ್ತು.ಚಪ್ಪಾಳೆ ತಟ್ಟುತ್ತಿದ್ದ ಕೈಗಳು ಗಲ್ಲ ಸೇರಿದ್ದವು. ಹಲ ವರ ಕಣ್ಣಲ್ಲಿ ನೀರು ಜಿನುಗಿತು. ಪ್ರಧಾನಿ ಮೋದಿ ಸಹ ಮೌನಕ್ಕೆ ಜಾರಿದರು.
ಪೀಣ್ಯದ ಸತೀಶ್ ಧವನ್ ಟೆಲಿಮೆಟ್ರಿ ಟ್ರ್ಯಾಕಿಂಗ್ ಆ್ಯಂಡ್ ಕಮಾಂಡ್ ನೆಟ್‌ವರ್ಕ್ ಕೇಂದ್ರದಲ್ಲಿ (ಐಎಸ್‌ಟಿಆರ್‌ಎಸಿ)ಕೇಂದ್ರದಲ್ಲಿ ಶನಿವಾರ ನಸುಕಿನ 1 ಗಂಟೆ 38ನಿಮಿಷದಿಂದ 2 ಗಂಟೆಯೊಳಗೆ ಕಾಣಿಸಿದ ದೃಶ್ಯಗಳಿವು. ದೇಶ, ವಿದೇಶಗಳಿಂದ ಬಂದ ಮಾಧ್ಯಮದವರಿಗಾಗಿ ಬೇರೊಂದು ಕಡೆ ಅಳವಡಿಸಿದ್ದ ದೊಡ್ಡ ಎಲ್‌ಇಡಿ ಪರರೆಯಲ್ಲಿ ಲ್ಯಾಂಡರ್ ಸಾಗುತ್ತಿರುವ ಪಥ ಕಾಣಿಸುತ್ತಿತ್ತು. ಜತೆಗೆ ಹಿರಿಯ ವಿಜ್ಞಾನಿಗಳಿಂದ ವೀಕ್ಷಕ ವಿವರಣೆಯೂ ಇತ್ತು. ಪ್ರಧಾನಿ ಸಹಿತ ಇತರ ಗಣ್ಯರು, ಶಾಲಾ ವಿದ್ಯಾರ್ಥಿಗಳು ಇಸ್ರೊ ಕೇಂದ್ರದೊಳಗೆ ಅನುಭವಿಸಿದ ಸಂತಸ, ಆತಂಕದ ಕ್ಷಣಗಳೂ ಇದೇ ಪರದೆಯಲ್ಲಿ ಕಾಣಿಸುತ್ತಿದ್ದವು.
ಈ ಬಾರಿ ಲಂಡನ್‌ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಏಕದಿನ ವಿಶ್ವಕಪ್ ಕ್ರಿಕೆಟ್‌ನ ಫೈನಲ್ ಪಂದ್ಯದಂತೆ ಕೊನೆಯ ನಿಮಿಷಗಳಂತೂ ಬಹಳ ಕಾತರದ ಕ್ಷಣಗಳಾಗಿದ್ದವು. ಎಲ್‌ಇಡಿ ಪರದೆಯಲ್ಲಿ ಲ್ಯಾಂಡರ್ ಟ್ರ್ಯಾಜೆಕ್ಟರಿಯ ದೃಶ್ಯದ ಆಧಾರದಲ್ಲೇ ಎಲ್ಲವೂ ಗೊತ್ತಾಗುತ್ತಿತ್ತು. ಆದರೆ ಯಾವಾಗ ಈ ಟ್ರಾಜೆಕ್ಟರಿಯಲ್ಲಿ ಬಿಂದು (ಲ್ಯಾಂಡರ್) ಚಲನೆ ಸ್ತಬ್ಧವಾಯಿತೋ, ಜನರ ಸಂಭ್ರಮವೂ ಸ್ತಬ್ಧವಾಯಿತು. ಪ್ರಧಾನಿ ಬಳಿಗೆ ಬಂದ ಇಸ್ರೊ ಅಧ್ಯಕ್ಷ ಕೆ.ಶಿವನ್ ಯೋಜನೆ ಕೊನೆಯ ಕ್ಷಣದಲ್ಲಿ ವಿಫಲವಾಗಿರುವ ಕುರಿತು ಸಂದೇಶ ನೀಡಿದರು. ಮೋದಿಯವರಿಗೆ ಹಿರಿಯ ವಿಜ್ಞಾನಿ ಬಿ.ಎನ್.ಸುರೇಶ್ ಕಾಲ ಕಾಲಕ್ಕೆ ಮಾಹಿತಿ ನೀಡುತ್ತಿದ್ದರು. ಇನ್ನೂ 15 ನಿಮಿಷ ಸಂಪರ್ಕಕ್ಕಾಗಿ ಕಾದ ಬಳಿಕ ಕೆ.ಶಿವನ್ ಅವರು ಲ್ಯಾಂಡರ್ ಸಂಪರ್ಕ ಕಳೆದುಕೊಂಡಿದ್ದನ್ನು ಅಧಿಕೃತವಾಗಿ ಪ್ರಕಟಿಸಿದರು.
‘ಪ್ರಯತ್ನವೂ ವಿಫಲವಲ್ಲ’
‘ವಿಜ್ಞಾನವೆಂದರೆ ಅಲ್ಲಿ ಪ್ರಯತ್ನ ಬಿಟ್ಟರೆ ಬೇರೆ ಪದಕ್ಕೆ ಅವಕಾಶ ಇಲ್ಲ.ಇಂದಿನ ನಮ್ಮ ಕಲಿಕೆ ನಾಳೆ ನಮ್ಮನ್ನು ಗಟ್ಟಿಗೊಳಿಸುತ್ತದೆ. ಚಂದ್ರನನ್ನು ತಲುಪುವ ನಮ್ಮ ಆಸೆ ಇನ್ನಷ್ಟು ಬಲಗೊಂಡಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಚಂದ್ರಯಾನ–2 ಯೋಜನೆ ಕೊನೆಯ ಕ್ಷಣದಲ್ಲಿ ಸಂಪರ್ಕ ಕಡಿತಗೊಂಡು ವಿಫಲವಾದ ಹಿನ್ನೆಲೆಯಲ್ಲಿ ಶನಿವಾರ ಬೆಳಿಗ್ಗೆ ಇಸ್ರೊ ಕೇಂದ್ರಕ್ಕೆ ಮತ್ತೆ ಬಂದ ಅವರು ವಿಜ್ಞಾನಿಗಳನ್ನು ಉದ್ದೇಶಿಸಿ ಆತ್ಮವಿಶ್ವಾಸದ ಮಾತುಗಳನ್ನು ಆಡಿದರು.
‘ನಿಮ್ಮ ಪರಿಶ್ರಮ, ತ್ಯಾಗವನ್ನು ದೇಶ ಕಂಡಿದೆ. ನೀವು ಮೊಸರು ಕಡೆದು ಬೆಣ್ಣೆ ತೆಗೆಯುವವರಲ್ಲ, ಕಲ್ಲನ್ನು ಕಡೆದು ಬೆಣ್ಣೆ ತೆಗೆಯುವವರು. ನಿಮ್ಮ ಸಾಧನೆಗೆ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡುತ್ತಿದ್ದಾನೆ.ನಿಮ್ಮಿಂದಾಗಿ ಜನರಿಗೆ ಉತ್ತಮ ಆರೋಗ್ಯ, ಶಿಕ್ಷಣ ಸಿಗುವಂತಾಗಿದೆ. ಜನರಿಗೆ ನೀವು ಇನ್ನಷ್ಟು ಕೊಡುಗೆ ನೀಡುವುದಕ್ಕಿದೆ.ಅತ್ಯುತ್ತಮವಾದುದು ಇನ್ನಷ್ಟೇ ಬರಬೇಕಿದೆ. ನೀವು ಅದ್ಭುತ ವೃತ್ತಿಪರರು. ದೇಶದ ಬೆಳವಣಿಗೆಗೆ ನೀವು ಮಹಾನ್ ಕೊಡುಗೆ ನೀಡಿದ್ದೀರಿ. ಇಡೀ ದೇಶ ನಿಮ್ಮೊಂದಿಗಿದೆ’ ಎಂದು ಹೇಳಿದರು.
‘ನಿನ್ನೆ ನಿಮ್ಮ ಮುಖ ಚಿಂತೆಯಿಂದ ಕೂಡಿತ್ತು. ನಿಮ್ಮ ಮನಃಸ್ಥಿತಿಯನ್ನು ನಾನು ಅರ್ಥ ಮಾಡಿಕೊಂಡಿದ್ದೆ. ಅದಕ್ಕಾಗಿಯೇ ಹೆಚ್ಚು ಹೊತ್ತು ಇಲ್ಲಿರಲಿಲ್ಲ. ನಿಮ್ಮ ಆತ್ಮವಿಶ್ವಾಸವನ್ನು ಉತ್ತೇಜಿಸುವುದಕ್ಕಾಗಿಯೇ ನಾನು ಮತ್ತೆ ಇಲ್ಲಿಗೆ ಬಂದಿದ್ದೇನೆ’ ಎಂದರು. ‘ಆರ್ಬಿಟರ್ ಈಗಲೂ ಚಂದ್ರನ ಸುತ್ತ ಸುತ್ತುತ್ತಿದೆ. ಇದೇನು ಸಣ್ಣ ಸಾಧನೆಯಲ್ಲ. ಲ್ಯಾಂಡರ್ ಸುರಕ್ಷಿತವಾಗಿ ಚಂದ್ರನನ್ನು ಸ್ಪರ್ಶಿಸುತ್ತದೆ ಎಂದು ನಾನೂ ಭಾವಿಸಿದ್ದೆ. ಆದರೆ ಕೊನೆಯ ಕ್ಷಣದಲ್ಲಿ ಸಂದೇಶ ಬಾರದೆ ಹೋಯಿತು. ವಿಜ್ಞಾನಿಗಳಿಗೆ ಇಂತಹ ಸ್ಥಿತಿಯಲ್ಲಿ ಬೇಸರ ಸಹಜ. ಆದರೆ ಇದರಿಂದ ನಮ್ಮ ಆತ್ಮವಿಶ್ವಾಸ ಕಡಿಮೆಯಾಗಬಾರದು, ಅದು ಇನ್ನಷ್ಟು ಹೆಚ್ಚಬೇಕು’ ಎಂದರು.
ರಾತ್ರಿ ಮುಂಬೈಗೆ ಹೋಗಬೇಕಿದ್ದ ಮೋದಿ ಬೆಳಿಗ್ಗೆಯವರೆಗೂ ನಗರದಲ್ಲಿ
ಉಸಿರು ಬಿಗಿಹಿಡಿಯುವಂತೆ ಮಾಡಿದ 40 ನಿಮಿಷಗಳು
ರಾತ್ರಿ 1.30ಕ್ಕೆ ಎಚ್ಚರದಿಂದಿದ್ದ ದೇಶದ ಕೋಟ್ಯಂತರ ಮಂದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.