ಬೆಂಗಳೂರು: ಬೆಂಗಳೂರು: ಚಂದ್ರನ ಮೇಲಿರುವ ಖನಿಜ, ನೀರು ಹಾಗೂ ಕಂಪನದ ಬಗ್ಗೆ ಅಧ್ಯಯನ ನಡೆಸಲಿರುವ ಬಹು ನಿರೀಕ್ಷೆಯ ‘ಚಂದ್ರಯಾನ–2’ ಬಾಹ್ಯಾಕಾಶ ನೌಕೆಯ ಯಾನ ಜುಲೈ 15ರಂದು ಆರಂಭವಾಗಲಿದೆ.
ಇದನ್ನೂ ಓದಿ:2024ಕ್ಕೆ ಮಾನವಸಹಿತ ಚಂದ್ರಯಾನ- ನಾಸಾ ಘೋಷಣೆ
‘ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಅಂದು ಮುಂಜಾನೆ 2 ಗಂಟೆ 51 ನಿಮಿಷಕ್ಕೆ ಆರ್ಬಿಟರ್, ವಿಕ್ರಂ ಲ್ಯಾಂಡರ್ ಹಾಗೂ ಪ್ರಜ್ಞಾನ್ ರೋವರ್ ಒಳಗೊಂಡ 3.8 ಟನ್ ತೂಕದ ‘ಚಂದ್ರಯಾನ–2’ ಉಪಕರಣಗಳನ್ನು ಹೊತ್ತ ಜಿಎಸ್‌ಎಲ್‌ವಿ ಮಾರ್ಕ್ 3 ರಾಕೆಟ್ ಉಡಾವಣೆಗೊಳ್ಳಲಿದೆ. ಸೆಪ್ಟೆಂಬರ್ 6 ಅಥವಾ 7ರಂದು ಚಂದ್ರನ ಕತ್ತಲೆಯ ಭಾಗದಲ್ಲಿ (ದಕ್ಷಿಣ ಧ್ರುವ) ಲ್ಯಾಂಡರ್ ಇಳಿಯಲಿದೆ’ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಅಧ್ಯಕ್ಷ ಡಾ.ಕೆ.ಶಿವನ್ ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಇದನ್ನೂ ಓದಿ:ಚಂದ್ರಯಾನ–2 ಸಂಪೂರ್ಣ ಸ್ವದೇಶಿ ನಿರ್ಮಿತ
‘ಲ್ಯಾಂಡರ್, ರೋವರ್ ಮತ್ತು ಆರ್ಬಿಟರ್‌ಗಳ ನಿರ್ಮಾಣ ಕಾರ್ಯಕೊನೆಗೊಂಡಿದೆ. ಶುಕ್ರವಾರ ಇವುಗಳನ್ನು ಶ್ರೀಹರಿಕೋಟಾಕ್ಕೆ ಸಾಗಿಸಲಾಗುವುದು. 17ರಿಂದ ಉಡಾವಣಾ ವಾಹನಕ್ಕೆ ಸೇರಿಸುವ ಪ್ರಕ್ರಿಯೆಗಳು ಆರಂಭವಾಗಲಿವೆ. ‘ನಾಸಾ’ದ ಒಂದು ಸಣ್ಣ ಸಂವಹನ ಸಾಧನ ಬಿಟ್ಟರೆ ಭಾರತೀಯ ತಂತ್ರಜ್ಞಾನವನ್ನೇ ಸಂಪೂರ್ಣವಾಗಿ ಬಳಸಿಕೊಂಡು ಚಂದ್ರಯಾನ–2 ಅನ್ನು ಸಿದ್ಧಪಡಿಸಲಾಗಿದೆ. ಜಿಎಎಸ್‌ಎಲ್‌ವಿ ಮಾರ್ಕ್ 3 ರಾಕೆಟ್ ನಿರ್ಮಾಣದಲ್ಲಿ ದೇಶದ 500 ಕೈಗಾರಿಕೆಗಳು ಹಾಗೂ ಚಂದ್ರಯಾನ 2 ನಿರ್ಮಾಣದಲ್ಲಿ ದೇಶದ 120 ಕೈಗಾರಿಕೆಗಳು ತೊಡಗಿಕೊಂಡಿವೆ’ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಚಂದ್ರಯಾನ-2ಲ್ಯಾಂಡರ್ ಮತ್ತು ರೋವರ್ ಸ್ವದೇಶಿ
ಭಾರಿ ಸವಾಲು
ಚಂದ್ರನ ಕತ್ತಲೆಯ ಭಾಗವನ್ನು ಇದುವರೆಗೆ ಯಾರೂ ಅಧ್ಯಯನ ನಡೆಸಿಲ್ಲ. ಹೀಗಾಗಿ ಚಂದ್ರಯಾನ–2 ಲ್ಯಾಂಡರ್ ಮತ್ತು ರೋವರ್ ಅನ್ನು ದಕ್ಷಿಣ ಧ್ರುವದಲ್ಲೇ ಸ್ವಯಂಚಾಲಿತವಾಗಿ ಇಳಿಸುವ ಪ್ರಯತ್ನ ನಡೆಯಲಿದೆ. ಇದೊಂದು ಬಹಳ ದೊಡ್ಡ ಸವಾಲು. ಚಂದ್ರನ ಮೇಲೆ ಇಳಿದ 15–20 ನಿಮಿಷಕ್ಕೆ ಲ್ಯಾಂಡರ್ ಚಿತ್ರವನ್ನು ಭೂಮಿಗೆ ಕಳುಹಿಸಲಿದ್ದರೆ, 4.5 ಗಂಟೆಯೊಳಗೆ ರೋವರ್ ಚಿತ್ರ ಕಳುಹಿಸಲಿದೆ. ಚಂದ್ರನ ಮೇಲ್ವೈಯ 100 ಕಿ.ಮೀ.ದೂರದಲ್ಲಿ ಆರ್ಬಿಟರ್ ಸುತ್ತುತ್ತ ಲ್ಯಾಂಡರ್ ಮತ್ತು ರೋವರ್ ಕಳುಹಿಸುವ ಸಂದೇಶವನ್ನು ಭೂಮಿಗೆ ರವಾನಿಸಲಿದೆ.ಒಟ್ಟು 14 ದಿನಗಳ ಕಾಲ (ಒಂದು ಚಂದ್ರ ದಿನ) ಈ ಮೂರೂ ಯಂತ್ರಗಳು ವಿವಿಧ ಸಂಶೋಧನೆ ನಡೆಸಿ ಮಾಹಿತಿ ಸಂಗ್ರಹಿಸಲಿವೆ. ಅಲ್ಲಿಗೇ ಅವುಗಳ ಆಯಸ್ಸು ಸಹ ಕೊನೆಗೊಳ್ಳಲಿದೆ’ ಎಂದು ಶಿವನ್ ವಿವರಿಸಿದರು.
ಮಹಿಳಾ ಶಕ್ತಿ
‘ಸುಮಾರು ₹ 603 ಕೋಟಿ ವೆಚ್ಚದ ಈ ಯೋಜನೆಯಲ್ಲಿ ಶೇ 30ರಷ್ಟು ಮಹಿಳಾ ವಿಜ್ಞಾನಿಗಳು ಭಾಗಿಯಾಗಿದ್ದಾರೆ. ಚಂದ್ರಯಾನ–1ರಲ್ಲಿದ್ದ ವಿಜ್ಞಾನಿಗಳೂ ಇದ್ದಾರೆ. ಅನ್ಯ ಗ್ರಹಕ್ಕೆ ಮಾನವ ನಿರ್ಮಿತ ನೌಕೆಗಳನ್ನು ಕಳುಹಿಸುವ ಯೋಜನೆಯಲ್ಲಿ ಇದೇ ಪ್ರಥಮ ಬಾರಿಗೆ ಮಹಿಳೆಯೊಬ್ಬರು ಯೋಜನಾ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಈ ಯೋಜನೆಯ ಸಫಲತೆ ಬಾಹ್ಯಾಕಾಶ ಕ್ಷೇತ್ರದಲ್ಲಿ ದೇಶವನ್ನು ಇನ್ನಷ್ಟು ಎತ್ತರದಲ್ಲಿ ನಿಲ್ಲಿಸಲಿದೆ’ ಎಂದರು.
ಇದಕ್ಕೆ ಮೊದಲು ಮಾರತ್‌ಹಳ್ಳಿಯಲ್ಲಿರುವ ಇಸ್ರೊದ ಐಸೈಟ್ ಕ್ಯಾಂಪಸ್‌ನಲ್ಲಿ ರವಾನೆಗೆ ಸಜ್ಜಾಗಿರುವ ಲ್ಯಾಂಡರ್, ರೋವರ್ ಮತ್ತು ಆರ್ಬಿಟರ್‌ಗಳನ್ನು ಪ್ರದರ್ಶಿಸಲಾಯಿತು.
ಇದನ್ನೂ ಓದಿ:ಚಂದ್ರಯಾನ -2 ನಭಕ್ಕೆ ನೆಗೆಯಲು ಸಜ್ಜು
3.84 ಲಕ್ಷ ಕಿ.ಮೀ ದೂರ ದೂರ...
ಭೂಮಿಯಿಂದ ಚಂದ್ರನಿಗಿರುವ ದೂರ 3,84,400 ಕಿ.ಮೀ. 5 ಹಂತಗಳಲ್ಲಿ ಇಂಧನ ದಹನಪ್ರಕ್ರಿಯೆಯಗಳ ಬಳಿಕ ಚಂದ್ರಯಾನ–2 ಚಂದ್ರನ ಮೇಲ್ಮೈ ತಲುಪಲಿದೆ. ಬೋಯಿಂಗ್ 747 ವಿಮಾನ ಗಂಟೆಗೆ ಸರಾಸರಿ 640 ಕಿ.ಮೀ.ವೇಗದಲ್ಲಿ ಚಲಿಸುತ್ತದೆ ಎಂದುಕೊಂಡರೆ, ಸತತ 25 ದಿನಗಳ ಕಾಲ ಸಂಚರಿಸುತ್ತಲೇ ಇದ್ದರಷ್ಟೇ ಅದು ಚಂದ್ರನಲ್ಲಿಗೆ ತಲುಪಬಹುದು. ಅಂದರೆ ಭೂಮಿಗೂ ಚಂದ್ರನಿಗೂಅಂತರ ಅಷ್ಟಿದೆ.
ಚಂದ್ರಯಾನ–1
2008ರ ಅಕ್ಟೋಬರ್ 22ರಂದು ಚಂದ್ರಯಾನ–1 ಉಡಾವಣೆಗೊಂಡಿತ್ತು. ನವೆಂಬರ್ 8ರಂದು ಚಂದ್ರನ ಮೇಲ್ವೈ ತಲುಪಿದ್ದ ನೌಕೆ, ನವೆಂಬರ್ 14ರಂದು ಚಂದ್ರನಲ್ಲಿ ನೀರು ಇರುವುದನ್ನು ಪತ್ತೆ ಹಚ್ಚಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.