ಮುಂಬೈ: ಮುಂಬೈಯ ಮಲಾಡ್ ನಿವಾಸಿಯೊಬ್ಬರು ರದ್ದು ಮಾಡಿದ ನೋಟುಗಳನ್ನು ಬದಲಿಸುವುದಕ್ಕಾಗಿ ಗೂಗಲಿಸಿ ಸಿಕ್ಕಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಹಾಯವಾಣಿಗೆ ಕರೆ ಮಾಡಿ ₹48,000 ಕಳೆದುಕೊಂಡ ಘಟನೆ ವರದಿಯಾಗಿದೆ.
ಕಳೆದ ತಿಂಗಳು ಮುಂಬೈನಲ್ಲಿ ವಿಜಯ್ ಕುಮಾರ್ ಮರ್ವಾ (74) ಎಂಬ ವ್ಯಕ್ತಿ ಮನೆ ಸ್ವಚ್ಛಗೊಳಿಸುವಾಗ₹7,000 ಮೌಲ್ಯದ ರದ್ದಾದ ನೋಟುಗಳು ಸಿಕ್ಕಿದ್ದವು.ಈ ನೋಟುಗಳನ್ನು ಬದಲಿಸುವುದಕ್ಕಾಗಿ ಮರ್ವಾ ಆರ್‌ಬಿಐ ಸಹಾಯವಾಣಿಗಾಗಿ ಗೂಗಲಿಸಿ, ಅಲ್ಲಿ ಸಿಕ್ಕಿದ ನಂಬರ್‌ಗೆ ಕರೆ ಮಾಡಿದ್ದಾರೆ.
ಆ ಕಡೆಯಿಂದ ಕರೆ ಸ್ವೀಕರಿಸಿದ ವ್ಯಕ್ತಿ ರದ್ದಾದ ನೋಟುಗಳನ್ನು ಆರ್‌ಬಿಐ ಕಚೇರಿಗೆ ತಲುಪಿಸುವುದಾಗಿ ಹೇಳಿ, ಮರ್ವಾ ಅವರ ಬ್ಯಾಂಕ್ ಮಾಹಿತಿ ಕೇಳಿದ್ದಾರೆ.ರದ್ದಾದ ನೋಟುಗಳನ್ನು ಬದಲಿಸಿ ಆ ಹಣವನ್ನು ನಿಮ್ಮ ಖಾತೆಯಲ್ಲಿ ನಿಕ್ಷೇಪ ಮಾಡಲು ಬ್ಯಾಂಕ್ ಮಾಹಿತಿ ನೀಡಿ ಎಂದು ಹೇಳಿ ಕ್ರೆಡಿಟ್ ಕಾರ್ಡ್ ವಿವರಗಳನ್ನು ಕೇಳಿದ್ದಾರೆ.ಅಷ್ಟೇ ಅಲ್ಲದೆ ಕ್ರೆಡಿಟ್ ಕಾರ್ಡ್ ನ OTP ಕೂಡಾ ಕೇಳಿ ಪಡೆದುಕೊಂಡ ಆ ವ್ಯಕ್ತಿ ಕ್ಷಣ ಮಾತ್ರದಲ್ಲಿ ಮರ್ವಾ ಅವರ ಬ್ಯಾಂಕ್ ಖಾತೆಯಿಂದ ₹48,000 ಹಣ ವಿತ್ ಡ್ರಾ ಮಾಡಿದ್ದಾರೆ.
ತಾನು ಮೋಸ ಹೋಗಿದ್ದು ತಿಳಿದ ಕೂಡಲೇ ಮರ್ವಾ ಅವರು ಮಲಾಡ್ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಜನವರಿ 6 ರಂದು ಈ ಪ್ರಕರಣ ಬಗ್ಗೆ ಎಫ್‍ಐಆರ್ ದಾಖಲಿಸಲಾಗಿದೆ.
ಕೆಲವು ಮೋಸಗಾರರು ಹಣಕಾಸು ಸಂಸ್ಥೆಯ ಹೆಸರಿನಲ್ಲಿ ತಮ್ಮ ನಂಬರ್‍ಗಳನ್ನು ನೀಡಿ ಜನರನ್ನು ಮೋಸ ಮಾಡುತ್ತಿದ್ದಾರೆ ಎಂದು ತಜ್ಞರು ಹೇಳಿದ್ದಾರೆ.
ಈ ಪ್ರಕರಣ ಬಗ್ಗೆ ಪ್ರತಿಕ್ರಿಯಿಸಿದ ಮಹರಾಷ್ಟ್ರದ ಪೊಲೀಸ್ ಅಧಿಕಾರಿ (ಸೈಬರ್ ವಿಭಾಗ) ಬಾಲ್‍ಸಿಂಗ್, ಸೈಬರ್ ವಂಚಕರು ಈ ರೀತಿಯ ಮೋಸ ಮಾಡುತ್ತಿದ್ದಾರೆ. ಸಹಾಯವಾಣಿ ಸಂಖ್ಯೆ ಪ್ರಕಟಿಸುವಾಗ ಅದು ನಿಜವಾದುದು ಹೌದೋ ಅಲ್ಲವೋ ಎಂಬುದನ್ನು ಸರ್ಚ್ ಇಂಜಿನ್‍ಗಳು ದೃಢೀಕರಿಸಬೇಕು.ಈ ರೀತಿಯ ಫಿಶಿಂಗ್, ವಿಶಿಂಗ್ ಮತ್ತು ಸ್ಪಾಮ್ ಪ್ರಕರಣಗಳನ್ನು ತಡೆಯಲು ಫಿಶಿಂಗ್ ನಿಗ್ರಹ ತಂಡವನ್ನು ರೂಪಿಸಲು ನಾವು ಚಿಂತಿಸಿದ್ದೇವೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.