ADVERTISEMENT

ಮುಂಬೈ ವಿಮಾನ ನಿಲ್ದಾಣದಲ್ಲಿ ಸರ್ವರ್ ವೈಫಲ್ಯ; ಪ್ರಯಾಣಿಕರಿಗೆ ತೊಂದರೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2022, 16:09 IST
Last Updated 1 ಡಿಸೆಂಬರ್ 2022, 16:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದೇಶದ ಅತಿದೊಡ್ಡ ಮತ್ತು ಹೆಚ್ಚು ದಟ್ಟಣೆಯುಳ್ಳ, ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟರ್ಮಿನಲ್‌ನಲ್ಲಿ ಗುರುವಾರ ಸಂಜೆ ಕಂಪ್ಯೂಟರ್‌ ವ್ಯವಸ್ಥೆಯಲ್ಲಿ ವ್ಯತ್ಯಯವಾಗಿದ್ದು ತೀವ್ರ ಅವ್ಯವಸ್ಥೆ, ಗೊಂದಲಕ್ಕೆ ಕಾರಣವಾಯಿತು.

ಸರ್ವರ್ ವೈಫಲ್ಯದಿಂದಾಗಿ ಕಂಪ್ಯೂಟರ್ ವ್ಯವಸ್ಥೆ ಎರಡು ಗಂಟೆ ಸ್ಥಗಿತಗೊಂಡಿತ್ತು. ಪರಿಣಾಮ, ವಿಮಾನಯಾನ ಸಂಸ್ಥೆಗಳ ಕೌಂಟರ್‌ಗಳ ಎದುರು ಉದ್ದನೆ ಸಾಲು ಕಂಡುಬಂದವು. ಸಾಲು ಕರಗಿಸಲು ಸಿಬ್ಬಂದಿ ಹೆಚ್ಚು ಶ್ರಮಿಸಬೇಕಾಯಿತು.

ಪ್ರಯಾಣಿಕರಿಗೆ ಚೆಕ್‌ ಇನ್‌ ಆಗಲು ಹೆಚ್ಚಿನ ಸಮಯ ನೀಡಲಾಯಿತು. ವಿಮಾನನಿಲ್ದಾಣದ ಹೊರಗೆ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಂದಾಗಿ ನೆಟ್‌ವರ್ಕ್‌ ಸೇವೆ ವ್ಯತ್ಯಯಗೊಂಡಿತ್ತು ಎಂದು ವಿಮಾನನಿಲ್ದಾಣದ ವಕ್ತಾರರು ತಿಳಿಸಿದರು.

ADVERTISEMENT

ನಿರ್ಮಾಣ ಚಟುವಟಿಕೆಯ ವೇಳೆ ಕೇಬಲ್‌ ಕಡಿತವಾಗಿತ್ತು. ಇದರಿಂದ ನೆಟ್‌ವರ್ಕ್‌ ಸಮಸ್ಯೆಯಾಗಿದೆ ಎಂದು ತಪಾಸಣೆ ವೇಳೆ ತಿಳಿದಿದ್ದು, ಕೇಬಲ ಅಳವಡಿಸಿ ದೋಷ ಸರಿಪಡಿಸಲು ಕ್ರಮವಹಿಸಲಾಯಿತು ಎಂದು ತಿಳಿಸಿದರು.

ನೆಟ್‌ವರ್ಕ್ ವ್ಯತ್ಯಯದಿಂದಾದ ಸಮಸ್ಯೆಯನ್ನು ಕುರಿತಂತೆ ಅನೇಕ ಪ್ರಯಾಣಿಕರು #MumbaiAirport ಹ್ಯಾಷ್‌ಟ್ಯಾಗ್‌ ಬಳಸಿ ಟ್ವೀಟ್ ಮಾಡಿ, ಅಸಹನೆ ಹೊರಹಾಕಿದ್ದಾರೆ.

‘2ನೇ ಟರ್ಮಿನಲ್‌ನಲ್ಲಿ ಈಗ ಭಯಂಕರವಾದ ಪರಿಸ್ಥಿತಿ ಇದೆ. ಸರ್ವರ್ ವೈಫಲ್ಯ. ಇನ್ನಿಲ್ಲದ ಗೊಂದಲ. ಮುಂಬೈನಿಂದ ವಿಮಾನಯಾನ ಮಾಡುವವರಿದ್ದರೆ ಗೊಂದಲ ಎದುರಿಸಬೇಕಾದಿತು, ಎಚ್ಚರಿಕೆ’ ಎಂದು ಬಸ್ತಾಬ್ ಕೆ.ಪರಿಡಾ ಟ್ವೀಟ್‌ ಮಾಡಿದ್ದರು.

‘ವಿಮಾನನಿಲ್ದಾಣದ 2ನೇ ಟರ್ಮಿನಲ್‌ ಬಹುತೇಕ ಸ್ತಬ್ಧಗೊಂಡಿದೆ. ಈ ಮೂಲಕ ನಾವು ವಾರಾಂತ್ಯ ಆರಂಭಿಸುತ್ತಿದ್ದೇವೆ’ ಎಂದು ಇನ್ನೊಬ್ಬ ಪ್ರಯಾಣಿಕರು ಟ್ವೀಟ್‌ ಮಾಡಿ ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.