ADVERTISEMENT

ಅಸ್ಸಾಂ ವಿಧಾನಸಭೆಯಲ್ಲಿ ಗದ್ದಲ, ವಿಪಕ್ಷಗಳಿಂದ ಸಭಾತ್ಯಾಗ

ಮುಖ್ಯಮಂತ್ರಿ ಶರ್ಮಾ ಪತ್ನಿ ಕಂಪನಿ ವಿರುದ್ಧದ ಆರೋಪ ಪ್ರಸ್ತಾಪ

ಪಿಟಿಐ
Published 15 ಸೆಪ್ಟೆಂಬರ್ 2023, 12:52 IST
Last Updated 15 ಸೆಪ್ಟೆಂಬರ್ 2023, 12:52 IST
ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಪತ್ನಿ ರಿಂಕಿ ಭುಯಾನ್ ಶರ್ಮಾ ಒಡೆತನದ ಕಂಪನಿಗೆ ಕೇಂದ್ರದ ಸಬ್ಸಿಡಿ ನೀಡಿರುವ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್‌ ಶಾಸಕರು ಗುವಾಹಟಿಯಲ್ಲಿ ಶುಕ್ರವಾರ ಅಸ್ಸಾಂ ವಿಧಾನಸಭೆ ಅಧಿವೇಶನದ ವೇಳೆ ಮತಪ್ರದರ್ಶನ ನಡೆಸಿದರು –ಪಿಟಿಐ ಚಿತ್ರ
ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಪತ್ನಿ ರಿಂಕಿ ಭುಯಾನ್ ಶರ್ಮಾ ಒಡೆತನದ ಕಂಪನಿಗೆ ಕೇಂದ್ರದ ಸಬ್ಸಿಡಿ ನೀಡಿರುವ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್‌ ಶಾಸಕರು ಗುವಾಹಟಿಯಲ್ಲಿ ಶುಕ್ರವಾರ ಅಸ್ಸಾಂ ವಿಧಾನಸಭೆ ಅಧಿವೇಶನದ ವೇಳೆ ಮತಪ್ರದರ್ಶನ ನಡೆಸಿದರು –ಪಿಟಿಐ ಚಿತ್ರ    

ಗುವಾಹಟಿ(ಪಿಟಿಐ): ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಅವರ ಪತ್ನಿ ಒಡೆತನದ ಕಂಪನಿಯು ಕೇಂದ್ರ ಸರ್ಕಾರದ ಸಬ್ಸಿಡಿ ಪಡೆದಿದೆ ಎಂಬ ಆರೋಪ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ವಿರೋಧ ಪಕ್ಷಗಳು ಪಟ್ಟು ಹಿಡಿದದ್ದು ಅಸ್ಸಾಂ ವಿಧಾನಸಭೆಯಲ್ಲಿ ಶುಕ್ರವಾರ ಕೋಲಾಹಲ ಸೃಷ್ಟಿಸಿತು.

ವಿರೋಧ ಪಕ್ಷಗಳ ಶಾಸಕರು ತಮ್ಮ ಪಟ್ಟು ಸಡಿಲಿಸದ ಕಾರಣ ಕಲಾಪವನ್ನು ಮೂರು ಬಾರಿ ಮುಂದೂಡಲಾಯಿತಲ್ಲದೆ, ನಂತರ ಅವರು ಸಭಾತ್ಯಾಗ ಮಾಡಿದರು.

ಪ್ರಶ್ನೋತ್ತರ ವೇಳೆ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಶಾಸಕ ಕಮಲಾಖ್ಯ ಡೇ ಪುರಕಾಯಸ್ಥ, ‘ಮುಖ್ಯಮಂತ್ರಿ ಪತ್ನಿ ರಿಂಕಿ ಭುಯಾನ್ ಶರ್ಮಾ ಅವರ ಕಂಪನಿಗೆ ರಾಜ್ಯದ ‘ವಸುಂಧರಾ’ ಯೋಜನೆಯಡಿ ಕಲಿಯಾಬೋರ್‌ನಲ್ಲಿ ನಿವೇಶನ ಹಂಚಿಕೆ ಮಾಡಲಾಗಿದೆಯೇ ಎಂಬುದನ್ನು ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಜೋಗೆನ್ ಮೋಹನ್‌ ಸ್ಪಷ್ಟಪಡಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಕಂಪನಿಯು ಕೇಂದ್ರ ಸರ್ಕಾರದ ಸಬ್ಸಿಡಿವಾಗಿ ಈ ನಿವೇಶನ ಪಡೆಯುವುದಕ್ಕೆ ಯಾವೆಲ್ಲಾ ದಾಖಲೆಗಳನ್ನು ಸಲ್ಲಿಸಿದೆ’ ಎಂದೂ ಪುರಕಾಯಸ್ಥ ಪ್ರಶ್ನಿಸಿದರು.

ಆಗ ಮಧ್ಯಪ್ರವೇಶಿಸಿದ ಸ್ಪೀಕರ್ ಬಿಸ್ವಜೀತ್‌ ದೈಮಾರಿ, ‘ಈ ವಿಷಯವು ಪುರಕಾಯಸ್ಥ ಅವರು ಕೇಳಿರುವ ಮೂಲ ಪ್ರಶ್ನೆಗೆ ಸಂಬಂಧಿಸಿದ್ದಲ್ಲ. ಮೇಲಾಗಿ ಮುಖ್ಯಮಂತ್ರಿ ಸದನದಲ್ಲಿ ಹಾಜರಿಲ್ಲ’ ಎಂದು ಹೇಳಿ, ಚರ್ಚೆಗೆ ಅವಕಾಶ ನಿರಾಕರಿಸಿದರು.

ಪುರಕಾಯಸ್ಥ ಅವರು ಮತ್ತೆ ಅವೇ ಪ್ರಶ್ನೆಗಳನ್ನು ಪ್ರಸ್ತಾಪಿಸಿ, ಉತ್ತರ ನೀಡುವಂತೆ ಆಗ್ರಹಿಸಿದ್ದು, ವಿರೋಧ ಪಕ್ಷಗಳ ಶಾಸಕರು ಮತ್ತು ಸಚಿವರ ನಡುವೆ ವಾಗ್ವಾದಕ್ಕೆ ಕಾರಣವಾಯಿತು.

ಗದ್ದಲ ಹೆಚ್ಚಾದಾಗ, ಸದನವನ್ನು ಸ್ಪೀಕರ್‌ 30 ನಿಮಿಷಗಳ ಕಾಲ ಮುಂದೂಡಿದರು. ಮತ್ತೆ ಕಲಾಪ ಆರಂಭಗೊಂಡಾಗ ವಿರೋಧ ಪಕ್ಷ ನಾಯಕ ದೇವವ್ರತ ಸೈಕಿಯಾ ವಿಷಯವನ್ನು ಪ್ರಸ್ತಾಪಿಸಿ, ಶೂನ್ಯವೇಳೆಯಲ್ಲಿ ಚರ್ಚೆಗೆ ಅವಕಾಶ ಕೋರಿದರು.

ಪೀಠದಲ್ಲಿದ್ದ ಡೆಪ್ಯುಟಿ ಸ್ಪೀಕರ್ ನುಮಾಲ್‌ ಮೋಮಿನ್‌ ಅವರು ಚರ್ಚೆಗೆ ಅವಕಾಶ ನಿರಾಕರಿಸಿದರು. ಆಗ, ಕಾಂಗ್ರೆಸ್‌ ಶಾಸಕರು, ಒಬ್ಬ ಸಿಪಿಎಂ ಶಾಸಕ ಹಾಗೂ ಪಕ್ಷೇತರ ಶಾಸಕರೊಬ್ಬರು ಸಭಾಧ್ಯಕ್ಷರ ಪೀಠದ ಮುಂದೆ ಬಂದು ಧರಣಿ ಆರಂಭಿಸಿದರು.

ಇದಕ್ಕೆ ಪ್ರತಿಯಾಗಿ ಆಡಳಿತಾರೂಢ ಬಿಜೆಪಿ ಶಾಸಕರು ಕೂಡ ಪೀಠದ ಮುಂದೆ ತೆರಳಿ, ವಿಪಕ್ಷಗಳ ವಿರುದ್ಧ ಘೋಷಣೆಗಳನ್ನು ಕೂಗಲು ಆರಂಭಿಸಿದ್ದು ಗದ್ದಲಕ್ಕೆ ಕಾರಣವಾಯಿತು. ನಂತರ ಸದನವನ್ನು ಐದು ನಿಮಿಷಗಳ ಕಾಲ ಮುಂದೂಡಲಾಯಿತು. ಮತ್ತೆ ಕಲಾಪ ಆರಂಭವಾದಾಗಲೂ ಗದ್ದಲ ಶುರುವಾದ ಕಾರಣ ಮೂರನೇ ಬಾರಿಗೆ ಸದನವನ್ನು 15 ನಿಮಿಷಗಳ ಕಾಲ ಮುಂದೂಡಲಾಯಿತು.

ಪುನಃ ಕಲಾಪ ಆರಂಭಗೊಂಡಾಗ ಮಾತನಾಡಿದ ವಿರೋಧ ಪಕ್ಷದ ಉಪನಾಯಕ ರಕಿಬುಲ್‌ ಹುಸೇನ್‌, ‘ನಾವು ಪ್ರಸ್ತಾಪಿಸಿದ ವಿಷಯ ಕುರಿತು ಸ್ಪೀಕರ್‌ ತಕ್ಷಣ ಚರ್ಚೆಗೆ ಅವಕಾಶ ನೀಡದ ಕಾರಣ, ಸಭಾತ್ಯಾಗ ಮಾಡುತ್ತೇವೆ’ ಎಂದರು. ಸಿಪಿಎಂ ಹಾಗೂ ಪಕ್ಷೇತರ ಶಾಸಕ ಸಹ ಕಾಂಗ್ರೆಸ್ ಶಾಸಕರನ್ನು ಹಿಂಬಾಲಿಸಿದರು.

ಆರೋಪವೇನು: ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿಂಕಿ ಭುಯಾನ್ ಶರ್ಮಾ ಅವರು, ಪ್ರೈಡ್ ಈಸ್ಟ್ ಎಂಟರ್‌ಟೈನ್‌ಮೆಂಟ್ಸ್ ಕಂಪನಿಯ ಒಡೆತನ ಹೊಂದಿದ್ದಾರೆ. ಇದಕ್ಕೆ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ (‍ಪಿಎಂಕೆಎಸ್‌ವೈ) ₹ 10 ಕೋಟಿ ಸಹಾಯಧನ ನೀಡಲಾಗಿದೆ ಎಂದು ಲೋಕಸಭೆಯ ಕಾಂಗ್ರೆಸ್‌ ಉಪ ನಾಯಕ ಗೌರವ್ ಗೊಗೊಯ್ ಬುಧವಾರ ಆರೋಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.