ADVERTISEMENT

ನ್ಯಾಯಾಧೀಶರ ಜೊತೆ ‘ಅನುಚಿತ’ ವರ್ತನೆ: ವಕೀಲರ ಚದುರಿಸಲು ಲಾಠಿ ಪ್ರಹಾರ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2024, 15:45 IST
Last Updated 29 ಅಕ್ಟೋಬರ್ 2024, 15:45 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಗಾಜಿಯಾಬಾದ್: ಇಲ್ಲಿನ ಜಿಲ್ಲಾ ಮತ್ತು ಸೆಷನ್ಸ್‌ ಕೋರ್ಟ್‌ನಲ್ಲಿ ಮಂಗಳವಾರ ನ್ಯಾಯಾಧೀಶರ ಜೊತೆಗೆ ‘ಅನುಚಿತವಾಗಿ ವರ್ತಿಸಿದ’ ವಕೀಲರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.

ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಗೆ ಸಂಬಂಧಿಸಿದಂತೆ ಕೆಲವು ವಕೀಲರು ಮತ್ತು ನ್ಯಾಯಾಧೀಶರ ನಡುವೆ ಆರಂಭವಾದ ವಾಗ್ವಾದ ಈ ಘಟನೆಗೆ ಕಾರಣವಾಗಿದೆ.

ADVERTISEMENT

ಮೂಲಗಳ ಪ್ರಕಾರ, ಪೊಲೀಸರು ಲಾಠಿ ಪ್ರಹಾರ ಮಾಡಿದ್ದಕ್ಕೆ ಆಕ್ರೋಶಗೊಂಡ ವಕೀಲರು, ಕೋರ್ಟ್ ಆವರಣದ ಬಳಿಯೇ ಇದ್ದ ಪೊಲೀಸ್‌ ಉಪಠಾಣೆಗೆ ಬೆಂಕಿ ಹಚ್ಚಿದ್ದಾರೆ. 

‘ವಕೀಲ ನಹರ್‌ ಸಿಂಗ್‌ ಯಾದವ್ ನೇತೃತ್ವದ ವಕೀಲರು, ಜಿಲ್ಲಾ ನ್ಯಾಯಾಧೀಶ ಅನಿಲ್ ಕುಮಾರ್ ಅವರ ಜೊತೆಗೆ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಆದ್ಯತೆ ಮೇರೆಗೆ ಪರಿಗಣಿಸಬೇಕು ಅಥವಾ ಇತರೆ ನ್ಯಾಯಾಧೀಶರ ಪೀಠಕ್ಕೆ ವರ್ಗಾಹಿಸಬೇಕು ಎಂದು ಆಗ್ರಹಪಡಿಸಿದ್ದರು’ ಎಂದು ಮೂಲಗಳು ತಿಳಿಸಿವೆ.  

ತಕ್ಷಣ ವಿಚಾರಣೆ ನಡೆಸಲು ನಿರಾಕರಿಸಿದ ನ್ಯಾಯಾಧೀಶರು, ‘ಪಟ್ಟಿ ಮಾಡಿರುವ ಕ್ರಮದಲ್ಲಿಯೇ ಅರ್ಜಿಗಳ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದರು. ಇದು ವಾಗ್ವಾದಕ್ಕೆ ಕಾರಣವಾಯಿತು. ಪರಿಸ್ಥಿತಿಯು ಕೈಮೀರುತ್ತಿದೆ ಎನಿಸಿದಾಗ ನ್ಯಾಯಾಧೀಶರೇ ಪೊಲೀಸರನ್ನು ಕರೆಸಿದ್ದಾರೆ. 

ಕೋರ್ಟ್‌ ಆವರಣವನ್ನು ಪ್ರವೇಶಿಸಿದ ಪೊಲೀಸರು, ವಾಗ್ವಾದ ನಡೆಸುತ್ತಿದ್ದ ವಕೀಲರನ್ನು ಚದುರಿಸಲು ಮುಂದಾದರು. ಆದರೆ, ‘ಪೊಲೀಸರು ನಮ್ಮ ಮೇಲೆಯೇ ಹಲ್ಲೆ ನಡೆಸಿದರು’ ಎಂದು ವಕೀಲರು ದೂರಿದ್ದಾರೆ.

ಘರ್ಷಣೆಗೆ ಸಂಬಂಧಿಸಿದ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ‌ಸಾಕಷ್ಟು ಹಂಚಿಕೆಯಾಗಿವೆ. ಪೊಲೀಸ್‌ ಕಾನ್‌ಸ್ಟೆಬಲ್ ಒಬ್ಬರು ಕುರ್ಚಿಯನ್ನು ಎತ್ತಿಹಿಡಿದಿರುವ ದೃಶ್ಯವೂ ಇದೆ. 

ಲಾಠಿ ಪ್ರಹಾರ ಮಾಡಿದ್ದನ್ನು ಖಂಡಿಸಿದ್ದು, ಪೊಲೀಸರ ವಿರುದ್ಧ ಕ್ರಮಕ್ಕೆ ವಕೀಲರ ಸಂಘವು ಒತ್ತಾಯಿಸಿದೆ. ಜಿಲ್ಲಾ ನ್ಯಾಯಾಧೀಶರ ಕಲಾಪವನ್ನು ಬಹಿಷ್ಕರಿಸುವುದಾಗಿಯೂ ತಿಳಿಸಿದೆ.

ಘಟನೆಯ ಕಾರಣದಿಂದಾಗಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.