ADVERTISEMENT

ಶಾಲಾ ಪಠ್ಯದಲ್ಲಿ ತುರ್ತುಪರಿಸ್ಥಿತಿ ಮಾಹಿತಿ: ಮಧ್ಯಪ್ರದೇಶ ಸಿ.ಎಂ

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 16:48 IST
Last Updated 27 ಜೂನ್ 2024, 16:48 IST
..
..   

ಭೋಪಾಲ್: 1975ರಿಂದ–77ರವರೆಗೆ ದೇಶದಲ್ಲಿ ಜಾರಿಯಾಗಿದ್ದ ತುರ್ತು ಪರಿಸ್ಥಿತಿಯ ಪರಿಣಾಮ ಮತ್ತು ಅದರ ವಿರುದ್ಧದ ಹೋರಾಟದ ಮಾಹಿತಿಯನ್ನು ಶಾಲಾ ಪಠ್ಯದಲ್ಲಿ ಅಳವಡಿಸಲಾಗುವುದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್‌ ಯಾದವ್‌ ತಿಳಿಸಿದರು.

ಬುಧವಾರ ಈ ಬಗ್ಗೆ ಮಾತನಾಡಿದ ಯಾದವ್‌, ತುರ್ತುಪರಿಸ್ಥಿತಿಯ ವಿರುದ್ಧ ಹೋರಾಡಿದ ‘ಲೋಕತಂತ್ರ ಸೇನಾನಿಗಳಿಗೆ’ ಹಲವು ವಿಶೇಷ ಸೌಲಭ್ಯಗಳನ್ನು‌  ಘೋಷಣೆ ಮಾಡಿದರು.

‘ತುರ್ತುಪರಿಸ್ಥಿತಿಯ ವೇಳೆ ಉಂಟಾದ ಸಂಕಷ್ಟ ಮತ್ತು ಕಾಂಗ್ರೆಸ್‌ ಸರ್ಕಾರ‌ ಕೈಗೊಂಡ ನಿರ್ಧಾರದ ವಿರುದ್ಧ ಲೋಕತಂತ್ರ ಸೇನಾನಿಗಳ ಕೆಚ್ಚೆದೆಯ ಹೋರಾಟವನ್ನು ಇಂದಿನ ಪೀಳಿಗೆಗೆ ತಿಳಿಯಪಡಿಸುವ ಉದ್ದೇಶದಿಂದ ಪಠ್ಯಕ್ರಮದಲ್ಲಿ ಅಳವಡಿಸುವ ನಿರ್ಧಾರವನ್ನು ಮಾಡಲಾಗಿದೆ’ ಎಂದರು. 

ADVERTISEMENT

‘ಸರ್ಕಾರದ ಅತಿಥಿಗೃಹಗಳಲ್ಲಿ ಲೋಕತಂತ್ರ ಸೇನಾನಿಗಳಿಗೆ 50 ಶೇಕಡಾ ರಿಯಾಯಿತಿ ನೀಡಲಾಗುವುದು. ಹೆದ್ದಾರಿಗಳಲ್ಲಿ ಟೋಲ್‌ ವಿನಾಯಿತಿ. ಆಯುಷ್ಮಾನ್‌ ಆರೋಗ್ಯ ವಿಮೆ ಸೌಲಭ್ಯ ತ್ವರಿತವಾಗಿ ಸಿಗುವಂತೆ ಮಾಡಲಾಗುವುದು’ ಎಂದು ತಿಳಿಸಿದರು. 

‘ಲೋಕತಂತ್ರ ಸೇನಾನಿಗಳಿಗೆ ಆರೋಗ್ಯ ಸಮಸ್ಯೆ ಉಂಟಾದರೆ ಏರ್‌ ಆ್ಯಂಬುಲೆನ್ಸ್‌ ಸೌಲಭ್ಯ ಒದಗಿಸಲಾಗು‌ವುದು. ರಾಜ್ಯದಲ್ಲಿ ಏರ್‌ ಟ್ಯಾಕ್ಸಿ ವ್ಯವಸ್ಥೆ ಆರಂಭವಾದರೆ  25 ಶೇಕಡಾ ರಿಯಾಯಿತಿ ನೀಡಲಾಗುವುದು’ ಎಂದು ಹೇಳಿದರು. 

‘ಲೋಕತಂತ್ರ ಸೇನಾನಿಗಳ ಅಂತಿಮ ಸಂಸ್ಕಾರವನ್ನು ಸರ್ಕಾರಿ ಗೌರವಗಳೊಂದಿಗೆ ನಡೆಸಲಾಗುವುದು. ಮರಣ ಪರಿಹಾರ ಮೊತ್ತವನ್ನು ₹ 8 ಸಾವಿರದಿಂದ ₹10 ಸಾವಿರಕ್ಕೆ ಏರಿಸಲಾಗುವುದು. ಅವರ ಕುಟುಂಬಕ್ಕೆ ಉದ್ಯೋಗವಕಾಶ ಮತ್ತು ಉದ್ಯಮ ಆರಂಭಿಸಲು ಸೂಕ್ತ ತರಬೇತಿ ಒದಗಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.