ADVERTISEMENT

ಚರಣ್‌ಜಿತ್‌ ಸಿಂಗ್‌ ಚನ್ನಿ: ಪಂಜಾಬ್‌ನ ಮೊದಲ ದಲಿತ ಮುಖ್ಯಮಂತ್ರಿ

ಚನ್ನಿ ಅವರ ಮೇಲಿದೆ ಮೀಟೂ ಆರೋಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಸೆಪ್ಟೆಂಬರ್ 2021, 14:06 IST
Last Updated 19 ಸೆಪ್ಟೆಂಬರ್ 2021, 14:06 IST
ಪಂಜಾಬ್‌ ಸಿಎಂ ಚರಣ್‌ಜಿತ್‌ ಸಿಂಗ್‌ ಚನ್ನಿ (ಪಿಟಿಐ ಚಿತ್ರ)
ಪಂಜಾಬ್‌ ಸಿಎಂ ಚರಣ್‌ಜಿತ್‌ ಸಿಂಗ್‌ ಚನ್ನಿ (ಪಿಟಿಐ ಚಿತ್ರ)   

ಚಂಡೀಗಡ: ತಾಂತ್ರಿಕ ಶಿಕ್ಷಣ ಸಚಿವರಾಗಿದ್ದ 58 ವರ್ಷದ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರು ಪಂಜಾಬ್‌ನ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಇದೇ ಮೊದಲ ಬಾರಿಗೆ ಪಂಜಾಬ್‌ನ ಚುಕ್ಕಾಣಿ ದಲಿತ ಸಮುದಾಯದ ನಾಯಕರಿಗೆ ಸಿಕ್ಕಿದೆ.ಸೋಮವಾರ ಸಿಎಂ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್‌ ಇದೇ ಮೊದಲ ಬಾರಿಗೆ ಪರಿಶಿಷ್ಟ ಜಾತಿಗೆ ಸೇರಿದ ನಾಯಕರನ್ನು ಮುಖ್ಯಮಂತ್ರಿಯಾಗಿ ಘೋಷಣೆ ಮಾಡಿದೆ. ಚನ್ನಿ ಅವರು ರಾಮ್‌ದಾಸಿಯಾ(ಚಮಾರ್‌) ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಚಮಕೌರ್‌ ಸಾಹಿಬ್‌ ವಿಧಾನಸಭೆ ಕ್ಷೇತ್ರವನ್ನು ಪ್ರತಿನಿಧಿಸುವ ಚನ್ನಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2015-16ರಲ್ಲಿ ಚನ್ನಿ ಅವರು ಪಂಜಾಬ್‌ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿದ್ದರು. ಮಾರ್ಚ್‌ 2017ರಲ್ಲಿ ಸಿಎಂ ಅಮರಿಂದರ್‌ ಸಿಂಗ್‌ ಸಂಪುಟಕ್ಕೆ ಸೇರುವ ಮೂಲಕ ಮೊದಲ ಬಾರಿಗೆ ಸಚಿವರಾಗಿ ಆಯ್ಕೆಯಾದರು.

ADVERTISEMENT

ಪಂಜಾಬ್‌ ವಿಧಾನಸಭೆಗೆ ಕೇವಲ ಒಂದು ತಿಂಗಳು ಬಾಕಿ ಇರುವಂತೆ ನಡೆದ ದಿಢೀರ್ ಬೆಳವಣಿಗೆಯಲ್ಲಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಬಳಿಕ ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಕಸರತ್ತು ರಾಷ್ಟ್ರದ ಗಮನ ಸೆಳೆದಿತ್ತು. ಕೊನೆಯ ವರೆಗೆಸುಖ್‌ಜಿಂದರ್‌ ಸಿಂಗ್‌ ರಂಧಾವಾ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನಲಾಗಿತ್ತು.

ಚನ್ನಿ ಮೀಟೂ ವಿವಾದ
2018ರಲ್ಲಿ ಐಎಎಸ್‌ ಮಹಿಳಾ ಅಧಿಕಾರಿ ಒಬ್ಬರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಆರೋಪವು ಚನ್ನಿ ಅವರ ಮೇಲಿದೆ. ರಾಷ್ಟ್ರದಲ್ಲಿ ಮೀಟೂ ಅಭಿಯಾನ ಸದ್ದು ಮಾಡಿದ ಸಂದರ್ಭ ಚನ್ನಿ ಅವರ ಮೇಲೆ ಈ ಆರೋಪ ಕೇಳಿ ಬಂದಿತ್ತು. 'ಮಹಿಳೆ ದೂರು ನೀಡಿಲ್ಲ, ಪ್ರಕರಣ ಇತ್ಯರ್ಥವಾಗಿದೆ' ಎಂದು ಮಾಜಿ ಸಿಎಂ ಅಮರಿಂದರ್‌ ಸಿಂಗ್‌ ಸಮಜಾಯಿಷಿ ನೀಡಿದ್ದರು. ಆದರೆ ಪಂಜಾಬ್‌ ಮಹಿಳಾ ಆಯೋಗವು ಈ ವರ್ಷ ಮೇ ತಿಂಗಳಲ್ಲಿ ರಾಜ್ಯ ಸರ್ಕಾರಕ್ಕೆ ಆರೋಪದ ಕುರಿತಾಗಿ ಪ್ರತಿಕ್ರಿಯೆ ನೀಡುವಂತೆ ನೋಟಿಸ್‌ ಕಳುಹಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.