ಡೆಹರಾಡೂನ್: ಇಂದು ಮತ್ತು ನಾಳೆ (ಜುಲೈ 7–8) ಗರ್ವಾಲ್ ವಯಲದಲ್ಲಿ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಚಾರ್‌ಧಾಮ್ ಯಾತ್ರೆಯನ್ನು ಭಾನುವಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
‘ಯಾತ್ರಿಗಳ ಸುರಕ್ಷತೆಗಾಗಿ ಯಾತ್ರೆಯನ್ನು ಮುಂದೂಡಲಾಗಿದೆ’ ಎಂದು ಗರ್ವಾಲ್ ಪೊಲೀಸ್ ಆಯುಕ್ತ ವಿನಯ್ ಶಂಕರ್ ಪ್ರಸಾದ್ ಹೇಳಿದ್ದಾರೆ.
ಜುಲೈ 7–8ರಂದು ಗರ್ವಾಲ್ ವಲಯದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಹೀಗಾಗಿ ಜುಲೈ 7ರಿಂದ ರಿಷಿಕೇಶದಿಂದ ಮುಂದೆ ತೆರಳಬಾರದು ಎಂದು ಯಾತ್ರಿಗಳಲ್ಲಿ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈಗಾಗಲೇ ಯಾತ್ರೆ ಮುಂದುವರಿಸಿರುವವರು, ವಾತಾವರಣ ತಿಳಿಯಾಗುವವರೆಗೂ ಈಗಿರುವ ಸ್ಥಳದಲ್ಲೇ ಇರಬೇಕು ಎಂದು ಸೂಚಿಸಲಾಗಿದೆ.
ಕಳೆದ ಕೆಲವು ದಿನಗಳಿಂದ ಉತ್ತರಾಖಂಡದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದೆ. ಪರಿಣಾಮ ಗುಡ್ಡ ಪ್ರದೇಶಗಳಲ್ಲಿ ಭೂಕುಸಿತ ಉಂಟಾಗುತ್ತಿದೆ. ಬದರಿನಾಥಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಗುಡ್ಡಗಳಿಂದ ಅವಶೇಷಗಳು ಬೀಳುತ್ತಿರುವುದರಿಂದ ಹಲವು ಕಡೆ ಸಂಚಾರಕ್ಕೆ ತೊಡಕು ಉಂಟಾಗಿದೆ.
ಭೂ ಕುಸಿತದಿಂದ ಭಾರಿ ಕಲ್ಲುಗಳು ರಸ್ತೆಗಳ ಮೇಳೆ ಬೀಳುತ್ತಿದ್ದು, ಬದರಿನಾಥದಿಂದ ದ್ವಿಚಕ್ರ ವಾಹನದಲ್ಲಿ ಹಿಂದಿರುಗುತ್ತಿದ್ದ ಹೈದರಾಬಾದ್ ಮೂಲದ ಇಬ್ಬರು ಯಾತ್ರಿಗಳು ಶನಿವಾರ ಸಾವಿಗೀಡಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.