ADVERTISEMENT

ಮುಂಬೈ: ಲಘು ವಿಮಾನ ಪತನ, ಐದು ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 28 ಜೂನ್ 2018, 18:19 IST
Last Updated 28 ಜೂನ್ 2018, 18:19 IST
ಚಿತ್ರ: ಎಎನ್‌ಐ ಟ್ವಿಟರ್
ಚಿತ್ರ: ಎಎನ್‌ಐ ಟ್ವಿಟರ್   

ಮುಂಬೈ:ದಕ್ಷಿಣ ಮುಂಬೈನ ಸರ್ವೋದಯ ನಗರದ ಸಣ್ಣ ವಿಮಾನವೊಂದು ಪತನವಾಗಿ ಐದು ಮಂದಿ ಮೃತಪಟ್ಟಿದ್ದಾರೆ.

‘ಮುಂಬೈನ ಯು.ವೈ.ಏವಿಯೇಷನ್ ಎಂಬ ಖಾಸಗಿ ಸಂಸ್ಥೆಯ ಒಡೆತನದಲ್ಲಿ ಈ ವಿಮಾನ ಇತ್ತು. ವಿಮಾನವನ್ನು ಪರೀಕ್ಷಾರ್ಥ ಹಾರಾಟ ನಡೆಸುತ್ತಿದ್ದಾಗ ಅಪಘಾತ ಸಂಭವಿಸಿದೆ’ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಹೇಳಿದೆ.

‘ಪರೀಕ್ಷಾರ್ಥ ಹಾರಾಟ ನಡೆಸುತ್ತಿದ್ದ ಕಾರಣ ವಿಮಾನದಲ್ಲಿ ಇಬ್ಬರು ಪೈಲಟ್‌ಗಳು ಮತ್ತು ಇಬ್ಬರು ಎಂಜಿನಿಯರ್‌ಗಳು ಇದ್ದರು. ಆ ನಾಲ್ವರೂ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಪತನದ ಸಂದರ್ಭದಲ್ಲಿ ರಸ್ತೆಯಲ್ಲಿದ್ದ ವ್ಯಕ್ತಿಯೊಬ್ಬರೂ ಮೃತಪಟ್ಟಿದ್ದಾರೆ’ ಎಂದು ಡಿಜಿಸಿಎ ಹೇಳಿದೆ.

ADVERTISEMENT

‘ಪತನಕ್ಕೆ ಕಾರಣ ಏನು ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.ವಿಮಾನ ಅಪಘಾತ ತನಿಖಾ ಬ್ಯೂರೊ ಈ ಅವಘಡದ ತನಿಖೆ ನಡೆಸಲಿದೆ’ ಎಂದು ಡಿಜಿಸಿಎ ಮಾಹಿತಿ ನೀಡಿದೆ.

ನಿರ್ಮಾಣ ಹಂತದಲ್ಲಿದ್ದ ವಸತಿ ಸಮುಚ್ಚಯದ ಆವರಣದಲ್ಲಿ ವಿಮಾನ ಪತನಗೊಂಡಿದೆ. ಆ ಸ್ಥಳದಿಂದ ಕೆಲವೇ ಮೀಟರ್‌ ದೂರದಲ್ಲಿ ಬೃಹತ್ ವಸತಿ ಸಮುಚ್ಚಯಗಳಿದ್ದವು. ವಿಮಾನವು ಸ್ವಲ್ಪ ದೂರ ಮುಂದೆ ಹೋಗಿ ಪತನವಾಗಿದ್ದಿದ್ದರೆ, ಮತ್ತಷ್ಟು ಸಾವು–ನೋವು ಸಂಭವಿಸುತ್ತಿತ್ತು. ಹೀಗಾಗಿ ಭಾರಿ ಅವಘಡ ತಪ್ಪಿದೆ ಎಂದು ಮುಂಬೈನ ಅಗ್ನಿಶಾಮಕ ದಳ ಮಾಹಿತಿ ನೀಡಿದೆ.

ಉಳಿದಿರುವುದು ಬಾಲ, ರೆಕ್ಕೆ ಮಾತ್ರ

ಪತನದ ನಂತರ ವಿಮಾನ ಸ್ಫೋಟಗೊಂಡಿದೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಪತನದ ನಂತರದ ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವ ವಿಡಿಯೊ ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸ್ಫೋಟದ ತೀವ್ರತೆಗೆ ವಿಮಾನ ಸಂಪೂರ್ಣ ನುಚ್ಚುನೂರಾಗಿದೆ. ವಿಮಾನದ ಹಿಂಬದಿಯ ಟೇಲ್‌ ಫಿನ್‌ (ಬಾಲ) ಮತ್ತು ರೆಕ್ಕೆ ಮಾತ್ರ ಉಳಿದಿದೆ. ಪತನದ ತೀವ್ರತೆಯನ್ನು ಸಮೀಪದ ಮನೆಯವರು ಮತ್ತು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ.

‘ಮಧ್ಯಾಹ್ನ 1.30ರ ಹೊತ್ತಿಗೆ ಒಂದರ ಹಿಂದೆ ಮೂರು ಸ್ಫೋಟ ಕೇಳಿಸಿತು. ನಮ್ಮ ಮನೆಯೆಲ್ಲಾ ನಡುಗುವಷ್ಟು ಸ್ಫೋಟ ತೀವ್ರವಾಗಿತ್ತು. ಕಿಟಕಿ ಬಳಿ ಬಂದು ನೋಡಿದರೆ ಬೆಂಕಿ ಹೊತ್ತಿ ಉರಿಯುತ್ತಿತ್ತು’ ಎಂದು ಗೃಹಿಣಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.

‘ನಾವು ರಸ್ತೆಯಲ್ಲಿ ನಿಂತಿದ್ದೆವು. ಜೋರಾದ ಸ್ಫೋಟ ಕೇಳಿಸಿತು. ಟ್ರಾನ್ಸ್‌ಫಾರ್ಮರ್ (ವಿದ್ಯುತ್ ಪರಿವರ್ತಕ) ಸ್ಫೋಟವಾಗಿರಬೇಕು ಅಂದುಕೊಂಡೆವು. ಅಷ್ಟರಲ್ಲೇ ಮರವೊಂದಕ್ಕೆ ಬೆಂಕಿ ಹೊತ್ತಿಕೊಂಡು ಉರಿಯುತ್ತಿತ್ತು. ಹತ್ತಿರ ಹೋಗಿ ನೋಡಿದಾಗ ರಸ್ತೆಯಲ್ಲಿ ವ್ಯಕ್ತಿಯೊಬ್ಬರಿಗೆ ಬೆಂಕಿ ಹೊತ್ತಿಕೊಂಡಿತ್ತು. ಅವರ ಬೈಕೂ ಬೆಂಕಿಗೆ ಆಹುತಿಯಾಗಿತ್ತು. ಸ್ಫೋಟವಾಗಿದ್ದು ವಿಮಾನ ಎಂದು ಗೊತ್ತಾಗಲು ಬಹಳ ಸಮಯ ಬೇಕಾಯಿತು’ ಎಂದು ಮತ್ತೊಬ್ಬ ವ್ಯಕ್ತಿ ಅವಘಡದ ಬಗ್ಗೆ ವಿವರಣೆ ನೀಡಿದ್ದಾರೆ.

ಉತ್ತರ ಪ್ರದೇಶ ಸರ್ಕಾರದಲ್ಲ

ವಿಮಾನದ ಟೇಲ್‌ ಫಿನ್ ಮೇಲೆ ‘ಉತ್ತರ ಪ್ರದೇಶ ಸರ್ಕಾರ’ ಮತ್ತು ಉತ್ತರ ಪ್ರದೇಶ ಸರ್ಕಾರ ಲಾಂಛನ ಇತ್ತು. ಹೀಗಾಗಿ ವಿಮಾನ ಉತ್ತರ ಪ್ರದೇಶ ಸರ್ಕಾರಕ್ಕೆ ಸೇರಿದ್ದಾಗಿರಬಹುದು ಎಂದು ಆರಂಭದಲ್ಲಿ ಊಹಿಸಲಾಗಿತ್ತು. ‘ಆ ವಿಮಾನವನ್ನು 2014ರಲ್ಲೇ ಮುಂಬೈನ ಖಾಸಗಿ ಸಂಸ್ಥೆಯೊಂದಕ್ಕೆ ಮಾರಾಟ ಮಾಡಲಾಗಿದೆ’ ಎಂದು ಉತ್ತರ ಪ್ರದೇಶ ಸರ್ಕಾರ ಸ್ಪಷ್ಟನೆ ನೀಡಿತು. ಡಿಜಿಸಿಎ ಸಹ ದನ್ನು ದೃಢಪಡಿಸಿತು.

*

*

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.