ADVERTISEMENT

100 ನಕ್ಸಲರ ಕೈವಾಡ ಶಂಕೆ

ಛತ್ತೀಸಗಡ: ಸ್ಫೋಟಕ್ಕೆ ಬಳಸಿದ್ದ ಜಿಪಿಎಸ್‌ ಉಪಕರಣ ವಶ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 19:20 IST
Last Updated 10 ಏಪ್ರಿಲ್ 2019, 19:20 IST
ದಾಳಿಯಲ್ಲಿ ಸಂಪೂರ್ಣ ನಜ್ಜುಗುಜ್ಜಾಗಿರುವ ವಾಹನ –ಪಿಟಿಐ ಚಿತ್ರ
ದಾಳಿಯಲ್ಲಿ ಸಂಪೂರ್ಣ ನಜ್ಜುಗುಜ್ಜಾಗಿರುವ ವಾಹನ –ಪಿಟಿಐ ಚಿತ್ರ   

ರಾಯಪುರ: ಛತ್ತೀಸಗಡದ ದಾಂತೇವಾಡದಲ್ಲಿ ಮಂಗಳವಾರ ನಡೆಸಿದ ದಾಳಿಯಲ್ಲಿ ಕನಿಷ್ಠ 100 ನಕಲ್ಸರು ಭಾಗಿಯಾಗಿರುವ ಶಂಕೆ ಇದೆ.

ಈ ದಾಳಿಯಲ್ಲಿ ಬಿಜೆಪಿ ಶಾಸಕ ಭೀಮ ಮಾಂಡವಿ ಮತ್ತು ನಾಲ್ವರು ಭದ್ರತಾ ಸಿಬ್ಬಂದಿ ಸಾವಿಗೀಡಾಗಿದ್ದರು. ಬೆಂಗಾವಲು ಭದ್ರತಾ ಸಿಬ್ಬಂದಿಯೊಂದಿಗೆ ಶಾಸಕರು ಬಚೆಲಿಯಿಂದ ಕ್ವಾಕೊಂಡದತ್ತ ತೆರಳುತ್ತಿದ್ದಾಗ ಶ್ಯಾಮಗಿರಿ ಗ್ರಾಮದ ಬಳಿ ವಾಹನವನ್ನು ಸುಧಾರಿತ ಬಾಂಬ್‌ನಿಂದ ಸ್ಫೋಟಿಸುವ ಮೂಲಕ ಹತ್ಯೆ ಮಾಡಲಾಗಿತ್ತು. ನಕ್ಸಲರು ಬಳಸಿದ್ದ ಜಿಪಿಎಸ್‌ ಉಪಕರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಉಪಕರಣ ಮೂಲಕ ಸುಧಾರಿತ ಬಾಂಬ್‌ ಸ್ಫೋಟಿಸಲಾಗಿತ್ತು.

‘ಕಮಾಂಡರ್‌ ದೇವಾ ಮತ್ತು ವಿನೋದ್‌ ನೇತೃತ್ವದಲ್ಲಿ ನಡೆಸಿದ ದಾಳಿಯಲ್ಲಿ ಸುಮಾರು 100 ನಕ್ಸಲರು ಇದ್ದರು. ಇವರಲ್ಲಿ 50ರಿಂದ 60 ನಕ್ಸಲರು ಶಸ್ತ್ರಸಜ್ಜಿತರಾಗಿದ್ದರು ಎನ್ನುವ ಮಾಹಿತಿ ದೊರೆತಿದೆ’ ಎಂದು ದಂತೇವಾಡ ಪೊಲೀಸ್‌ ವರಿಷ್ಠಾಧಿಕಾರಿ ಅಭಿಷೇಕ್‌ ಪಲ್ಲವ್‌ ತಿಳಿಸಿದ್ದಾರೆ.

ADVERTISEMENT

‘ಈ ಪ್ರದೇಶದಲ್ಲಿ ಸಕ್ರಿಯವಾಗಿರುವ ನಿಷೇಧಿತ ಸಿಪಿಐನ (ಮಾವೋವಾದ) ಮಲಂಗೀರ್‌ ಪ್ರದೇಶದ ಸಮಿತಿಯು ಕೇರ್ಲಪಾಲ್‌ ಪ್ರದೇಶ ಸಮಿತಿ ಮತ್ತು ಜಗರ್ಗುಂಡಾ ಪ್ರದೇಶದ ಸಮಿತಿಯ ಕಾರ್ಯಕರ್ತರ ಜತೆ ಜಂಟಿಯಾಗಿ ದಾಳಿ ನಡೆಸಿದೆ. 9ಎಂಎಂ ಪಿಸ್ತೂಲ್‌ ಮತ್ತು ಎರಡು ರೈಫಲ್‌ ಸೇರಿದಂತೆ ಮೂರು ಶಸ್ತ್ರಾಸ್ತ್ರಗಳು ದಾಳಿ ನಡೆದ ಸ್ಥಳದಿಂದ ನಾಪತ್ತೆಯಾಗಿವೆ’ ಎಂದು ವಿವರಿಸಿದ್ದಾರೆ.

’ಮಂಗಳವಾರ ಹೆಚ್ಚುವರಿಯಾಗಿ 50 ಜಿಲ್ಲಾ ಪೊಲೀಸ್‌ ಪಡೆಯ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಆದರೆ, ಚುನಾವಣಾ ಪ್ರಚಾರ ಮುಕ್ತಾಯಗೊಳಿಸಿರುವುದರಿಂದ ಹೆಚ್ಚುವರಿ ಸಿಬ್ಬಂದಿಯನ್ನು ವಾಪಸ್‌ ಪಡೆಯುವಂತೆ ಶಾಸಕರು ಸೂಚಿಸಿದ್ದರು. ಬಳಿಕ, ದಿಢೀರನೆ ಶಾಸಕರು ಗುಂಡುನಿರೋಧಕ ವಾಹನದಲ್ಲಿ ಕ್ವಾಕೊಂಡದತ್ತ ತೆರಳಲು ನಿರ್ಧರಿಸಿದರು. ಅವರ ಬೆಂಗಾವಲು ವಾಹನದಲ್ಲಿದ್ದ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದರು. ಭದ್ರತಾ ಕಾರಣಕ್ಕೆ ಆ ಮಾರ್ಗದಲ್ಲಿ ಸಂಚರಿಸದಂತೆ ಪೊಲೀಸ್‌ ಅಧಿಕಾರಿಗಳ ಸಲಹೆಯನ್ನು ಶಾಸಕರು ತಿರಸ್ಕರಿಸಿದರು. ಶ್ಯಾಮಗಿರಿಯಲ್ಲಿ ಕೆಲ ನಿಮಿಷಗಳ ಕಾಲವಿದ್ದು ಕ್ವಾಕೊಂಡದತ್ತ ತೆರಳಿದರು. ಕೇವಲ 200 ಮೀಟರ್‌ ದಾಟಿದಾಗ ನಕ್ಸಲರು ನೆಲದಲ್ಲಿ ಹುದುಗಿಸಿಡಲಾಗಿದ್ದ 60–70 ಕೆ.ಜಿ. ತೂಕದ ಬಾಂಬ್‌ಗಳನ್ನು ಸ್ಫೋಟಿಸಿದ್ದಾರೆ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.