ಕೊಚ್ಚಿ: ಕಳೆದ ಎರಡು ತಿಂಗಳಲ್ಲಿ ಯಾತ್ರೆ ಕೈಗೊಂಡಿದ್ದ ಭಕ್ತರು ಶಬರಿಮಲೆ ದೇವಸ್ಥಾನಕ್ಕೆ ನೀಡಿರುವ ಹಣ ಮತ್ತು ಕಾಣಿಕೆ ಬಾಕ್ಸ್‌ಗಳ ಎಣಿಕೆಯಲ್ಲಿ ಏನಾದರೂ ಲೋಪ ನಡೆದಿದೆಯೇ ಎಂಬ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಕೇರಳ ಹೈಕೋರ್ಟ್, ತಿರುವಾಂಕೂರು ದೇವಸ್ಥಾನ ಮಂಡಳಿಯ(ಟಿಡಿಬಿ) ಜಾಗೃತ ದಳಕ್ಕೆ ಆದೇಶಿಸಿದೆ.
ಭಕ್ತರು ನೀಡಿರುವ ಕಾಣಿಕೆ ಅಥವಾ ದೇಣಿಗೆ ಪ್ಯಾಕೆಟ್‌ಗಳಲ್ಲಿನ ಹಣವನ್ನು ಎಣಿಕೆ ಮಾಡದ ಕಾರಣ, ಅದರಲ್ಲಿರುವ ನೋಟುಗಳು ಹಾಳಾಗಿದ್ದು, ಬಳಸಲು ಯೋಗ್ಯವಲ್ಲದಂತಾಗಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರನ್, ಪಿ ಜಿ ಅಜಿತ್ ಕುಮಾರ್ ಅವರನ್ನೊಳಗೊಂಡ ಹೈಕೋರ್ಟ್ ವಿಭಾಗೀಯ ಪೀಠವು ಪರಿಶೀಲನೆಗೆ ಆದೇಶಿಸಿದೆ.
ಈ ಕುರಿತಂತೆ ಶಬರಿಮಲೆಯ ವಿಶೇಷ ಆಯುಕ್ತರಿಂದಲೂ ಕೋರ್ಟ್ ವರದಿ ಕೇಳಿತ್ತು. ಆಯುಕ್ತರು ಸಲ್ಲಿರುವ ವರದಿಯಲ್ಲಿ, ಅಪಾರ ಪ್ರಮಾಣದ ನೋಟು ಮತ್ತು ನಾಣ್ಯಗಳು ವಿವಿಧ ಪೂಜೆಗಳ ಮೂಲಕ ಕಾಣಿಕೆಯಾಗಿ ಬಂದಿವೆ. ಭಂಡಾರದಲ್ಲಿರುವ ಹಣ ಮತ್ತು ಕಾಣಿಕೆಗಳ ಎಣಿಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಅಧಿಕ ಪ್ರಮಾಣದ ನಾಣ್ಯಗಳು ಬಂದಿದ್ದು, ಜನವರಿ 20ರಂದು ದೇಗುಲದ ಬಾಗಿಲು ಮುಚ್ಚುವ ವೇಳೆಗೆ ಎಣಿಕೆ ಮುಗಿಯುವುದಿಲ್ಲ ಎಂದು ತಿಳಿಸಲಾಗಿದೆ.
ಜಾಗದ ಕೊರತೆಯಿಂದಾಗಿ ನಾಣ್ಯಗಳ ಎಣಿಕೆ ಪ್ರಕ್ರಿಯೆಯನ್ನು ಅನ್ನದಾನ ಮಂಟಪದಲ್ಲೂ ನಡೆಸಲಾಗುತ್ತಿದೆ ಎಂದೂ ಅವರು ಹೇಳಿದ್ದಾರೆ. ಅಲ್ಲದೆ, ಎಣಿಕೆಯ ಮೇಲ್ವಿಚಾರಣೆಯನ್ನು ತಾವೇ ನಡೆಸುತ್ತಿದ್ದು, ಪ್ರಕ್ರಿಯೆ ಕುರಿತಂತೆ ಮತ್ತೊಂದು ವರದಿ ಸಲ್ಲಿಸುವುದಾಗಿ ಆಯುಕ್ತರು ಕೋರ್ಟ್‌ಗೆ ತಿಳಿಸಿದ್ದಾರೆ.
2 ತಿಂಗಳ ವಾರ್ಷಿಕ ಶಬರಿಮಲೆ ಯಾತ್ರೆ ಸಂದರ್ಭ ಜನವರಿ 12ರವರೆಗೆ ₹310.40 ಕೋಟಿ ಕಾಣಿಕೆ ಸಂಗ್ರಹವಾಗಿದೆ ಎಂದು ಜನವರಿ 13ರಂದು ಟಿಡಿಬಿ ಹೇಳಿತ್ತು.
ಒಟ್ಟು ₹ 310,40,97,309 ಹಣದಲ್ಲಿ ₹ 231,55,32,006 ರಷ್ಟು ಹಣವು ಡಿಸೆಂಬರ್ 27ಕ್ಕೆ ಅಂತ್ಯಗೊಂಡ ಮಂಡಲ ಪೂಜೆ ಅವಧಿಯಲ್ಲೇ ಬಂದಿದೆ. ಉಳಿದ ₹78,85,65,303 ಹಣವು ಡಿಸೆಂಬರ್ 30ರಿಂದ ನಡೆಯುತ್ತಿರುವ ‘ಮಕರ ಜ್ಯೋತಿ’ ಸಮಯದಲ್ಲಿ ಬಂದಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.