ADVERTISEMENT

ಚಿರತೆ ದಾಳಿಯಿಂದ ತಮ್ಮನ ರಕ್ಷಿಸಿದ 11ರ ಬಾಲಕಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2019, 20:00 IST
Last Updated 9 ಅಕ್ಟೋಬರ್ 2019, 20:00 IST
   

ಪೌರಿ (ಉತ್ತರಾಖಂಡ): 11 ವರ್ಷದ ಬಾಲಕಿಯೊಬ್ಬಳು ಚಿರತೆ ದಾಳಿಯಿಂದ ತನ್ನ ತಮ್ಮನನ್ನು ರಕ್ಷಿಸಿ ಸ್ಥೈರ್ಯ ತೋರಿದ ಪ್ರಕರಣ ವರದಿಯಾಗಿದೆ.

‘ರಾಖಿ ತನ್ನ ನಾಲ್ಕು ವರ್ಷದ ತಮ್ಮನ ಜತೆ ಆಡುತ್ತಿದ್ದಾಗ ಚಿರತೆ ದಾಳಿ ನಡೆಸಿತು. ಚಿರತೆಗೆ ಹೆದರದೆ, ತಕ್ಷಣ ಆಕೆ ತಮ್ಮನನ್ನು ರಕ್ಷಿಸಲು ಮುಂದಾದಳು. ಈ ವೇಳೆಗೆ ಗ್ರಾಮಸ್ಥರು ಸ್ಥಳದಲ್ಲಿ ಸೇರಿದ್ದರಿಂದ ಚಿರತೆ ಓಡಿಹೋಯಿತು. ಆದರೆ ಆ ವೇಳೆಗಾಗಲೇ ಚಿರತೆ ದಾಳಿಯಿಂದ ರಾಖಿಯ ಕುತ್ತಿಗೆಗೆ ಸಾಕಷ್ಟು ಗಾಯಗಳಾಗಿದ್ದವು. ತಮ್ಮ ಸುರಕ್ಷಿತವಾಗಿದ್ದಾನೆ’ ಎಂದು ಬಾಲಕಿಯ ಕುಟುಂಬದವರು ತಿಳಿಸಿದ್ದಾರೆ.

ಶೌರ್ಯ ಪ್ರಶಸ್ತಿಗೆ ರಾಖಿಯ ಹೆಸರು ಶಿಫಾರಸು ಮಾಡುವುದಾಗಿ ಪೌರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ.

ADVERTISEMENT

ಸಚಿವರ ನೆರವು: ‘ರಾಖಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗಾಯದ ತೀವ್ರತೆ ಗಮನಿಸಿ ಹೆಚ್ಚು ಸೌಲಭ್ಯವುಳ್ಳ ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಸೂಚಿಸಿದರು. ದೆಹಲಿಯ ಸರ್ಕಾರಿ ಆಸ್ಪತ್ರೆಗೆ ಆಕೆಯನ್ನು ಕರೆದೊಯ್ಯಲಾಯಿತು. ಆದರೆ ಇಡೀ ದಿನ ಮನವಿ ಮಾಡಿದರೂ ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದರು. ಉತ್ತರಾಖಂಡದ ಪ್ರವಾಸೋದ್ಯಮ ಸಚಿವ ಸತ್ಪಾಲ್ ಮಹಾರಾಜ್ ಅವರನ್ನು ಸಂಪರ್ಕಿಸಿ ಅವರ ನೆರವಿನಿಂದ ರಾಮಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ರಾಖಿ ಅಪಾಯದಿಂದ ಪಾರಾಗಿದ್ದಾಳೆ’ ಎಂದು ಕುಟುಂಬದವರು ವಿವರಿಸಿದ್ದಾರೆ.

ಚಿಕಿತ್ಸೆಗೆ ₹1 ಲಕ್ಷ ನೆರವು ನೀಡಿರುವ ಸಚಿವರು ಇತರೆ ವೆಚ್ಚಗಳನ್ನು ಸಹ ಭರಿಸುವುದಾಗಿ ಭರವಸೆ ನೀಡಿದ್ದಾರೆ.

ಮುಖ್ಯಮಂತ್ರಿ ಪ್ರಶಂಸೆ: ದೂರವಾಣಿ ಮೂಲಕ ಬಾಲಕಿಯ ಕುಟುಂಬದವರ ಜತೆ ಮಾತನಾಡಿದ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್‌ ಅವರು, ಬಾಲಕಿಯ ಧೈರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.