ಸುಕ್ಮಾ (ಛತ್ತೀಸಗಡ): ಛತ್ತೀಸಗಡದ ಬಸ್ತಾರ್ ಪ್ರದೇಶದ ಎರಡು ಜಿಲ್ಲೆಗಳಲ್ಲಿ ದಂಪತಿ ಸೇರಿದಂತೆ 13 ಮಂದಿ ನಕ್ಸಲರು ಶರಣಾಗಿದ್ದಾರೆ.
ಸುಕ್ಮಾ ಜಿಲ್ಲೆಯಲ್ಲಿ ಎಂಟು ನಕ್ಸಲರು ಪೊಲೀಸರು ಹಾಗೂ ಸಿಆರ್‌ಪಿಎಫ್ ಅಧಿಕಾರಿಗಳ ಮುಂದೆ ಶರಣಾದರು. ನೆರೆಯ ದಂತೇವಾಡ ಜಿಲ್ಲೆಯಲ್ಲೂ ಐವರು ಮಾವೋವಾದಿಗಳು ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶರಣಾದ ಎಂಟು ನಕ್ಸಲರ ಪೈಕಿ ವಂಜಮ್ ಭೀಮಾ ಬಂಧನಕ್ಕೆ ಎರಡು ಲಕ್ಷ ರೂ. ಘೋಷಣೆ ಮಾಡಲಾಗಿತ್ತು. ಅವರ ಪತ್ನಿ ಮಾಧವಿ ಕಲಾವತಿ ಕೂಡಾ ಶರಣಾಗಿದ್ದಾರೆ ಎಂದು ಸುಕ್ಮಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಲ್. ಧ್ರುವ್ ತಿಳಿಸಿದ್ದಾರೆ.
ಇತರೆ ಆರು ಮಂದಿಯನ್ನು ರವಿ, ಕೋಸಾ, ದೇವಾ, ಡಿರ್ಡೊ ಗಂಗಾ, ಸೋಡಿ ದುಲಾ ಮತ್ತು ಕವಾಸಿ ದೇವಾ ಎಂದು ಗುರುತಿಸಲಾಗಿದೆ. ಇವರೆಲ್ಲರೂ ನಕ್ಸಲ್ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು ಎಂದು ತಿಳಿಸಲಾಗಿದೆ.
ದೇವಾ ಎಂಬವರು ತಮ್ಮ ಬಳಿಯಿದ್ದ ಬಂದೂಕು ಅನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ನಕ್ಸಲ್ ಚಟುವಟಿಕೆ ತೊರೆದ ಇವರಿಗೆ ತಲಾ ₹10,000ಪ್ರೋತ್ಸಾಹ ಧನ ನೀಡಲಾಗಿದೆ.
ದಂತೇವಾಡದಲ್ಲಿ ಇದುವರೆಗೆ 368 ನಕ್ಸಲರು ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.