ADVERTISEMENT

ಛತ್ತೀಸಗಢದಲ್ಲಿ 31 ನಕ್ಸಲರ ಹತ್ಯೆ; 1,500 ಸಿಬ್ಬಂದಿಯಿಂದ 48 ಗಂಟೆ ಕಾರ್ಯಾಚರಣೆ

ಪಿಟಿಐ
Published 5 ಅಕ್ಟೋಬರ್ 2024, 13:34 IST
Last Updated 5 ಅಕ್ಟೋಬರ್ 2024, 13:34 IST
<div class="paragraphs"><p>ದಾಂತೇವಾಡದಲ್ಲಿ ರಕ್ಷಣಾ ಸಿಬ್ಬಂದಿ</p></div>

ದಾಂತೇವಾಡದಲ್ಲಿ ರಕ್ಷಣಾ ಸಿಬ್ಬಂದಿ

   

ಪಿಟಿಐ ಚಿತ್ರ

ದಾಂತೇವಾಡ: ಛತ್ತೀಸಗಢದ ನಾರಾಯಣಪುರ ಮತ್ತು ದಾಂತೇವಾಡ ಜಿಲ್ಲೆಗಳ ಗಡಿಯಲ್ಲಿನ ಅರಣ್ಯ ಪ್ರದೇಶದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 31 ನಕ್ಸಲರನ್ನು ಶುಕ್ರವಾರ ಹೊಡೆದುರುಳಿಸಲಾಗಿದೆ. ಮಾವೋವಾದಿಗಳ ವಿರುದ್ಧದ ಈ ಕಾರ್ಯಾಚರಣೆಯಲ್ಲಿ ಅಂದಾಜು 1,500 ಸಿಬ್ಬಂದಿ ಪಾಲ್ಗೊಂಡಿದ್ದರು. 48 ಗಂಟೆಗಳ ಈ ಸುದೀರ್ಘ ಕಾರ್ಯಾಚರಣೆಯ ಯಶಸ್ಸಿಗಾಗಿ ಅವರೆಲ್ಲ, 12 ಕಿ.ಮೀ ಕಡಿದಾದ ಬೆಟ್ಟದ ದಾರಿ ಸವೆಸಿ, ನಂತರ 10 ಕಿ.ಮೀ. ಗದ್ದೆ ಬಯಲಿನ ಕೆಸರು ಹಾದಿಯಲ್ಲಿ ಸಾಗಿ ಹೋರಾಡಿದ್ದರು.

ADVERTISEMENT

ಕಾರ್ಯಾಚರಣೆ ಕುರಿತು ಅಧಿಕಾರಿಗಳು ಶನಿವಾರ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ರಾಜ್ಯ ರಚನೆಯಾದ 24 ವರ್ಷಗಳ ನಂತರ ಒಂದೇ ಕಾರ್ಯಾಚರಣೆಯಲ್ಲಿ ಅತಿಹೆಚ್ಚು ಸಂಖ್ಯೆಯ ಮಾವೋವಾದಿಗಳು ಹತ್ಯೆಯಾದದ್ದು ಇದೇ ಮೊದಲು. ಐದು ತಿಂಗಳ ಹಿಂದೆ (ಏಪ್ರಿಲ್‌ 16ರಂದು) ಕಾಂಕೇರ್‌ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಪ್ರಮುಖ ಮಾವೋವಾದಿ ನಾಯಕರೂ ಸೇರಿದಂತೆ 29 ನಕ್ಸಲರು ಬಲಿಯಾಗಿದ್ದರು ಎಂದು ತಿಳಿಸಿದ್ದಾರೆ.

ಬಸ್ತರ್‌ ವಲಯದ ಗವಾಡಿ, ತುಲ್ಥುಲಿ, ನೆಂದೂರ್‌ ಮತ್ತು ರೆಂಗವಯ ಗ್ರಾಮಗಳ ಬೆಟ್ಟಗಳ ಮೇಲೆ ಮಾವೋವಾದಿಗಳು ಅಡಗಿರುವ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಲಾಗಿತ್ತು. ದಾಂತೇವಾಡ ಹಾಗೂ ನಾರಾಯಣಪುರ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ), ವಿಶೇಷ ಕಾರ್ಯ ಪಡೆಯ ಸುಮಾರು 1,500 ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಅಕ್ಟೋಬರ್‌ 3ರಂದು ಆರಂಭವಾಗಿ ಎರಡು ದಿನ ನಡೆದ ಈ ಕಾರ್ಯಾಚರಣೆಯು ರಾಜ್ಯದ ಅತಿದೊಡ್ಡ ಯಶಸ್ವಿ ಕಾರ್ಯಾಚರಣೆಯಾಗಿ ಮುಕ್ತಾಯವಾಯಿತು ಎಂದು ದಾಂತೇವಾಡ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಆರ್.ಕೆ.ಬರ್ಮನ್‌ ಹೇಳಿದ್ದಾರೆ.

ತುಲ್ಥುಲಿ, ನೆಂದೂರ್‌ ಗ್ರಾಮಗಳ ಅರಣ್ಯ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ಶುಕ್ರವಾರ ಮಧ್ಯಾಹ್ನ 1ಕ್ಕೆ ಆರಂಭವಾದ ಗುಂಡಿನ ಚಕಮಕಿ ರಾತ್ರಿ ವೇಳೆಗೆ ಅಂತ್ಯವಾಯಿತು. ಘಟನಾ ಸ್ಥಳದಿಂದ ನಕ್ಸಲರ 28 ಶವಗಳನ್ನು ವಶಕ್ಕೆ ಪಡೆಯಲಾಗಿತ್ತು. ಶನಿವಾರ ಮೂರು ಶವಗಳು ಪತ್ತೆಯಾಗಿವೆ. ಮೃತ ನಕ್ಸಲರೆಲ್ಲರೂ 'ಸಮವಸ್ತ್ರದಲ್ಲೇ' ಇದ್ದರು. ಶವಗಳನ್ನು ಹುಡುಕಲು ಹಾಗೂ ದಾಂತೇವಾಡಕ್ಕೆ ತರಲು ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿ) ನೆರವಾಯಿತು ಎಂದೂ ಮಾಹಿತಿ ನೀಡಿದ್ದಾರೆ.

ದಟ್ಟ ಅರಣ್ಯದ ಹಲವೆಡೆ ನಕ್ಸಲರ ಭಿತ್ತಿಪತ್ರಗಳನ್ನು ಕಾಣಬಹುದಾಗಿದೆ. ನಕ್ಸಲರ ಅಡಗುತಾಣವಾಗಿ ಗುರುತಿಸಿಕೊಂಡಿದ್ದ ಘಟನಾ ಸ್ಥಳಕ್ಕೆ ಹೋಗಲು ಛಿಂದನರ್‌ ಗ್ರಾಮದ ಮೂಲಕ ಇದ್ರಾವತಿ ನದಿಗೆ ನಿರ್ಮಿಸಿರುವ ಒಂದು ಕಿ.ಮೀ.ಉದ್ದದ ಸೇತುವೆ ದಾಟಿ ಹೋಗಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ಇನ್ನಷ್ಟೇ ಗುರುತು ಪತ್ತೆ'

'ನಕ್ಸಲರ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ. ಮೇಲ್ನೋಟಕ್ಕೆ, ಅವರೆಲ್ಲ ಪಿಎಲ್‌ಜಿಎ (ಪೀಪಲ್ಸ್‌ ಲಿಬರೇಷನ್‌ ಗೊರಿಲ್ಲ ಆರ್ಮಿ) ಸಂಘಟನೆಗೆ ಸೇರಿದವರಾಗಿರಬಹುದು. ಆದರೆ, ದಂಡಕಾರಣ್ಯ ವಿಶೇಷ ವಲಯ ಸಮಿತಿ (ಡಿಕೆಎಸ್‌ಝಡ್‌ಸಿ) ಸದಸ್ಯರು ಅಡಗಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಅದರಂತೆ ಕಾರ್ಯಾಚರಣೆ ಆರಂಭಿಸಿದ್ದವು. ಹತ್ಯೆಯಾದವರಲ್ಲಿ ಅವರೂ ಇದ್ದಾರೆಯೇ ಎಂಬುದು ಇನ್ನಷ್ಟೇ ತಿಳಿಯಲಿದೆ' ಎಂದು ಬಸ್ತರ್‌ ವಲಯದ ಐಜಿಪಿ ಸುಂದರ್‌ರಾಜ್‌ ಪಿ. ಹೇಳಿದ್ದಾರೆ.

ಎಕೆ–47 ರೈಫಲ್, ಎಸ್‌ಎಲ್‌ಆರ್‌ (ಸೆಲ್ಫ್‌ ಲೋಡಿಂಗ್‌ ರೈಫಲ್) ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಗುಂಡಿನ ಚಕಮಕಿ ನಡೆದ ಸ್ಥಳದಲ್ಲಿ ದೊರೆತಿವೆ. 

ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರು ರಕ್ಷಣಾ ಪಡೆಗಳ ಕಾರ್ಯವನ್ನು ಶ್ಲಾಘಿಸಿದ್ದಾರೆ. ನಕ್ಸಲರನ್ನು ಇನ್ನಿಲ್ಲವಾಗಿಸಲು ಡಬಲ್‌ ಎಂಜಿನ್‌ (ಕೇಂದ್ರ ಹಾಗೂ ರಾಜ್ಯ) ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.

ಈ ಕಾರ್ಯಾಚರಣೆಯೂ ಸೇರಿದಂತೆ ಬಸ್ತರ್‌ ವಲಯದಲ್ಲಿ ಈ ವರ್ಷ ಭದ್ರತಾ ಸಿಬ್ಬಂದಿಯ ಗುಂಡಿಗೆ ಬಲಿಯಾದ ನಕ್ಸಲರ ಸಂಖ್ಯೆ 188ಕ್ಕೆ ಏರಿಕೆಯಾಗಿದೆ. ಬಸ್ತರ್‌ ವಲಯವು ದಾಂತೇವಾಡ ಮತ್ತು ನಾರಾಯಣಪುರ ಒಳಗೊಂಡಂತೆ ಏಳು ಜಿಲ್ಲೆಗಳನ್ನು ಒಳಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.