ರಾಯಪುರ: ಛತ್ತೀಸಗಢ ವಿಧಾನಸಭೆಗೆ ಹೊಸದಾಗಿ ಆಯ್ಕೆಯಾಗಿರುವ ಶೇ. 80 ರಷ್ಟು ಶಾಸಕರು ಕೋಟ್ಯಧೀಶರು ಎಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್' (ಎಡಿಆರ್) ಹಾಗೂ 'ಛತ್ತೀಸಗಢ ಎಲೆಕ್ಷನ್ ವಾಚ್' ತಿಳಿಸಿವೆ.
90 ಸದಸ್ಯ ಬಲದ ರಾಜ್ಯ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಸಾಧಿಸಿದೆ. ಈ ಪಕ್ಷ 54 ಹಾಗೂ ಕಾಂಗ್ರೆಸ್ 35 ಕಡೆ ಗೆಲುವು ಕಂಡಿವೆ.
ಇಲ್ಲಿನ ಒಟ್ಟು ಶಾಸಕರಲ್ಲಿ 72 ಮಂದಿ ಕೋಟ್ಯಧೀಶರು. ಈ ಪೈಕಿ ಬಿಜೆಪಿಯ 43 ಶಾಸಕರು ಹಾಗೂ ಕಾಂಗ್ರೆಸ್‌ನ 29 ಶಾಸಕರು ಒಂದು ಕೋಟಿಗೂ ಅಧಿಕ ಸಂಪತ್ತು ಹೊಂದಿದ್ದಾರೆ.
ಸಿರಿವಂತರ ಲಿಸ್ಟ್‌ನಲ್ಲಿ ಬೊಹ್ರಾಗೆ ಅಗ್ರಸ್ಥಾನ
ಇದೇ ಮೊದಲ ಬಾರಿಗೆ (ಪಂಡಾರಿಯಾ ಕ್ಷೇತ್ರದಿಂದ) ಶಾಸಕರಾಗಿ ಆಯ್ಕೆಯಾಗಿರುವ ಭವನ್ ಬೊಹ್ರಾ ಅವರು ₹ 33.86 ಕೋಟಿ ಆಸ್ತಿ ಘೋಷಿಸಿಕೊಂಡಿದ್ದಾರೆ. ಅದರೊಂದಿಗೆ ಅವರು ಸಿರಿವಂತ ಶಾಸಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ₹ 33.38 ಕೋಟಿ ಮೊತ್ತದ ಸಂಪತ್ತು ಹೊಂದಿರುವ ನಿಕಟಪೂರ್ವ ಮುಖ್ಯಮಂತ್ರಿ ಭೂಪೇಶ್ ಬಘೇಲ್ (ಪಟಾನ್ ಕ್ಷೇತ್ರದ ಶಾಸಕ) ನಂತರದ ಸ್ಥಾನದಲ್ಲಿದ್ದಾರೆ. ಬಿಲಾಸ್‌ಪುರ ಕ್ಷೇತ್ರದ ಬಿಜೆಪಿ ಶಾಸಕ ಅಮರ್ ಅಗರ್ವಾಲ್ ಅವರು ₹ 27 ಕೋಟಿ ಮೊತ್ತದ ಆಸ್ತಿ ಹೊಂದಿದ್ದು, ಮೂರನೇ ಸ್ಥಾನದಲ್ಲಿದ್ದಾರೆ.
ಚಂದ್ರಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಮ್‌ಕುಮಾರ್ ಯಾದವ್ ಹಾಗೂ ಸೀತಾಪುರ ಕ್ಷೇತ್ರದ ಬಿಜೆಪಿ ಶಾಸಕ ರಾಮ್‌ಕುಮಾರ್ ಟೊಪ್ಪೊ ಕಡಿಮೆ ಆಸ್ತಿ ಹೊಂದಿರುವ ಶಾಸಕರೆನಿಸಿದ್ದಾರೆ. ಅವರೇ ಘೋಷಿಸಿಕೊಂಡಿರುವ ಮಾಹಿತಿ ಪ್ರಕಾರ, ಯಾದವ್ ₹ 10 ಲಕ್ಷ ಮತ್ತು ಟೊಪ್ಪೊ ₹ 13.12 ಲಕ್ಷ ಮೌಲ್ಯದ ಆಸ್ತಿ ಹೊಂದಿದ್ದಾರೆ.
ಒಬ್ಬ ಶಾಸಕ ಅನಕ್ಷರಸ್ಥ
5ರಿಂದ12ನೇ ತರಗತಿ ವರೆಗಿನ ವಿದ್ಯಾರ್ಹತೆ ಹೊಂದಿರುವುದಾಗಿ 33 ಶಾಸಕರು ಮಾಹಿತಿ ನೀಡಿದ್ದಾರೆ. ಉಳಿದಂತೆ, 54 ಮಂದಿ ಪದವಿ ಅಥವಾ ಸ್ಥಾತಕೋತ್ತರ ಪದವಿ ಪಡೆದಿದ್ದು, ಇಬ್ಬರು ಡಿಪ್ಲೊಮಾ ವ್ಯಾಸಂಗ ಮಾಡಿದ್ದಾರೆ. ಒಬ್ಬ ಶಾಸಕ ತಾವು ಅನಕ್ಷರಸ್ಥ ಎಂದು ಘೋಷಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.