ಬಿಲಾಸ್‌ಪುರ: ಛತ್ತೀಸ್‌ಗಢದ ಜಂಜಗಿರ್ ಚಂಪ ಜಿಲ್ಲೆಯಲ್ಲಿ ಕೊಳವೆಬಾವಿಯಲ್ಲಿ 5 ದಿನಗಳಿಂದ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದ 11 ವರ್ಷದ ರಾಹುಲ್ ಸಾಹು ಎಂಬ ಬಾಲಕನನ್ನು 100 ಗಂಟೆಗಳ ಸುದೀರ್ಘ ಕಾರ್ಯಾಚರಣೆ ಮೂಲಕ ರಕ್ಷಣೆ ಮಾಡಲಾಗಿದೆ. ಸದ್ಯ ಆ ಮಗುವಿನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಕೊಳವೆ ಬಾವಿಯಲ್ಲಿ ಒಳಗೆ ಹಾವು ಮತ್ತು ಚೇಳುಗಳು ಇರುವುದು ಕಂಡಿದ್ದು, ಅವು ಬಾಲಕನಿಗೆ ಹಾನಿ ಮಾಡುತ್ತವೆ ಎಂಬ ಭೀತಿಯಿತ್ತು. ಆದರೆ, ಅವುಗಳಿಂದಲೂ ಯಾವುದೇ ಸಮಸ್ಯೆಯಾಗಿಲ್ಲ. ಬಾಲಕ ಸಿಲುಕಿದ್ದ ಕೊಳವೆ ಬಾವಿಗೆ ಪರ್ಯಾಯವಾಗಿ ಗುಂಡಿಯನ್ನು ತೋಡಿ, ಅದನ್ನು ಸುರಂಗವಾಗಿ ಬಳಸಿಕೊಂಡು, ಮಂಗಳವಾರ ರಾತ್ರಿ 12 ಗಂಟೆ ಸುಮಾರಿಗೆ ರಕ್ಷಣೆ ಮಾಡಲಾಯಿತು ಎಂದು ರಾಷ್ಟ್ರೀಯ ವಿಪತ್ತು ನಿಗ್ರಹದ ಪಡೆಯ ಅಧಿಕಾರಿಯೊಬ್ಬರು ತಿಳಿಸಿದರು.
ರಾಹುಲ್ ಮಾನಸಿಕ ಅಸ್ವಸ್ಥ. ಆತ ಸೈಕಲ್ ಓಡಿಸುವುದು, ಸ್ವಿಮ್ಮಿಂಗ್ ಮತ್ತು ಸಂಗೀತದ ಸಾಧನಗಳನ್ನು ಬಳಸಲು ಕಲಿತಿದ್ದ. ಕಳೆದ 5 ದಿನಗಳ ಕಾಲ ಕೊಳವೆ ಬಾವಿಯಲ್ಲಿ ಸಿಲುಕಿಕೊಂಡಿದ್ದರೂ, ಆತ ಸುರಕ್ಷಿತವಾಗಿರುವುದಕ್ಕೆ ಆತನ ಮನೋಬಲವೇ ಕಾರಣವಾಗಿದೆ ಎಂದು ರಾಹುಲ್ ಅವರ ತಂದೆ ರಾಮ್ ಕುಮಾರ್ ಸಾಹು ತಿಳಿಸಿದರು.
ಬಾಲಕನ ಆರೋಗ್ಯ ಸ್ಥಿತಿ ಸ್ಥಿರ:
ಬುಧವಾರ ಈ ಕುರಿತು ಮಾತನಾಡಿದ ಅಪೊಲೊ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ. ಸುಶೀಲ್ ಕುಮಾರ್ ಅವರು, ‘ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಗುವು ಹಲವು ಗಂಟೆಗಳ ಕಾಲ ಅಲ್ಲೇ ಉಳಿದಿದ್ದ ಕಾರಣ ಮಗುವಿನ ದೇಹದಲ್ಲಿ ಬ್ಯಾಕ್ಟೀರಿಯಾಗಳು ಸೇರಿಕೊಂಡಿದ್ದು, ಅನಾರೋಗ್ಯಕ್ಕೆ ಕಾರಣವಾಗಿದೆ. ರಕ್ತದ ಪರೀಕ್ಷೆಯಲ್ಲೂ ಇದು ದೃಢಪಟ್ಟಿದೆ. ಮಗುವಿನ ಆರೋಗ್ಯಕ್ಕಾಗಿ ಔಷಧಗಳನ್ನು ನೀಡಲಾಗುತ್ತಿದೆ’ ಎಂದು ಹೇಳಿದರು.
ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ ಬಾಲಕನ ಚಿತ್ರವನ್ನು ಟ್ವೀಟ್ ಮಾಡಿರುವ ಛತ್ತೀಸ್‌ಗಢ ಮುಖ್ಯಮಂತ್ರಿ ಕಾರ್ಯಾಲಯವು, ಬಾಲಕನ ಧೈರ್ಯವನ್ನು ಕೊಂಡಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.