ನವದೆಹಲಿ: ಲಾಕ್‌ಡೌನ್ ಸಮಯದಲ್ಲಿ ರಸ್ತೆಗಿಳಿದ ಯುವಕನ ಕಪಾಳಕ್ಕೆ ಹೊಡೆದ ಸೂರಜ್‌ಪುರ್ ಜಿಲ್ಲಾಧಿಕಾರಿಯನ್ನು ಸ್ಥಾನದಿಂದ ಬಿಡುಗಡೆ ಮಾಡುವಂತೆ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಭಾನುವಾರ ಸೂಚಿಸಿದ್ದಾರೆ.
ಕೋವಿಡ್–19 ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಯುವಕನೊಬ್ಬನಿಗೆ ಹಿರಿಯ ಜಿಲ್ಲಾಧಿಕಾರಿ ರಣಬೀರ್ ಶರ್ಮಾ ಕಪಾಳಕ್ಕೆ ಹೊಡೆದಿದ್ದರು. ಅದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿದೆ.
' ಈ ಘಟನೆಯು ದುರದೃಷ್ಟಕರ ಮತ್ತು ಖಂಡನೀಯವಾದುದು. ಛತ್ತೀಸ್‌ಗಢದಲ್ಲಿ ಇಂಥದ್ದನ್ನು ಸಹಿಸಲು ಸಾಧ್ಯವಿಲ್ಲ. ತಕ್ಷಣದಿಂದಲೇ ಜಿಲ್ಲಾಧಿಕಾರಿ ರಣಬೀರ್ ಅವರನ್ನು ಸ್ಥಾನದಿಂದ ತೆಗೆದುಹಾಕುವಂತೆ' ಮುಖ್ಯಮಂತ್ರಿ ಭೂಪೇಶ್ ಬಘೇಲ್ ಸೂಚಿಸಿರುವುದಾಗಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಸೂರಜ್‌ಪುರ್ ಜಿಲ್ಲೆಗೆ ಐಎಎಸ್ ಅಧಿಕಾರಿ ಗೌರವ್ ಕುಮಾರ್ ಸಿಂಗ್ ಅವರನ್ನು ನೂತನ ಜಿಲ್ಲಾಧಿಕಾರಿಯಾಗಿ ನೇಮಿಸಿರುವುದಾಗಿ ಛತ್ತೀಸ್‌ಗಢ ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ.
ವ್ಯಕ್ತಿಯೊಬ್ಬನ ಕಪಾಳಕ್ಕೆ ಹೊಡೆಯುವ ಜೊತೆಗೆ ಜೋರು ಮಾತುಗಳಲ್ಲಿ ಗದರಿಸಿ, ಆತನ ಮೊಬೈಲ್‌ನ್ನು ನೆಲಕ್ಕೆ ಜೋರಾಗಿ ಎಸೆದಿರುವುದನ್ನು ವೈರಲ್ ಆಗಿರುವುದನ್ನು ವಿಡಿಯೊದಲ್ಲಿ ಕಾಣಬಹುದು.
ನಾಗರಿಕನೊಬ್ಬನ ಮೇಲೆ ದೈಹಿಕ ಹಲ್ಲೆ ನಡೆಸಿರುವುದರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಟೀಕೆ ವ್ಯಕ್ತವಾದ ಬೆನ್ನಲ್ಲೇ ಜಿಲ್ಲಾಧಿಕಾರಿ ರಣಬೀರ್ ಶರ್ಮಾ ಕ್ಷಮೆ ಕೇಳಿದ್ದಾರೆ.
'ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ ಲಾಕ್‌ಡೌನ್ ಸಮಯದಲ್ಲಿ ಹೊರಗೆ ಬಂದಿದ್ದ ವ್ಯಕ್ತಿಗೆ ನಾನು ಹೊಡೆದಿರುವುದು ದಾಖಲಾಗಿದೆ. ಇವತ್ತಿನ ನನ್ನ ನಡೆತೆಗೆ ಪ್ರಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ವಿಡಿಯೊದಲ್ಲಿ ಕಾಣುವ ವ್ಯಕ್ತಿಗೆ ಅಗೌರವ ಕೊಡುವ ಅಥವಾ ಕೀಳಾಗಿ ಕಾಣುವ ಯಾವುದೇ ಉದ್ದೇಶ ಇರಲಿಲ್ಲ' ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.